ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಬದುಕಿಗೆ ಜಾರ್ಜ್ ವಿದಾಯ

Last Updated 30 ಜನವರಿ 2019, 2:46 IST
ಅಕ್ಷರ ಗಾತ್ರ

ನವದೆಹಲಿ : ಜೀವನದುದ್ದಕ್ಕೂ ಸಮಾಜವಾದಿಯಾಗಿಯೇ ಇದ್ದ ಜಾರ್ಜ್‌ ಫರ್ನಾಂಡಿಸ್‌ (88) ಸುದೀರ್ಘ ಅಸ್ವಾಸ್ಥ್ಯದ ನಂತರ ಮಂಗಳವಾರ ಬೆಳಿಗ್ಗೆ ನಿಧನರಾದರು. ತಾವು ನಂಬಿದ್ದ ಸಮಾಜವಾದಿ ಸಿದ್ಧಾಂತದ ತದ್ವಿರುದ್ಧ ಸಿದ್ಧಾಂತಗಳನ್ನು ಹೊಂದಿದ್ದ ಕೇಂದ್ರದ ಎರಡು ಸರ್ಕಾರಗಳಲ್ಲಿ ಅವರು ಸಚಿವರಾಗಿದ್ದರು. 1977ರಲ್ಲಿ ಅವರು ಕೋಕಾ ಕೋಲವನ್ನು ದೇಶದಿಂದ ಹೊರದಬ್ಬಿದ್ದರು. 1999ರಲ್ಲಿ ಕಾರ್ಗಿಲ್‌ ಯುದ್ಧ ನಡೆದಾಗ ರಕ್ಷಣಾ ಸಚಿವರಾಗಿದ್ದರು.

ರಕ್ಷಣಾ ಸಚಿವರಾಗಿ ಜಾರ್ಜ್‌ ಯೋಧರ ಮೆಚ್ಚುಗೆ ಸಂಪಾದಿಸಿದ್ದರು. ಆದರೆ ಅವರ ವಿರುದ್ಧ ಅವ್ಯವಹಾರದ ಆರೋಪಗಳೂ ಕೇಳಿ ಬಂದಿದ್ದವು.

ಇತ್ತೀಚೆಗೆ ಅವರಿಗೆ ಎಚ್‌1ಎನ್‌1 ಜ್ವರದ ಸೋಂಕು ತಗುಲಿತ್ತು ಎಂದು ಜಾರ್ಜ್‌ ಅವರ ದೀರ್ಘಕಾಲದ ಸಂಗಾತಿ ಜಯಾ ಜೇಟ್ಲಿ ಹೇಳಿದ್ದಾರೆ.

ಮಂಗಳೂರಿನ ಕ್ರೈಸ್ತ ಕುಟುಂಬದಲ್ಲಿ ಜನಿಸಿದ್ದ ಜಾರ್ಜ್‌, 1974ರಲ್ಲಿ ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ಬಂದರು. ಮುಂಬೈನಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾಗಿದ್ದ ಜಾರ್ಜ್‌ ನಿಗಿನಿಗಿ ಕೆಂಡದಂತೆ ಪ್ರಜ್ವಲಿಸುತ್ತಿದ್ದರು. 1974ರಲ್ಲಿ ಅವರು ಕರೆ ಕೊಟ್ಟ ರೈಲ್ವೆ ಮುಷ್ಕರದಿಂದಾಗಿ ಇಡೀ ದೇಶದ ಸಂಚಾರ ವ್ಯವಸ್ಥೆಯೇ ಸ್ಥಗಿತಗೊಂಡಿತ್ತು.ವಿಶೇಷವೆಂದರೆ 1989ರಲ್ಲಿ ವಿ.ಪಿ. ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾದರು.

ಆರ್‌ಎಸ್‌ಎಸ್‌ನ ಕಟು ಟೀಕಾಕಾರರಾಗಿದ್ದ ಜಾರ್ಜ್‌ 1998ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದದಲ್ಲಿ ರಕ್ಷಣಾ ಸಚಿವರಾದರು. ಅವರು ರಕ್ಷಣಾ ಸಚಿವರಾಗಿದ್ದಾಗಲೇ ಭಾರತವು 1998ರಲ್ಲಿ ಪೋಖಾರಣ್‌ನಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನೂ ನಡೆಸಿತು.

1977ರಲ್ಲಿ, ತುರ್ತುಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಅವರು ಕೈಗಾರಿಕಾ ಸಚಿವರಾದರು.ತುರ್ತುಸ್ಥಿತಿ ವಿರೋಧಿ ಚಳವಳಿ ಕಟ್ಟುವಲ್ಲಿ ಜಾರ್ಜ್‌ ವಹಿಸಿದ್ದ ಪಾತ್ರ ದೊಡ್ಡದು. ತುರ್ತು ಪರಿಸ್ಥಿತಿಯಲ್ಲಿ ಅವರನ್ನು ಬರೋಡಾ ಡೈನಮೈಟ್‌ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಕೈಗಾರಿಕಾ ಸಚಿವರಾದ ಮೇಲೆ ವಿದೇಶಿ ಮಾಲೀಕತ್ವ ನಿಯಂತ್ರಣ ನಿಯಮಗಳಿಗೆ ಬದ್ಧರಾಗದಿದ್ದರೆ ಕೋಕಾ–ಕೋಲಾಮತ್ತು ಐಬಿಎಂ ಕಂಪನಿಗಳು ದೇಶ ತೊರೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಪರಿಣಾಮವಾಗಿ ಇವೆರಡೂ ಭಾರತ ಬಿಟ್ಟು ಹೋಗಬೇಕಾಯಿತು.

1977ರಲ್ಲಿ ಬಿಹಾರದ ಮುಜಫ್ಫರ್‌ಪುರ ಲೋಕಸಭಾ ಕ್ಷೇತ್ರದಿಂದ ದಾಖಲೆ ಅಂತರದ ಗೆಲುವು ಸಾಧಿಸಿದ್ದರು. ಆದರೆ, 2009ರಲ್ಲಿ ಅದೇ ಕ್ಷೇತ್ರದಿಂದ ಕಣಕ್ಕೆ ಇಳಿಸಲುಅವರೇ ಬೆಳೆಸಿದ ಶಿಷ್ಯ, ಜೆಡಿಯು ಅಧ್ಯಕ್ಷ ನಿತೀಶ್‌ ಕುಮಾರ್‌ ಒಪ್ಪಲಿಲ್ಲ. ರಾಜ್ಯಸಭೆಗೆ ಆರಿಸಿ ಕಳುಹಿಸುತ್ತೇವೆ ಎಂಬ ಜೆಡಿಯುನ ಕೊಡುಗೆಯನ್ನು ಆಕ್ರೋಶದಿಂದಲೇ ತಿರಸ್ಕರಿಸಿದ್ದರು. ‘ಸಮಾಜವಾದಿಗಳು ರಾಜ್ಯಸಭೆ ಮೂಲಕ ಸಂಸತ್‌ ಪ್ರವೇಶಿಸುವುದಿಲ್ಲ’ ಎಂದು ಹೇಳಿದ್ದರು.

ಲೋಕಸಭೆ ಟಿಕೆಟ್‌ ನಿರಾಕರಿಸಿದ ನಿತೀಶ್‌ ನಿರ್ಧಾರದಿಂದ ವ್ಯಗ್ರಗೊಂಡ ಜಾರ್ಜ್‌, ಪಕ್ಷೇತರನಾಗಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ, ಠೇವಣಿ ಉಳಿಸಿಕೊಳ್ಳುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. ಮರೆಗುಳಿ ಕಾಯಿಲೆಯಿಂದಾಗಿ ಸಾರ್ವಜನಿಕ ಬದುಕಿನಿಂದಲೂ ದೂರವಾಗಬೇಕಾಯಿತು.

ಇವನ್ನೂ ಓದಿ

ಜಾರ್ಜ್‌ ಜೀವನದ ಪ್ರಮುಖ ವರ್ಷಗಳು

ಜೂನ್‌ 3. 1930: ಜನನ

1946: ಮುಂಬೈ ಕಡೆಗೆ ಹೊರಟದ್ದು

1949: ‘ಕೊಂಕಣಿ ಯುವಕ್‌’ ಮಾಸಪತ್ರಿಕೆ ಮತ್ತು ‘ರೈತವಾಣಿ’ ವಾರಪತ್ರಿಕೆಯ ಸಂಪಾದಕ

1961: ರಾಜಕೀಯದಲ್ಲಿ ಮೊದಲ ಜಯ; ಮುಂಬೈ ನಗರಸಭೆಗೆ ಪ್ರವೇಶ

1967: ಮೊದಲ ಬಾರಿಗೆ ಲೋಕಸಭೆ ಪ್ರವೇಶ

1971: ಲೈಲಾ ಕಬೀರ್‌ ಜೊತೆ ಮದುವೆ

1974: ರೈಲು ಚಳವಳಿಯನ್ನು ಸಂಘಟಿಸಿ ಪ್ರಸಿದ್ಧಿ

1975: ತುರ್ತುಪರಿಸ್ಥಿಯ ಹಿನ್ನೆಲೆಯಲ್ಲಿ ಭೂಗತ

1976: ಬರೋಡ ಡೈನಮೈಟ್‌ ಪ್ರಕರಣದಲ್ಲಿ ಬಂಧನ

1977: ಜೈಲಿನಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧೆ; ಕೇಂದ್ರ ಕೈಗಾರಿಕಾ ಮಂತ್ರಿ.

1984: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ; ಸೋಲು

1989: ಕೇಂದ್ರ ರೈಲ್ವೆ ಮಂತ್ರಿ

1994: ಸಮತಾ ಪಕ್ಷದ ಸ್ಥಾಪನೆ; ಬಿಜೆಪಿಗೆಬೆಂಬಲ

1998: ಕೇಂದ್ರ ರಕ್ಷಣಾ ಮಂತ್ರಿ; ಪೋಖರಾಣ್ – 2 ಪರೀಕ್ಷೆ; ‘ ಭಾರತದ ಮೊದಲ ಶತ್ರು ಚೀನಾ’ ಎಂದು ಘೋಷಿಸಿದ್ದು

1999: ಕಾರ್ಗಿಲ್‌ ಕದನ

2001: ತೆಹಲ್ಕಾ ಹಗರಣ

2004: ಸೈನಿಕರ ಶವಪೆಟ್ಟಿಗೆ ಖರೀದಿಯಲ್ಲಿ ಅವ್ಯವಹಾರದ ಆರೋಪ; ಮಂತ್ರಿಪದವಿಗೆ ರಾಜೀನಾಮೆ

2006: ಬರಾಕ್ ಕ್ಷಿಪಣಿ ಖರೀದಿಯಲ್ಲಿ ಅವ್ಯವಹಾರ ಆರೋಪ; ಸಿಬಿಐನಿಂದ ಎಫ್. ಐ. ಆರ್‌.

2009: ರಾಜ್ಯಸಭೆಗೆ ಆಯ್ಕೆ

2010: ಅಲ್ಜೈಮರ್ ಮತ್ತು ಪಾರ್ಕಿನ್‌ಸನ್‌ ಕಾಯಿಲೆಗೆ ತುತ್ತಾದದ್ದು

2015: ಸುಪ್ರೀಂ ಕೋರ್ಟ್‌ನಿಂದ ಶವಪೆಟ್ಟಿಗೆ ಅವ್ಯವಹಾರ ಕುರಿತು ತೀರ್ಪು; ದೋಷಮುಕ್ತ ಎಂದು ಘೋಷಣೆ

ಜನವರಿ 29,2019: ನಿಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT