ನವದೆಹಲಿ: ಭಾರತದಲ್ಲಿರುವ ಲಷ್ಕರ್–ಎ–ತಯ್ಯಬಾ (ಎಲ್‌ಇಟಿ) ಉಗ್ರರಿಗೆ ಹಣಕಾಸು ಒದಗಿಸುತ್ತಿದ್ದ ಚಾಣಾಕ್ಷ ಮೊಹಮದ್ ಕಮ್ರನ್‌ನ ಗುರುತು ಪತ್ತೆಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೊನೆಗೂ ಯಶಸ್ವಿಯಾಗಿದೆ. ಇದು ಸಾಧ್ಯವಾಗಿದ್ದು ದುಬೈನ ಎಮಿರೇಟ್ಸ್ ಏರ್‌ಲೈನ್ಸ್‌ನ ವೈಮಾನಿಕ ಸಂಚಾರ ಮಾಹಿತಿ ವಿಚಾರಣೆ ಸೇವೆಯಿಂದ (ಐವಿಆರ್‌ಎಸ್– ಇಂಟರ‍್ಯಾಕ್ಟೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಂ– ವೈಮಾನಿಕ ಮಾಹಿತಿ ವಿಚಾರಣೆ) ಎಂಬುದು ವಿಶೇಷ. ಭಾರತದ ತನಿಖಾ ಸಂಸ್ಥೆಯೊಂದು ಧ್ವನಿ ವಿಚಾರಣೆ ವ್ಯವಸ್ಥೆಯನ್ನು ಉಗ್ರನ ವಿರುದ್ಧ ಸಾಕ್ಷ್ಯವಾಗಿ ಬಳಸಿಕೊಂಡಿದ್ದು ಇದೇ ಮೊದಲು.
ಎಲ್‌ಇಟಿ ಉಗ್ರರಿಗೆ ಹಣಕಾಸು ಒದಗಿಸುವ ಫಲಾಹ್–ಇ–ಇನ್‌ಸಾನಿಯಾತ್ (ಎಫ್‌ಐಎಫ್) ಪ್ರತಿಷ್ಠಾನಕ್ಕಾಗಿ ಅಡಗುತಾಣಗಳು ಮತ್ತು ಪೂರಕ ಸೌಕರ್ಯಗಳನ್ನು ಒದಗಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ದುಬೈ ಮೂಲದ ಕಮ್ರಾನ್, ದೆಹಲಿ ಮೂಲದ ಮೊಹಮದ್ ಸಲ್ಮಾನ್ ಮತ್ತು ರಾಜಸ್ಥಾನ ಮೂಲಕ ಮೊಹಮದ್ ಸಲೀಂ ಅವರ ಮೇಲೆ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ನೆಪ ಮುಂದಿರಿಸಿಕೊಂಡು ಅಡಗುದಾಣಗಳನ್ನು ಸಿದ್ಧಪಡಿಸಲಾಗಿತ್ತು. ದುಬೈನಿಂದ ಭಾರೀ ಮೊತ್ತದ ಹಣ ಮತ್ತು ಅದನ್ನು ಹೇಗೆ ಬಳಸಬೇಕು ಎನ್ನುವ ಸೂಚನೆಗಳನ್ನು ಸ್ವೀಕರಿಸುತ್ತಿದ್ದ ಸಲ್ಮಾನ್ ಮತ್ತು ಸಲೀಂ ಅವರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.
ಈ ಚಾರ್ಜ್‌ಶೀಟ್‌ನ ಮಾಹಿತಿ ಆಧರಿಸಿ, ಕಾರ್ಯಾಚರಣೆಯ ಹಲವು ಕುತೂಹಲಕಾರಿ ಮಾಹಿತಿಯನ್ನು ಒಳಗೊಂಡಿರುವ ವರದಿಯನ್ನುಸೋಮವಾರ ‘ಹಿಂದೂಸ್ತಾನ್ ಟೈಮ್ಸ್’ ಜಾಲತಾಣ ಪ್ರಕಟಿಸಿದೆ.
ಜನವರಿಯಲ್ಲಿ ಗುಜರಾತ್‌ನ ವಲ್ಸದ್‌ಪಟ್ಟಣದಲ್ಲಿರುವ ಕಮ್ರಾನ್ ಸಹಚರ ಆರೀಫ್ ಗುಲಾಂಬಶೀರ್ ಧರ್ಮಪುರಿಯಾ ನಿವಾಸದ ಮೇಲೆ ದಾಳಿ ಮಾಡಿದ್ದ ಸಂದರ್ಭ ವಶಪಡಿಸಿಕೊಂಡಿದ್ದ ಸಿಡಿಯಲ್ಲಿ ಹಲವು ದೂರವಾಣಿ ಮಾತುಕತೆಯ ಮಾದರಿಗಳು ಸಿಕ್ಕಿದ್ದವು. ಇದರಲ್ಲಿ ಕಮ್ರಾನ್, ಮೆಹಮೂದ್ ಅವರ ಧ್ವನಿಗಳು ರೆಕಾರ್ಡ್ ಆಗಿದ್ದವು. ಈ ಧ್ವನಿಯನ್ನು ಖಚಿತಪಡಿಸಿಕೊಳ್ಳಲು ಪೂರಕ ಸಾಕ್ಷ್ಯಗಳಿಗಾಗಿ ಎನ್‌ಐಎ ಹುಡುಕಾಡುತ್ತಿದತ್ತು.
