ಗುರುವಾರ , ಏಪ್ರಿಲ್ 22, 2021
22 °C
ಪೊಲೀಸ್‌ ದೌರ್ಜನ್ಯದ ತನಿಖೆಗೆ ಸಮಿತಿ ರಚಿಸಲು ನಕಾರ

ಹೈಕೋರ್ಟ್‌ಗೆ ಹೋಗಿ: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ತನಿಖೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಳ್ಳಿಹಾಕಿದೆ.

‘ಆಯಾ ರಾಜ್ಯಗಳ ಹೈಕೋರ್ಟ್‌ಗಳ ಮೂಲಕ ಇಂಥ ಸಮಿತಿಗಳನ್ನು ರಚಿಸಿ, ತನಿಖೆ ನಡೆಸಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿದಾರರಿಗೆ ಸೂಚಿಸಿದೆ.

‘ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ನ ತನಿಖೆಗೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಣೆಯಿಂದ ಸಮಿತಿಯನ್ನು ರಚಿಸಿತ್ತು. ಅದರಂತೆ ಈ ವಿಚಾರದಲ್ಲೂ ಸಮಿತಿ ರಚಿಸಬೇಕು’ ಎಂದು ವಕೀಲೆ ಇಂದಿರಾ ಜೈಸಿಂಗ್‌ ಮನವಿ ಮಾಡಿದ್ದರು.

‘ಪೊಲೀಸರು ವಿವೇಚನಾರಹಿತರಾಗಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ, ಗಾಯಗೊಂಡವರಿಗೆ ವೈದ್ಯಕೀಯ ನೆರವೂ ಲಭಿಸಲಿಲ್ಲ’ ಎಂದು ಅರ್ಜಿದಾರರು ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಳ್ಳಿಹಾಕಿ, ‘ಅಲೀಗಡ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅದೂ ಅಲ್ಲದೆ ಅರ್ಜಿದಾರರು ಆರೋಪಿಸಿರುವಂತೆ ಅವರು ಪೊಲೀಸರ ಜೊತೆಗಿನ ಸಂಘರ್ಷದಲ್ಲಿ ಗಾಯಗೊಂಡಿರಲಿಲ್ಲ’ ಎಂದರು.

ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಕಡೆಗಣಿಸಲಾಗಿತ್ತು ಎಂಬ ಅರ್ಜಿದಾರರ ವಾದವನ್ನೂ ಮೆಹ್ತಾ ತಳ್ಳಿಹಾಕಿದರು. 

‘ತನಿಖೆಗೆ ಸಮಿತಿ ರಚಿಸಬೇಕೇ ಬೇಡವೇ ಎಂಬ ತೀರ್ಮಾನವನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳು ತೆಗೆದುಕೊಳ್ಳಬಲ್ಲರು ಎಂಬ ವಿಶ್ವಾಸ ನಮಗಿದೆ. ವಿದ್ಯಾರ್ಥಿಗಳ ಬಂಧನ, ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲೂ ನಿರ್ದೇಶನಗಳನ್ನು ನೀಡುವ ಅಧಿಕಾರ ಹೈಕೋರ್ಟ್‌ಗಳಿಗಿದೆ’ ಎಂದು ಪೀಠ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು