ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಣ ನಿರ್ಬಂಧ ಇದ್ದೇ ಇರುತ್ತದೆ

Last Updated 10 ಜನವರಿ 2020, 20:00 IST
ಅಕ್ಷರ ಗಾತ್ರ

ಇಂಟರ್‌ನೆಟ್‌ ಸೇವೆಯನ್ನು ಅಬಾಧಿತವಾಗಿ ಪಡೆಯುವುದು ಸಾರ್ವಜನಿಕರ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಸರಿಯಾಗಿಯೇ ಇದೆ. ರಾಷ್ಟ್ರದ ಸುರಕ್ಷತೆ ಮತ್ತು ಮೂಲಭೂತ ಹಕ್ಕು ಇವೆರಡೂ ಸಮತೋಲಿತವಾಗಿರಬೇಕು ಎಂಬುದು ತೀರ್ಪಿನ ಆಶಯ. ಈ ತೀರ್ಪನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. ಈ ಹಿಂದೆ ಕೇರಳ ಹೈಕೋರ್ಟ್‌ ಈ ವಿಷಯವಾಗಿ ಇದೇ ರೀತಿಯ ತೀರ್ಪು ನೀಡಿತ್ತು. ಸಂವಿಧಾನದ ಪರಿಚ್ಛೇದ 19ರ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆ. ಇಂಟರ್‌ನೆಟ್ ಸೇವೆ ನೀಡುವುದು ಅದರ ಒಂದು ಭಾಗ ಎಂಬುದನ್ನು ಸುಪ್ರೀಂಕೋರ್ಟ್‌ ಈಗ ಎತ್ತಿ ಹಿಡಿದಿದೆ.

ಇದರಿಂದಾಗಿ ಪರಿಚ್ಛೇದ 19ರ ಅಡಿ ಅನ್ವಯವಾಗುವ ಎಲ್ಲ ಷರತ್ತುಗಳೂ ಮತ್ತು ಸಕಾರಣ ನಿರ್ಬಂಧಗಳು (reasonable restrictions) ಇಂಟರ್‌ನೆಟ್‌ ಸೇವೆಯ ಮೇಲೆ ಇನ್ನು ಮುಂದೆಯೂ ಅನ್ವಯವಾಗುತ್ತದೆ. ಸಾಮಾಜಿಕ ಸುವ್ಯವಸ್ಥೆ, ರಾಷ್ಟ್ರದ ಭದ್ರತೆಗೆ ಅಪಾಯ ಬಂದಾಗ ಸಕಾರಣಾತ್ಮಕನಿರ್ಬಂಧಗಳನ್ನು ವಿಧಿಸಲು ಅವಕಾಶವಿದೆ. ಎನ್‌ಡಿಎ ಸರ್ಕಾರ ಇದನ್ನು ಸ್ವಾಗತ ಮಾಡುತ್ತದೆ. ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಆಗಿಲ್ಲ. ಜಮ್ಮು–ಕಾಶ್ಮೀರ ಅಥವಾ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಂದ ಕಾರಣಕ್ಕೆ ಅಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಇಂಟರ್‌ನೆಟ್ ಸೇವೆಯೂ ಅಭಿವ್ಯಕ್ತಿ ಸ್ವಾತಂತ್ರ್ಯದ, ಮೂಲಭೂತ ಹಕ್ಕಿನ ಒಂದು ಅಂಗ ಎಂಬುದನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಿದೆ. ಪರಿಚ್ಛೇದ 19, 1(ಎ) ರ ಅನ್ವಯ ಪತ್ರಿಕೆ, ಭಾಷಣ, ಸಿನಿಮಾಗಳಲ್ಲಿ ದೇಶದ ಭದ್ರತೆ ಮತ್ತು ಐಕ್ಯತೆ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ನಿರ್ಬಂಧ ವಿಧಿಸಲು ಅವಕಾಶ ಇದೆ. ಅದು ಇಂಟರ್‌ನೆಟ್‌ಗೂ ಅನ್ವಯವಾಗುತ್ತದೆ.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಥವಾ ರಾಷ್ಟ್ರದ ಸುರಕ್ಷತೆಗೆ ಅಪಾಯ ಒದಗಿದರೆ ಸಕಾರಣಗಳ ಮೂಲಕ ನಿರ್ಬಂಧ ವಿಧಿಸಬಹುದು. ಹಾಗೆಂದು ಮನ ಬಂದಂತೆ ತಿಂಗಳುಗಟ್ಟಲೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ನಿರ್ಬಂಧವನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಅದನ್ನು ಮುಂದುವರಿಸುವ ಅಥವಾ ತೆಗೆಯುವ ನಿರ್ಧಾರ ಸರ್ಕಾರ ತೆಗೆದುಕೊಳ್ಳಬಹುದು. ಜಮ್ಮು–ಕಾಶ್ಮೀರದಲ್ಲೂ ಕೇಂದ್ರ ಸರ್ಕಾರ ಸಂವಿಧಾನದ ಆಶಯದಂತೆಯೇ ನಡೆದುಕೊಳ್ಳುತ್ತಿದೆ. ಆರಂಭದಲ್ಲಿ ಎಲ್ಲ ಕಡೆಗಳಲ್ಲಿ ಸೆಕ್ಷನ್‌ 144 ವಿಧಿಸಲಾಗಿತ್ತು. ಪರಿಶೀಲನೆ ಬಳಿಕ ಹಂತ ಹಂತವಾಗಿ ಅದನ್ನು ತೆಗೆಯಲಾಯಿತು. ಈಗ 3 ಅಥವಾ 4 ಪೊಲೀಸ್‌ ಠಾಣೆ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ಎಲ್ಲೂ 144ನೇ ಸೆಕ್ಷನ್‌ ಜಾರಿ ಇಲ್ಲ. ಅದೇ ರೀತಿಯಲ್ಲಿ ಇಂಟರ್‌ನೆಟ್‌ ಸೇವೆಯ ಬಗ್ಗೆ ಕಾಲಕಾಲಕ್ಕೆ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಎಷ್ಟು ಭಾಗಕ್ಕೆ ಸೇವೆ ನೀಡಬೇಕು ಮತ್ತು ಎಷ್ಟು ಭಾಗಕ್ಕೆ ನಿರ್ಬಂಧ ಇರಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಶಾಂತಿ ಮತ್ತು ಸುವ್ಯವಸ್ಥೆ ಪರಿಶೀಲಿಸಿ ಹಂತ ಹಂತವಾಗಿ ಇಂಟರ್‌ನೆಟ್‌ ಸೇವೆ ನೀಡಲಾಗುತ್ತಿದೆ. ಸರ್ಕಾರ ಪರಿಚ್ಛೇದ 19 1(ಎ) ರ ಆಶಯದ ಪ್ರಕಾರವೇ ನಡೆದುಕೊಂಡಿದೆ.

ಲೇಖಕ: ಬೆಂಗಳೂರುದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT