ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಔಟ್‌ಬ್ರೇಕ್: ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧ ರಫ್ತು ನಿಷೇಧಿಸಿದ ಕೇಂದ್ರ

Last Updated 25 ಮಾರ್ಚ್ 2020, 9:25 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕು (ಕೋವಿಡ್–19) ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧ ‘ಹೈಡ್ರಾಕ್ಸಿಕ್ಲೋರೊಕ್ವಿನ್’ ರಫ್ತನ್ನು ಕೇಂದ್ರ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಬುಧವಾರ ನಿಷೇಧಿಸಿದೆ. ದೇಶದ ಮಾರುಕಟ್ಟೆಯಲ್ಲಿ ಔಷಧ ಕೊರತೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಶಂಕಿತ ಮತ್ತು ದೃಢೀಕೃತ ಕೊರೊನಾ ವೈರಸ್ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಒದಗಿಸಿಕೊಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿರ್ದೇಶಕ ಜನರಲ್ ಬಲರಾಮ್ ಭಾರ್ಗವ ಸೋಮವಾರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಐಸಿಎಂಆರ್ ರಚಿಸಿರುವ ರಾಷ್ಟ್ರೀಯ ಕೊರೊನಾ ಟಾಸ್ಕ್‌ಫೋರ್ಸ್‌ ಶಿಫಾರಸು ಮಾಡಿರುವ ಔಷಧವನ್ನು ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಯಲ್ಲಿ ಬಳಸಲು ‘ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಅನುಮೋದನೆ ನೀಡಿತ್ತು.

ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ನಿಷೇಧಿಸಿರುವ ಬಗ್ಗೆ ‘ವಿದೇಶಿ ವ್ಯಾಪಾರ ಮಹಾಪ್ರಧಾನ ನಿರ್ದೇಶನಾಲಯ (ಡಿಜಿಎಫ್‌ಟಿ)’ ಬುಧವಾರ ಅಧಿಸೂಚನೆ ಹೊರಡಿಸಿದೆ. ಆದಾಗ್ಯೂ, ಮಾನವೀಯ ನೆಲೆಗಟ್ಟಿನ ಆಧಾರದಲ್ಲಿ ಪ್ರಕರಣಗಳ ಗಂಭೀರತೆ ನೋಡಿಕೊಂಡು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಿಫಾರಸಿನ ಮೇರೆಗೆ ಔಷಧ ರಫ್ತು ಮಾಡಲು ಸರ್ಕಾರ ಅನುವು ಮಾಡಿಕೊಡಲಿದೆ ಎಂದು ಡಿಜಿಎಫ್‌ಟಿ ತಿಳಿಸಿದೆ.

ಕೋವಿಡ್‌–19ಕ್ಕೆ ಚಿಕಿತ್ಸೆ ನೀಡುವಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮತ್ತು ಕ್ಲೋರೊಕ್ವಿನ್ ಪರಿಣಾಮಕಾರಿಯಾಗಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಆ ಬಳಿಕ ಈ ಔಷಧದ ರಫ್ತಿನ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT