ಶುಕ್ರವಾರ, ಡಿಸೆಂಬರ್ 6, 2019
20 °C

ಮಹಾತ್ಮ ಗಾಂಧೀಜಿ ಬದುಕಿನ ಅಪರೂಪದ 30 ಫಿಲ್ಮ್‌ ರೀಲ್‌ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಸಂಬಂಧಿಸಿದ, ದಿನಾಂಕಗಳು ಗೊತ್ತಿರದ ಅಪರೂಪದ 30 ಫಿಲ್ಮ್‌ ರೀಲ್‌ಗಳನ್ನು ಪುಣೆ ಮೂಲದ ‘ನ್ಯಾಷನಲ್‌ ಫಿಲ್ಮ್‌ ಆರ್ಕೈವ್ ಆಫ್‌ ಇಂಡಿಯ(ಎನ್‌ಎಫ್‌ಎಐ) ಪತ್ತೆ ಮಾಡಿದೆ. ಈ ಫಿಲ್ಮ್‌ಗಳ ಅವಧಿ ಒಟ್ಟು ಆರು ತಾಸುಗಳದ್ದಾಗಿದೆ.

35 ಎಂಎಂನ ಸೆಲ್ಯುಲಾಯ್ಡ್‌ ದೃಶ್ಯಗಳು, ದಿನಾಂಕ ಗೊತ್ತಿರದ, ‘ಟೈಟಲ್‌ ಕಾರ್ಡ್‌’ ಹೊಂದಿರುವ ಸ್ಥಿರ ಚಿತ್ರಗಳನ್ನು ಆ ಕಾಲದ ಪ್ರಮುಖ ಚಲನಚಿತ್ರ ಸ್ಟುಡಿಯೊಗಳಾದ ಪ್ಯಾರಾಮೌಂಟ್‌, ಪ್ಯಾಥೆ, ವಾರ್ನರ್‌, ಯೂನಿವರ್ಸಲ್‌, ಬ್ರಿಟಿಷ್‌ ಮೂವಿಟೋನ್‌, ವಾಡಿಯಾ ಮೂವಿಟೋನ್‌ ಇತರೆಡೆಗಳಿಂದ ಸಂಗ್ರಹಿಸಲಾಗಿದೆ.


ಎನ್‌ಎಫ್‌ಎಐ ಪತ್ತೆ ಮಾಡಿರುವ ಮಹಾತ್ಮ ಗಾಂಧೀಜಿಯ ಅಪರೂಪದ ಚಿತ್ರ. ಚಿತ್ರ: ಎನ್‌ಎಫ್‌ಎಐ ಟ್ವೀಟ್‌

'ಗಾಂಧೀಜಿಯ 150ನೇ ಜನ್ಮದಿನದ ಸಂದರ್ಭದಲ್ಲಿ ಫಿಲ್ಮ್‌ ಆರ್ಕೈವ್‌ನ ಈ ಆವಿಷ್ಕಾರ ಬಹಳಷ್ಟು ಮೆಚ್ಚುಗೆ ಗಳಿಸಿದೆ. ಕೆಲವು ಅಪರೂಪದ ತುಣುಕುಗಳನ್ನು ಈ ಸಂಗ್ರಹ ಹೊಂದಿದೆ. ಇದರಲ್ಲಿನ ಕೆಲವು ದೃಶ್ಯ ತುಣುಕುಗಳನ್ನು ಈಗ ಲಭ್ಯವಿರುವ ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರಗಳಲ್ಲಿ ಕಾಣಬಹುದು. ಇನ್ನೂ ಕೆಲವು ದೃಶ್ಯಗಳು ಅಪರೂಪದ್ದಾಗಿವೆ’ ಎನ್ನುತ್ತಾರೆ ಎನ್‌ಎಫ್‌ಎಐನ ನಿರ್ದೇಶಕ ಪ್ರಕಾಶ್‌ ಮ್ಯಾಗ್ಡಮ್.

ಶೋಧದ ಪ್ರಮುಖ ಅಂಶಗಳು

ಗಾಂಧೀಜಿ ಚಿತಾಭಸ್ಮವನ್ನು ಮದ್ರಾಸ್‌ನಿಂದ ರಾಮೇಶ್ವರಕ್ಕೆ ರೈಲಿನಲ್ಲಿ ಸಾಗಿಸುವ ದೃಶ್ಯಗಳಿರುವ ವಿಡಿಯೊ ಈ ಸಂಗ್ರಹದಲ್ಲಿಯೇ ಅತ್ಯಪರೂಪದ್ದು ಎನಿಸಿದೆ. ಮಹಾತ್ಮನ ಚಿತಾಭಸ್ಮವನ್ನು ಎದುರುಗೊಳ್ಳುವ ಧಾವಂತದಲ್ಲಿ ಜನರು ರೈಲಿನೊಂದಿಗೆ ಹೆಜ್ಜೆ ಹಾಕುತ್ತಿರುವುದು, ಅಲ್ಲಲ್ಲಿ ಜಂಕ್ಷನ್‌ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗುಂಪುಗೂಡಿರುವುದು ಈ ದೃಶ್ಯಗಳಲ್ಲಿದೆ. ‌