ಮುಂಬೈ ಮೇಲೆ ಉಗ್ರರ ದಾಳಿಯ ಸಂಚು ರೂಪಿಸಿದ ಎಲ್‌ಇಟಿ ಮುಖ್ಯಸ್ಥ ಹಫೀಜ್ ಮೊಹಮದ್ ಸಯೀದ್, ಎಫ್‌ಐಎಫ್ ಉಪ ಮುಖ್ಯಸ್ಥ ಶಹೀದ್ ಮೆಹಮೂದ್ ಜತೆಗೂಡಿ ಕಮ್ರಾನ್‌ಭಾರತಕ್ಕೆ ಭಾರೀ ಮೊತ್ತದ ಹಣ ಕಳುಹಿಸುತ್ತಿದ್ದ. ತನಿಖೆ ವೇಳೆ ಸಿಕ್ಕ ದಾಖಲೆಗಳ ಜೊತೆಗೆ ಹೋಲಿಸಲು ತನಿಖಾಧಿಕಾರಿಗಳಿಗೆ ಅವರ ಧ್ವನಿಗಳ ಮಾದರಿ ಬೇಕಿತ್ತು. ಇದೇ ಹೊತ್ತಿಗೆ ದುಬೈನಲ್ಲಿರುವ ಭಾರತದ ಗುಪ್ತಚರ ಏಜೆಂಟರು, ಕಮ್ರಾನ್ ಈಚೆಗಷ್ಟೇ ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ ಬುಕಿಂಗ್ ಮಾಡಿರುವ ಮಾಹಿತಿ ನೀಡಿದವು. ತಕ್ಷಣ ಕಾರ್ಯಪ್ರವೃತ್ತರಾದ ಎನ್‌ಐಎ ಅಧಿಕಾರಿಗಳು ದುಬೈನಲ್ಲಿರುವ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯ ಸ್ಥಳೀಯ ಕಚೇರಿಗೆ ಧಾವಿಸಿ, ಧ್ವನಿಯ ಮಾದರಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಮತ್ತೋರ್ವ ಉಗ್ರ ಮೆಹಮೂದ್‌ನ ಧ್ವನಿಯ ಮಾದರಿಯನ್ನು ಹೋಲಿಸಿ, ದೃಢಪಡಿಸಿಕೊಳ್ಳಲು ಯುಟ್ಯೂಬ್‌ನಲ್ಲಿದ್ದ ವಿಡಿಯೊ ಎನ್‌ಐಎ ನೆರವಿಗೆ ಬಂದಿದೆ. ಪಾಕ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೆಹಮೂದ್‌ನ ಧ್ವನಿಯನ್ನು ದಾಳಿ ವೇಳೆ ಸಿಕ್ಕ ಸಿಡಿಯಲ್ಲಿದ್ದ ಧ್ವನಿಯೊಂದಿಗೆ ಹೋಲಿಸಿ ನೋಡಿದ ಎನ್‌ಐಎ ಮೆಹಮೂದ್‌ನ ಗುರುತು ಪತ್ತೆ ಹಚ್ಚಿ, ಅದು ಆತನೇ ಎಂದು ಖಚಿತಪಡಿಸಿಕೊಂಡಿದೆ.
ವಿಧಿವಿಜ್ಞಾನ (ಫೊರೆನ್ಸಿಕ್) ಪ್ರಯೋಗಾಲಯದ ತಜ್ಞರು ಸಿಡಿಯಲ್ಲಿರುವ ಕಮ್ರಾನ್ ಧ್ವನಿ ಮತ್ತು ಎಮಿರೇಟ್ಸ್ ಐವಿಆರ್ ರೆಕಾರ್ಡಿಂಗ್, ಮೆಹಮೂದ್‌ನ ಧ್ವನಿ ಮತ್ತು ಯುಟ್ಯೂಬ್‌ನಲ್ಲಿರುವ ಸಂದರ್ಶನದ ಧ್ವನಿಯೊಂದಿಗೆ ಹೊಂದುತ್ತದೆ ಎಂದು ಹೇಳಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ನಮೂದಿಸಲಾಗಿದೆ.
ಎಫ್‌ಐಎಫ್ ಪಾಕಿಸ್ತಾನದಲ್ಲಿ ದತ್ತಿ ಸಂಸ್ಥೆಯೆಂದು ನೋಂದಣಿಯಾಗಿದೆ. ಈ ಸಂಸ್ಥೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿದೆ. ಆದರೂ ವಿವಿಧ ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಎಫ್‌ಐಎಫ್ ನೈಸರ್ಗಿಕ ವಿಕೋಪಗಳ ಪರಿಹಾರದ ನೆಪವೊಡ್ಡಿ ಹಣ ಸಂಗ್ರಹಿಸಿ, ಅದನ್ನು ಲಷ್ಕರ್ ಉಗ್ರರಿಗೆ ಒದಗಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.