ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣದಲ್ಲಿ ಬಿಜೆಪಿ ಸರ್ಕಾರಕ್ಕೆ ಗೋಪಾಲ್ ಕಾಂಡಾ ಬೆಂಬಲ; ಯಾರು ಈ ಕಾಂಡಾ?

Last Updated 25 ಅಕ್ಟೋಬರ್ 2019, 12:38 IST
ಅಕ್ಷರ ಗಾತ್ರ

ನವದೆಹಲಿ:90 ಸದಸ್ಯರಿರುವ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸೀಟುಗಳನ್ನು ಗೆದ್ದಿದ್ದು, ಕಾಂಗ್ರೆಸ್ 31 ಸೀಟುಗಳನ್ನು ಗೆದ್ದುಗೊಂಡಿದೆ. ಯಾವುದೇ ಪಕ್ಷಕ್ಕೆ ಇಲ್ಲಿ ಬಹುಮತ ಇಲ್ಲದಿರುವ ಕಾರಣ ಅತಂತ್ರ ಸ್ಥಿತಿ ಉಂಟಾಗಿದೆ.

ಹರಿಯಾಣದಲ್ಲಿ ಸರ್ಕಾರ ರಚನೆ ಮಾಡಬೇಕಿದ್ದರೆ ಬಿಜೆಪಿಗೆ 6 ಸದಸ್ಯರ ಬೆಂಬಲ ಬೇಕಿದೆ. ಇಂತಿರುವಾಗ ಹರಿಯಾಣ ಲೋಖಿತ್ ಪಕ್ಷದಗೋಪಾಲ್ ಕಾಂಡಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಗೋಪಾಲ್ ಕಾಂಡಾ ಅವರ ಸಹಾಯವನ್ನು ಬಿಜೆಪಿ ಸ್ವೀಕರಿಸಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಗೋಪಾಲ್ ಕಾಂಡಾ ಬಗ್ಗೆಚರ್ಚೆ, ಟೀಕೆಗಳು ಶುರುವಾಗಿದೆ.

ಯಾರು ಈ ಗೋಪಾಲ್ ಕಾಂಡಾ?
ಸಿರ್ಸಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದ ಶಾಸಕರಾಗಿದ್ದಾರೆ ಗೋಪಾಲ್ ಕಾಂಡಾ.ಮೇ. 2014ರಲ್ಲಿ ಸಹೋದರ ಗೋವಿಂದ್ ಕಾಂಡಾ ಜತೆಗೆ ಗೋಪಾಲ್ ಕಾಂಡಾ ಹರಿಯಾಣ ಲೋಖಿತ್ ಪಕ್ಷವನ್ನು ಆರಂಭಿಸಿದ್ದರು.

ಹರಿಯಾಣ ಸರ್ಕಾರ ರಚನೆ ಬಗ್ಗೆ ಮಾತುಕತೆ ನಡೆಸುವುದಕ್ಕಾಗಿ ಸಿರ್ಸಾಸಂಸದೆ ಸುನಿತಾ ದುಗ್ಗಲ್ ಕೆಲವು ಶಾಸಕರನ್ನು ಗುರುವಾರ ಸಂಜೆ ದೆಹಲಿಗೆ ಕರೆದೊಯ್ದಿದ್ದರು. ಅದರಲ್ಲಿ ಗೋಪಾಲ್ ಕಾಂಡಾ ಕೂಡಾ ಇದ್ದರು.
ಶಾಸಕರು ದೆಹಲಿಗೆ ವಿಮಾನದಲ್ಲಿ ಸಂಚರಿಸುತ್ತಿರುವ ಫೋಟೊ ಟ್ವಿಟರ್‌ನಲ್ಲಿ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ಗೋಪಾಲ್ ಕಾಂಡಾ ಅವರ ಅಪರಾಧಪ್ರಕರಣವನ್ನು ಮತ್ತೆ ಕೆದಕಿದ್ದಾರೆ.

ಪ್ರಕರಣ ಯಾವುದು?
ಕಾಂಡಾ ಒಡೆತನದ ಎಂಡಿಎಲ್‌ಆರ್ ವಿಮಾನಯಾನ ಕಂಪೆನಿಯಲ್ಲಿ ಗಗನ ಸಖಿಯಾಗಿ ಕಾರ್ಯನಿರ್ವಹಿಸಿದ್ದ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣ ಇದು. 2012ರಲ್ಲಿ ಗೀತಿಕಾ ಶರ್ಮಾ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹರಿಯಾಣದ ಗೃಹ ಮತ್ತು ಯುವಜನ ಸೇವೆ ಇಲಾಖೆಗಳ ರಾಜ್ಯ ಖಾತೆ ಸಚಿವ ಗೋಪಾಲ್ ಕಾಂಡಾ ಅವರುಎಂಡಿಎಲ್‌ಆರ್ ವಿಮಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡಿದ್ದ ಗೀತಿಕಾ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬ ಆರೋಪವಿದೆ.

ಎಂಡಿಎಲ್‌ಆರ್ ಕಂಪೆನಿಯು ವಿಮಾನಯಾನ ಸೇವೆ ಸ್ಥಗಿತಗೊಳಿಸಿದ ನಂತರ ಗೋಪಾಲ್ ಕಾಂಡಾ, ಗೀತಿಕಾ ಶರ್ಮಾ ಅವರನ್ನು ತಮ್ಮದೇ ಒಡೆತನದ ಬೇರೊಂದು ಕಂಪೆನಿಯ ನಿರ್ದೇಶಕರನ್ನಾಗಿ ನೇಮಿಸಿದ್ದರು. ಆದರೆ, ಗೀತಿಕಾ ಈ ಪ್ರಸ್ತಾವವನ್ನು ತಿರಸ್ಕರಿಸಿ ರಾಜೀನಾಮೆ ನೀಡಿದ್ದರು. `ಎಂಡಿಎಲ್‌ಆರ್ ಕಂಪೆನಿ ಬಿಟ್ಟ ಬಳಿಕ ಗೀತಿಕಾ ದುಬೈನಲ್ಲಿ ಇನ್ನೊಂದು ಕಂಪೆನಿಗೆ ಸೇರಿದ್ದರು. ಆದರೆ ಗೋಪಾಲ್, ಗೀತಿಕಾ ಚಾರಿತ್ರ್ಯಕ್ಕೆ ಕಳಂಕ ತರುವಂತಹ ಪತ್ರವನ್ನು ಆ ಕಂಪೆನಿಗೆ ಬರೆದ ಕಾರಣ ಕಂಪೆನಿ ಗೀತಿಕಾಳನ್ನು ಕೆಲಸದಿಂದ ತೆಗೆದುಹಾಕಿತ್ತು ಎಂದು ಗೀತಿಕಾ ಅವರ ಸೋದರ ಗೌರವ್ ಶರ್ಮಾ ಆರೋಪಿಸಿದ್ದರು.

ಈ ಆಪಾದನೆ ಮೇಲೆ ಸಚಿವರ ವಿರುದ್ಧ ಅತ್ಯಾಚಾರ, ಆತ್ಮಹತ್ಯೆಗೆ ಕುಮ್ಮಕ್ಕು, ಅಪರಾಧ ಸಂಚು ಮತ್ತು ಅಪರಾಧ ಬೆದರಿಕೆಪ್ರಕರಣ ದಾಖಲಾಗಿತ್ತು. ಆ ಹೊತ್ತಲ್ಲಿ ಕಾಂಡಾ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು.ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಕಾಂಡಾ ಗೀತಿಕಾ ಆತ್ಮಹತ್ಯೆ ನಂತರ 10 ದಿನಗಳ ಕಾಲ ತಲೆಮರೆಸಿಕೊಂಡಿದ್ದು ಆಮೇಲೆ ಪೊಲೀಸರ ಮುಂದೆ ಶರಣಾಗಿದ್ದರು.

2012 ಆಗಸ್ಟ್‌ನಲ್ಲಿ ಕಾಂಡಾ ಅವರ ನಿಜವಾದ ಮುಖ ಏನೆಂದು ಜನರಿಗೆ ತೋರಿಸುವ ಕೆಲಸ ಮಾಡಿ ಎಂದು ಬಿಜೆಪಿಯ ಸ್ಮತಿ ಇರಾನಿ ಹರಿಯಾಣದ ಮಹಿಳಾ ಮೋರ್ಚಾಕ್ಕೆ ಆದೇಶಿಸಿದ್ದರು.ಇದಾಗಿ 6 ತಿಂಗಳಲ್ಲಿ ಗೀತಿಕಾ ಅವರ ಅಮ್ಮನೂ ಆತ್ಮಹತ್ಯೆಗೆ ಶರಣಾಗಿದ್ದು, ಕಾಂಡಾ ಮತ್ತು ಅವರ ಆಪ್ತ ತನ್ನ ಮಗಳ ಆತ್ಮಹತ್ಯೆಗೆ ಕಾರಣ ಎಂದು ದೂರಿದ್ದರು.

ಈ ಪ್ರಕರಣದಲ್ಲಿಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ ಕಾಂಡಾ 2014 ರಲ್ಲಿ ಜಾಮೀನು ಪಡೆದು ಹೊರಬಂದರು.ದೆಹಲಿ ಹೈಕೋರ್ಟ್ ಇವರವಿರುದ್ದ ಇದ್ದ ಅತ್ಯಾಚಾರ ಪ್ರಕರಣವನ್ನು ಖುಲಾಸೆಗೊಳಿಸಿತು.

ಮಧ್ಯಂತರ ಜಾಮೀನಿನಲ್ಲಿ ಹೊರಬಂದಿದ್ದ ಕಾಂಡಾ 2013 ಸೆಪ್ಟೆಂಬರ್6 ರಂದು ಕಾಂಡಾ ಅವರು ಹರಿಯಾಣ ವಿಧಾನಸಭಾ ಕಲಾಪಕ್ಕೆ ಹಾಜರಾದರು. ಕಾಂಗ್ರೆಸ್ ಸಂಸದೀಯ ಕಾರ್ಯದರ್ಶಿ ಭೂ ವ್ಯವಹಾರ ಕುದುರಿಸುತ್ತಿರುವ ಆರೋಪದ ಸಿ.ಡಿ ಕಲಾಪದಲ್ಲಿ ಗದ್ದಲಕ್ಕೆ ಕಾರಣವಾಯಿತು. ಕಾಂಡಾ ಅವರನ್ನು ಕಾಂಗ್ರೆಸ್ ಯಾಕೆ ಉಚ್ಛಾಟನೆ ಮಾಡುತ್ತಿಲ್ಲ ಎಂದು ಬಿಜೆಪಿ ಸಂಸದ ಅನಿಲ್ ವಿಜ್ ಪ್ರಶ್ನಿಸಿದ್ದರು.

ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ ಕಾಂಡಾ. ಅದೇ ವೇಳೆ ಗೀತಿಕಾ ಅಮ್ಮನ ಆತ್ಮಹತ್ಯೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕರಣ ರದ್ದತಿ ವರದಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಿದ ನ್ಯಾಯಾಲ ತನಿಖಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಆದೇಶಿಸಿತ್ತು.

ಕಾಂಡಾ ರಾಜಕೀಯ
2014ರಲ್ಲಿ ತಮ್ಮ ಪಕ್ಷವಾದಹರಿಯಾಣ ಲೋಖಿತ್ ಪಾರ್ಟಿಯಿಂದ 75 ಅಭ್ಯರ್ಥಿಗಳನ್ನು ವಿಧಾನಸಭಾ ಕಣಕ್ಕಿಳಿಸಿದ್ದರು. ಈ ಚುನಾವಣೆಯಲ್ಲಿಕಾಂಡಾ ಸೇರಿದಂತೆ ಎಲ್ಲ ಅಭ್ಯರ್ಥಿಗಳು ಪರಾಭವಗೊಂಡಿದ್ದು ಮಾತ್ರವಲ್ಲದೆ ಇಬ್ಬರು ತಮ್ಮ ಠೇವಣಿಯನ್ನೂ ಕಳೆದುಕೊಂಡರು.

ಇಂಡಿಯನ್ ನ್ಯಾಷನಲ್ ಲೋಕ್ ದಳ (ಐಎಮ್‌ಎಲ್‌ಡಿ) ನಾಯಕ ಅಜಯ್ ಚೌಟಾಲ ಅವರ ಆಪ್ತರಾಗಿದ್ದರು ಕಾಂಡಾ. ಆದರೆ 2009ರಲ್ಲಿ ಅವರಿಗೆ ಚುನಾವಣಾ ಟಿಕೆಟ್ ಸಿಗಲಿಲ್ಲ.ಹಾಗಾಗಿ ಐಎನ್‌ಎಲ್‌ಡಿ ಅಭ್ಯರ್ಥಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾಂಡಾ 6, 521 ಮತಗಳ ಅಂತರದಿಂದ ಗೆದ್ದಿದ್ದರು. ಆಮೇಲೆ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕಾಂಡಾ ಬೆಂಬಲ ನೀಡಿ ಅಲ್ಲಿ ಸಚಿವರಾದರು.

ಉದ್ಯಮಿ ಕಾಂಡಾ
1965 ಡಿಸೆಂಬರ್ 29ರಂದು ಜನಿಸಿದ ಗೋಪಾಲ್ ಕುಮಾರ್ಕಾಂಡಾ 10ನೇ ತರಗತಿ ಡ್ರಾಪ್ ಔಟ್ .2005ರಲ್ಲಿ ಎಂಎಲ್‌ಡಿಆರ್ ವಿಮಾನ ಸಂಸ್ಥೆಯನ್ನು ಆರಂಭಿಸಿದರು, ಆಮೇಲೆ ಗೋಲ್ಡನ್ ಗ್ಲೋಬ್ ಹೋಟೆಲ್ಸ್ ಪ್ರೈ ಲಿಮಿಟೆಡ್ ಆರಂಭಿಸಿದ ಅವರು ಗುರುಗ್ರಾಮದಲ್ಲಿಹಲವಾರು ಹೋಟೆಲ್, ಮಾಲ್‌ಗಳನ್ನು ತೆರೆದರು. 2012ರಲ್ಲಿಎಂಎಲ್‌ಡಿಆರ್ ವಿಮಾನ ಸಂಸ್ಥೆ ಮುಚ್ಚಿ ಹೋಯಿತು.

ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದ ಆರೋಪಕ್ಕಿಂತ ಮುಂಚೆಯೇ ಕಾಂಡಾ ವಿರುದ್ಧ ಅಪರಾಧ ಪ್ರಕರಣವೊಂದು ದಾಖಲಾಗಿತ್ತು. ₹40 ಕೋಟಿ ಆದಾಯ ತೆರಿಗೆ ಪಾವತಿ ಮಾಡದೆ ತಪ್ಪಿಸಿಕೊಂಡಿದ್ದಾರೆ ಎಂಬ ಆರೋಪವು ಕಾಂಡಾ ಮತ್ತು ಅವರ ಪತ್ನಿ ಮೇಲಿದೆ. ಗೀತಿಕಾ ಶರ್ಮಾ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಆದಾಯ ತೆರಿಗೆ ಪ್ರಕರಣ ಮಂಕಾಯಿತು.

ಕಾಂಡಾ ಅವರು ಹಲವಾರು ಕಂಪನಿಗಳಿಗೆ ವಂಚನೆ ನಡೆಸಿದ್ದಾರೆ ಎಂಬ ಆರೋಪದಲ್ಲಿ 2018 ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ದಳ ಕೇಸು ದಾಖಲಿಸಿತ್ತು. ಈ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ.

ಬಿಜೆಪಿ ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ನೇೃತ್ವದ ಸರ್ಕಾರಕ್ಕೆಕಾಂಡಾ ಬೆಂಬಲ ಪಡೆದಿದ್ದರೂ ಅವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಮೂಲಗಳು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT