ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ: 5 ವರ್ಷಗಳ ಕನಿಷ್ಠ ಮಟ್ಟಕ್ಕೆ

Last Updated 31 ಮೇ 2019, 20:00 IST
ಅಕ್ಷರ ಗಾತ್ರ

ಮುಂಬೈ: 2018–19ನೆ ಹಣಕಾಸು ವರ್ಷದಲ್ಲಿ ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 6.8ರಷ್ಟು ದಾಖಲಾಗಿದ್ದು, ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕೇಂದ್ರ ಸರ್ಕಾರದ ಪಾಲಿಗೆ ಕೆಟ್ಟ ಸುದ್ದಿ ಇದಾಗಿದೆ. 2014–15ರಿಂದೀಚೆ ಅತಿ ಕಡಿಮೆ ಮಟ್ಟದ ವೃದ್ಧಿ ದರ ಇದಾಗಿದೆ. 2013–14ರಲ್ಲಿ ಶೇ 6.4ರಷ್ಟು ದಾಖಲಾಗಿತ್ತು. ಹಿಂದಿನ ಹಣಕಾಸು ವರ್ಷದ ಜನವರಿ – ಮಾರ್ಚ್‌ ಅವಧಿಯ ನಾಲ್ಕನೆ ತ್ರೈಮಾಸಿಕದಲ್ಲಿನ ‘ಜಿಡಿಪಿ’ಯು ಶೇ 5.8ರಷ್ಟಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು ಶೇ 8.1ರಷ್ಟಿತ್ತು. 17 ತ್ರೈಮಾಸಿಕಗಳಲ್ಲಿ ಅತಿ ಕಡಿಮೆ ಮಟ್ಟ ಇದಾಗಿದೆ.

ನಿರುದ್ಯೋಗವು ಗರಿಷ್ಠ ಮಟ್ಟದಲ್ಲಿ ಇರುವುದನ್ನೂ ಸರ್ಕಾರದ ಅಧಿಕೃತ ಅಂಕಿಅಂಶಗಳೇ ದೃಢಪಡಿಸಿವೆ. ಇನ್ನೊಂದೆಡೆ ಎಂಟು ಮೂಲಸೌಕರ್ಯ ವಲಯಗಳ ಏಪ್ರಿಲ್‌ ತಿಂಗಳ ಪ್ರಗತಿ ದರವೂ ನಿಧಾನಗೊಂಡಿದೆ.

ವಾರ್ಷಿಕ ವೃದ್ಧಿ ದರವು ವರ್ಷದ ಹಿಂದೆ ಶೇ 7.2ರಷ್ಟು ದಾಖಲಾಗಿತ್ತು. ಈಗ ವೃದ್ಧಿ ದರ ಇಳಿದಿರುವುದರಿಂದ, ವಿಶ್ವದಲ್ಲೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುವ ಆರ್ಥಿಕತೆ ಎನ್ನುವ ಭಾರತದ ಹೆಗ್ಗಳಿಕೆಗೆ ಎರಡು ವರ್ಷಗಳಲ್ಲಿ ಮೊದಲ ಬಾರಿ ಕುಂದುಂಟಾಗಿದೆ.

ಗರಿಷ್ಠ ಮಟ್ಟದಲ್ಲಿನ ನಿರುದ್ಯೋಗ
2017–18ರಲ್ಲಿ ಶೇ 6.1ರಷ್ಟಿದ್ದ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣದಲ್ಲಿತ್ತು ಎನ್ನುವುದನ್ನು ಸರ್ಕಾರದ ಅಧಿಕೃತ ಅಂಕಿ ಅಂಶಗಳೇ ಈಗ ಖಚಿತಪಡಿಸಿವೆ. ಕೇಂದ್ರ ಸಚಿವ ಸಂಪುಟವು ಅಧಿಕಾರವಹಿಸಿಕೊಂಡ ದಿನವೇ ಬಿಡುಗಡೆಯಾಗಿರುವ ಅಂಕಿ ಅಂಶಗಳ ಪ್ರಕಾರ, ಉದ್ಯೋಗಕ್ಕೆ ಅರ್ಹರಾದ ನಗರ ಪ್ರದೇಶಗಳ ಯುವಜನತೆಯಲ್ಲಿ ಶೇ 7.8ರಷ್ಟು ಮತ್ತು ಗ್ರಾಮೀಣ ಪ್ರದೇಶದ ಶೇ 5.3ರಷ್ಟು ನಿರುದ್ಯೋಗಿಗಳಾಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪುರುಷರಲ್ಲಿನ ನಿರುದ್ಯೋಗ ಪ್ರಮಾಣ ಶೇ 6.2 ಮತ್ತು ಮಹಿಳೆಯರಲ್ಲಿ ಶೇ 5.7ರಷ್ಟಿದೆ.

ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ಸಿದ್ಧಪಡಿಸಿದ್ದ ನಿರುದ್ಯೋಗ ಕುರಿತ ವರದಿಯು ಫೆಬ್ರುವರಿಯಲ್ಲಿ ಸೋರಿಕೆಯಾಗಿತ್ತು. ಈ ಮಾಹಿತಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆಯುತ್ತಲೇ ಬಂದಿತ್ತು.

**
ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟಿನ ಕಾರಣಕ್ಕೆ 4ನೆ ತ್ರೈಮಾಸಿಕದ ಜಿಡಿಪಿ ಕುಂಠಿತಗೊಂಡಿದೆ.
-ಸುಭಾಷಚಂದ್ರ ಗರ್ಗ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT