ಭಾನುವಾರ, ಮೇ 16, 2021
22 °C

ಸ್ಥಳೀಯ ಸಮಸ್ಯೆಗಳ ಕಡೆಗಣೆಯಿಂದ ಸೋಲು

ಅಭಯ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಅಯೋಧ್ಯೆ ರಾಮ ಮಂದಿರ, 370ನೇ ವಿಧಿ, ತ್ರಿವಳಿ ತಲಾಖ್, ರಾಷ್ಟ್ರೀಯ ಪೌರತ್ವ ನೋಂದಣಿ, ಪೌರತ್ವ (ತಿದ್ದುಪಡಿ) ಕಾಯ್ದೆ... ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಭಾಷಣಗಳಲ್ಲಿ ಕೇಳಿಬರುತ್ತಿದ್ದ ವಿಷಯಗಳಿವು.

ಆದರೆ ಉದ್ಯೋಗ ನಷ್ಟ, ನಿರುದ್ಯೋಗ, ಗುಂಪು ಹತ್ಯೆ ಪ್ರಕರಣಗಳು, ಭೂ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪಗಳು ಮತದಾರರ ಮಟ್ಟದಲ್ಲಿ ಚರ್ಚೆಯ ವಿಷಯಗಳಾಗಿದ್ದವು. ಇದನ್ನು ಅರಿತುಕೊಳ್ಳದೆ, ಕೇವಲ ಭಾವನಾತ್ಮಕ ವಿಷಯಗಳತ್ತ ಗಮನ ಹರಿಸಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಉದ್ಯೋಗ ನಷ್ಟ ಮತ್ತು ನಿರುದ್ಯೋಗ ಸಮಸ್ಯೆ ಬಿಜೆಪಿ ಸೋಲಿಗೆ ಮೊದಲ ಕಾರಣ.

‘370ನೇ ವಿಧಿ ಇಟ್ಟುಕೊಂಡು ನಾವು ಮಾಡುವುದೇನು? ಅದರಿಂದ ನಮಗೆ ನೌಕರಿ ಸಿಗುತ್ತದಾ? ಜಾರ್ಖಂಡ್‌ನಲ್ಲಿ 700 ಕಾರ್ಖಾನೆಗಳು ಬಾಗಿಲು ಹಾಕಿರುವಾಗ ಎಲ್ಲೋ ಮಂದಿರ ನಿರ್ಮಿಸುವುದರಿಂದ ನಮಗೇನು ಲಾಭ’ ಮತದಾನದ ವೇಳೆ ‘ಪ್ರಜಾವಾಣಿ’ ಪ್ರತಿನಿಧಿಗೆ ಮತದಾರರೊಬ್ಬರು ಎಸೆದಿದ್ದ ಪ್ರಶ್ನೆಗಳಿವು. ಬಿಜೆಪಿ ವಿರುದ್ಧದ ಜನರ ಸಿಟ್ಟು ಚುನಾವಣೆ ಘೋಷಣೆಗೂ ಮುನ್ನವೇ ಸ್ಥೂಲವಾಗಿ ಕಾಣುತ್ತಿತ್ತು. ಆದರೆ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಬಿಜೆಪಿ ವಿಫಲವಾಯಿತು.

ರಾಜ್ಯದ ಜನಸಂಖ್ಯೆಯಲ್ಲಿ ಶೇ 28ರಷ್ಟು ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಸಮುದಾಯಗಳ ಜನರೇ ಇರುವ ಜಾರ್ಖಂಡ್‌ಗೆ ಬೇರೆ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ಬಿಜೆಪಿ ಮಾಡಿದ ಎರಡನೇ ಎಡವಟ್ಟು. ಬಿಜೆಪಿ ಮುಖ್ಯಮಂತ್ರಿ ರಘುವರ ದಾಸ್ ಅವರು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರು. ದಾಸ್ ಅವರ ಸರ್ಕಾರವು ಬುಡಕಟ್ಟು ಜನರ ಹಕ್ಕುಗಳಿಗೆ ಮಾರಕವಾಗುವ ನೀತಿಗಳನ್ನು ಜಾರಿಗೆ ತಂದರು. ಇದು ಬುಡಕಟ್ಟು ಮತ್ತು ಬುಡಕಟ್ಟುಯೇತರ ಜನರ ನಡುವೆ ಸಂಘರ್ಷಕ್ಕೆ ಕಾರಣವಾಯಿತು.