ರೈಲು ತಮಿಳುನಾಡಿನ ಚೆಟ್ಟಿನಾಡು, ಶಿವಗಂಗಾ, ಚಿದಂಬರ, ಮನಮಧುರೈ, ರಾಮ್ನಾಡ್‌, ಪುದುಕೊಟ್ಟೈ ಜಂಕ್ಷನ್‌ಗಳನ್ನು ಹಾದು ಹೋಗುವ ದೃಶ್ಯಗಳು 30 ನಿಮಿಷಗಳ ಈ ವಿಡಿಯೊದಲ್ಲಿ ದಾಖಲಾಗಿದೆ.  

ದಕ್ಷಿಣ ಆಫ್ರಿಕಾದ ಡರ್ಬನ್‌ನ ಪೊನಿಕ್ಸ್‌ನಲ್ಲಿ ಗುಜರಾತಿ–ಇಂಗ್ಲಿಷ್ ಸಾಪ್ತಾಹಿಕವಾದ ‘ಇಂಡಿಯನ್‌ ಒಪಿನಿಯನ್‌’ನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಗಾಂಧೀಜಿಯ ಎರಡನೇ ಪುತ್ರ ಮಣಿಲಾಲ್‌ ಗಾಂಧಿ ಅವರಿರುವ ದೃಶ್ಯಗಳ ವಿಡಿಯೊವೂ ಈ ಸಂಗ್ರಹದಲ್ಲಿದೆ. ಮಣಿಲಾಲ್‌ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿರುವ ದೃಶ್ಯಗಳನ್ನು ತೋರಿಸುವಾಗ ಶೀರ್ಷಿಕೆ ಕಾರ್ಡ್‌ನಲ್ಲಿ ‘ಮಹಾತ್ಮ ಗಾಂಧಿಯ ಮಗ’ ಎಂದು ಅಡಿಬರಹವನ್ನು ನೀಡಲಾಗಿದೆ. 

ದಕ್ಷಿಣ ಭಾರತದ ಪ್ರವಾಸ, ಹರಿಜನ ಯಾತ್ರೆ

ಮಹಾತ್ಮ ಗಾಂಧೀಜಿ 1946ರ ಜನವರಿ–ಫೆಬ್ರುವರಿಯಲ್ಲಿ ದಕ್ಷಿಣ ಭಾರತದ ಪ್ರವಾಸ ಮತ್ತು ಹರಿಜನ ಯಾತ್ರೆ ಕೈಗೊಂಡಿರುವ ದೃಶ್ಯಗಳು ಮತ್ತೊಂದು ವಿಡಿಯೊದಲ್ಲಿದೆ. ‘ಪ್ರೊಜಕ್ಷನ್‌ ಆಫ್ ಇಂಡಿಯಾ ಪಿಕ್ಚರ್ಸ್‌’ ಚಿತ್ರೀಕರಿಸಿದ ದೃಶ್ಯಗಳು ಇವಾಗಿವೆ. ಮನಪ್ಪರೈ ರೈಲ್ವೆ ಜಂಕ್ಷನ್‌ನಲ್ಲಿ ಗಾಂಧೀಜಿ ಇರುವುದು, ನಂತರ ಮಧುರೆ ಮೀನಾಕ್ಷಿ,  ಪಳನಿ, ಕುಂಬಕೋಣಂನ ದೇಗುಲಗಳಿಗೆ ಭೇಟಿ ನೀಡಿದ ದೃಶ್ಯಗಳು ಸಂಗ್ರಹಿಸಿರುವ ಫಿಲ್ಮ್‌ ರೀಲ್‌ನಲ್ಲಿ ಕಾಣಬಹುದು.  

ಮದ್ರಾಸ್‌ನಲ್ಲಿ ನಡೆದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಬೆಳ್ಳಿ ಮಹೋತ್ಸವದಲ್ಲಿ ಸಿ.ರಾಜಗೋಪಾಲಚಾರಿ ಅವರೊಟ್ಟಿಗೆ ಗಾಂಧೀಜಿ ಭಾಗವಹಿಸಿರುವ ದೃಶ್ಯಗಳೂ ಇವೆ.

ಸೇವಾಗ್ರಾಮ ಆಶ್ರಮದಲ್ಲಿ ಗಾಂಧೀಜಿ’

ಮಹಾರಾಷ್ಟ್ರದ ವಾದ್ರಾದಲ್ಲಿನ ಸೇವಾಗ್ರಾಮ ಆಶ್ರಮದ ವಿವಿಧ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಮತ್ತು ಕಸ್ತೂರಬಾ ಅವರು ತೊಡಗಿಸಿಕೊಂಡಿರುವುದನ್ನು ಸೆರೆ ಹಿಡಿದಿರುವ ದೃಶ್ಯಗಳು ಇಲ್ಲಿವೆ. ಗಾಂಧೀಜಿ ರೋಗಿಗಳ ಸೇವೆ ಮಾಡುತ್ತಿರುವುದು, ಉಳುವೆ ಮಾಡುತ್ತಿರುವುದು, ಕಸ್ತುರಬಾ ಅವರು ಆಶ್ರಮದಲ್ಲಿ ಹಸುಗಳಿಗೆ ಹುಲ್ಲು ಹಾಕುತ್ತಿರುವ ಸುಂದರವಾದ ದೃಶ್ಯಗಳು ಸಂಗ್ರಹಿಸಿದ ಫಿಲ್ಮ್‌ನಲ್ಲಿದೆ. 

ರೌಂಡ್‌ ಟೇಬಲ್‌ ಕಾನ್ಫರೆನ್ಸ್‌’ಗೆ ಹಡಗಿನಲ್ಲಿ....

ಮತ್ತೊಂದು ಫಿಲ್ಮ್‌ ರೀಲ್‌, ಎರಡನೇ ‘ರೌಂಡ್‌ ಟೇಬಲ್‌ ಕಾನ್ಫರೆನ್ಸ್‌’ನಲ್ಲಿ ಪಾಲ್ಗೊಳ್ಳಲು ಎಸ್‌. ರಜಪುತಾನ ಬೋರ್ಡ್‌ ಹಡಗಿನಲ್ಲಿ ಇಂಗ್ಲೆಂಡ್‌ಗೆ ತೆರಳಿದ ಗಾಂಧೀಜಿ ‌ಪ್ರಯಾಣದ ದೃಶ್ಯಗಳನ್ನು ಹೊಂದಿದೆ. ಹಡಗಿನ ಡೆಕ್‌ನಲ್ಲಿದ್ದ ಗಾಂಧೀಜಿ  ಬೈನಾಕ್ಯೂಲರ್‌, ಶೇವಿಂಗ್‌ ಸಾಧನ ಹಾಗೂ ನೂಲು ತೆಗೆಯುವ ರಾಟಿಯ ಜೊತೆಗಿರುವ ದೃಶ್ಯಗಳಿವೆ.

ಮಗದೊಂದು ದೃಶ್ಯದ ತುಣುಕಿನಲ್ಲಿ, ಖಾಲಿ ಮನೆಯ ಚಿತ್ರ ಸೇರಿದಂತೆ ಗಾಂಧೀಜಿ ಅಹಮದಾಬಾದ್‌, ಪೋರಬಂದರ್‌ ಮತ್ತು ರಾಜ್‌ಕೋಟ್‌ಗೆ ಭೇಟಿ ನೀಡಿದ ದೃಶ್ಯ ಇವೆ. ಅವರು ಓದಿದ ಶಾಲೆ ಮತ್ತು ಅವರ ಹೆಸರಿರುವ ಗ್ರಂಥಾಲಯದ ರಿಜಿಸ್ಟ್ರಾರ್‌ನ ದೃಶ್ಯಗಳಿವೆ! ಮಹಾರಾಷ್ಟ್ರದ ಶಿವಾಜಿ ಕಾಲೇಜಿನ ವಾರ್ಷಿಕ ಕಾರ್ಯಕ್ರಮವೊಂದರಲ್ಲಿ ಗಾಂಧೀಜಿ ಭಾಗವಹಿಸಿದ್ದ ದೃಶ್ಯಗಳಿವೆ.

ಕೊನೆಯ ದಿನಗಳ ದೃಶ್ಯ

ಕೆಲ ಸಂಗ್ರಹಗಳಲ್ಲಿ, ಗಾಂಧೀಜಿ ಕೊನೆಯ ದಿನಗಳ ದೃಶ್ಯಗಳು, ಅವರ ಮರಣಾ ನಂತರದ ಅವಧಿಗಳ ಸಂಗತಿಗಳಿವೆ. ಅದರಲ್ಲಿ ಅವರ ಮೃತ ದೇಹದ ಅತೀ ಸಮೀಪದ ದೃಶ್ಯ ಹಾಗೂ ರಕ್ತಮಯವಾಗಿದ್ದ ಬಟ್ಟೆಗಳು, ಅಂದಿನ ಘಟನೆಯ ಕುರಿತು ದಿನ ಪತ್ರಿಕೆಗಳ ವರದಿಗಳು, ಬಿರ್ಲಾ ಹೌಸ್‌, ಅಂತಿಮ ದರ್ಶನ ಪಡೆದ ಮತ್ತು ಅಂತಿಮ ಯಾತ್ರೆಯಲ್ಲಿ ರಾಜ್‌ ಘಾಟ್‌ ವರೆಗಿನ ಮೆರವಣಿಗೆಯಲ್ಲಿ ಅಸಂಖ್ಯಾತ ಜನ ಸಾಗಿದ್ದ ದೃಶ್ಯಗಳಿವೆ.

ಪ್ರತಿಕ್ರಿಯಿಸಿ (+)