2016ರಲ್ಲಿ ದಾಸ್ ಸರ್ಕಾರವು ಛೋಟಾನಾಗಪುರ ಮತ್ತು ಸಂತಾಲ್ ಟೆನೆನ್ಸಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಇರಿಸಿತು. ಬುಡಕಟ್ಟು ಪ್ರದೇಶದ ಜಮೀನನ್ನು ರಸ್ತೆ, ಕಾಲುವೆ, ಆಸ್ಪತ್ರೆ ಸೇರಿದಂರೆ ರಾಜ್ಯ ಸರ್ಕಾರದ ಯೋಜನೆಗಳಿಗೆ ಬಳಸುವ ಪ್ರಸ್ತಾವ ಈ ತಿದ್ದುಪಡಿಯಲ್ಲಿತ್ತು. ಸಂಬಂಧಿತ ತಿದ್ದುಪಡಿ ಮಸೂದೆಗಳಿಗೆ ವಿದಾನಸಭೆಯ ಅಂಗೀಕಾರವೂ ದೊರೆಯಿತು. ರಾಜ್ಯಪಾಲರು ಇವನ್ನು ತಿರಸ್ಕರಿಸಿದರು. ಆದರೆ, ಈ ಬದಲಾವಣೆಯು ಬುಡಕಟ್ಟು ಸಮುದಾಯದ ಜನರನ್ನು ಕೆರಳಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಬುಡಕಟ್ಟು ಜನರಲ್ಲಿ ಆವರಿಸಿತ್ತು. ಬುಡಕಟ್ಟು ಜನರ ಈ ಕಳವಳವನ್ನು ಚುನಾವಣೆವರೆಗೂ ಕಾಯ್ದುಕೊಳ್ಳುವಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ಸಫಲವಾದವು.

ರಾಜ್ಯ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪವನ್ನು ಕಡೆಗಣಿಸಿದ್ದು ಬಿಜೆಪಿ ಸೋಲಿಗೆ ಮತ್ತೊಂದು ಪ್ರಮುಖ ಕಾರಣ. ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸರಯೂ ರಾಯ್ ಅವರು ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿದ್ದರು. ಇದನ್ನು ಮೋದಿ ಕಡೆಗಣಿಸಿದರು. ಈ ಚುನಾವಣೆಯಲ್ಲಿ ರಾಯ್ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು.

‘ಸಾರ್ವಜನಿಕ ಜೀವನದಲ್ಲಿ ಯಾವುದೇ ಕಳಂಕ ಹೊತ್ತಿರದ ರಾಯ್ ಅವರನ್ನು ಕಡೆಗಣಿಸಿದ್ದು ಬಿಜೆಪಿಗೆ ಮಾರಕವಾಯಿತು. ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯ ನಿರ್ಧಾರವು ಜನರಿಗೆ ತಪ್ಪು ಸಂದೇಶ ರವಾನಿಸಿತು’ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಸ್ಥಳೀಯ ವರದಿಗಾರರೊಬ್ಬರು ವಿಶ್ಲೇಷಿಸಿದ್ದಾರೆ.

ರಘುವರ ದಾಸ್ ಅವರ ನಡೆ–ನುಡಿ ಹೆಚ್ಚು ಹಮ್ಮಿನಿಂದ ಕೂಡಿತ್ತು. ತಮ್ಮ ಮತ್ತು ತಮ್ಮ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅವರು ಸ್ಪಷ್ಟನೆ ನೀಡುವ ಗೋಜಿಗೆ ಹೋಗಲೇ ಇಲ್ಲ. ತಮ್ಮ ಸಹೋದ್ಯೋಗಿಗಳು ಮತ್ತು ವಿಪಕ್ಷಗಳಿಂದ ಬಂದ ಸಲಹೆಗಳನ್ನು ಕಡೆಗಣಿಸಿದರು. ಇವೆಲ್ಲವೂ ದಾಸ್ ಅವರ ವ್ಯಕ್ತಿತ್ವದ ಬಗ್ಗೆ ಜನರಲ್ಲಿ ತಿರಸ್ಕಾರದ ಭಾವನೆ ಮೂಡಲು ಕಾರಣವಾದವು. ಬಿಜೆಪಿ ಸೋಲಿಗೆ ಇದೂ ಒಂದು ಕಾರಣ ಎನ್ನಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು