ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಅಧಿವೇಶನದಲ್ಲಿ 27 ಹೊಸ ಮಸೂದೆಗಳನ್ನು ಮುಂದಿಡಲು ಸರ್ಕಾರ ಸಜ್ಜು

Last Updated 15 ನವೆಂಬರ್ 2019, 3:07 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 27 ಹೊಸ ಮಸೂದೆಗಳನ್ನು ಮುಂದಿಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳಲ್ಲಿ ದೇಶದ ಗಮನ ಸೆಳೆದಿರುವ ಪೌರತ್ವ(ತಿದ್ದುಪಡಿ) ಮಸೂದೆ ಮತ್ತು ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆಯೂ ಒಳಗೊಂಡಿರಲಿದೆ.

ಹಣಕಾಸು, ವ್ಯಾಪಾರ, ತೆರಿಗೆ, ಆರೋಗ್ಯ ಹಾಗೂ ಶಿಕ್ಷಣ ವಲಯಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯ ಮುಂದಿಡುವ ಉದ್ದೇಶ ಇರುವುದಾಗಿ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಅನುಮೋದನೆಯಾಗದೆ ಉಳಿದಿರುವ ಏಳು ಮಸೂದೆಗಳನ್ನು ಅಂಗೀಕರಿಸಲುಇದೇ ಅವಧಿಯಲ್ಲಿ ಉದ್ದೇಶಿಸಲಾಗಿದೆ.

17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಸಂಸತ್ತು 30 ಮಸೂದೆಗಳನ್ನು ಅಂಗೀಕರಿಸಿದೆ.

ಲೋಕಸಭೆಯ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್‌ ಶಾ
ಲೋಕಸಭೆಯ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್‌ ಶಾ

ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಹೊಂದಿರುವ ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರದ ಮೇಲೆ ಸರ್ಕಾರ ಹೆಚ್ಚಿನ ಗಮನ ಹರಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘನಿಸ್ತಾನದ ಮುಸ್ಲಿಮೇತರ ನಾಗರಿಕರಿಗೆ ಪೌರತ್ವ ನೀಡುವ ಮಸೂದೆಯ ಅಗತ್ಯವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಬಿಜೆಪಿ ಮುಖಂಡರು ನಿರಂತರವಾಗಿ ಉಲ್ಲೇಖಿಸಿದ್ದಾರೆ.

ಮುಸ್ಲಿಮರನ್ನು ಸರ್ಕಾರ ಗುರಿಯಾಗಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದು, ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ ಸಾಗರೋತ್ತರ ಭಾರತೀಯರ ಪೌರತ್ವವನ್ನು ರದ್ದು ಪಡಿಸುವ ಅವಕಾಶಗಳನ್ನು ಮಸೂದೆ ಒಳಗೊಂಡಿದೆ ಎಂದು ಟೀಕಿಸಿವೆ.

ಡಿಜಿಟಲ್‌ ಆರ್ಥಿಕತೆಯ ಬೆಳವಣಿಗೆ ಉದ್ದೇಶದೊಂದಿಗೆ ನಾಗರಿಕರ ವೈಯಕ್ತಿಕ ಮಾಹಿತಿ ರಕ್ಷಣೆ ಸಾಧ್ಯವಾಗಿಸಲು 'ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ' ಅಂಗೀಕಾರ ಪಡೆಯಲು ಸಜ್ಜಾಗಿದೆ. ಎಲೆಕ್ಟ್ರಾನಿಕ್‌ ಸಿಗರೇಟ್‌ ನಿಷೇಧಿಸುವ ಮಸೂದೆ, ತೆರಿಗೆ ಕಾನೂನುಗಳಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಹಾಗೂಹೊಸ ಹೂಡಿಕೆಗಳನ್ನು ಉತ್ತೇಜನ ನೀಡಲು ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುವ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ.

ಹೂಡಿಕೆಗೆ ಸಂಬಂಧಿಸಿದಂತೆ ಪಾರದರ್ಶಕತೆಗೆ ಒತ್ತು ಹಾಗೂ ವಹಿವಾಟು ಪ್ರಕ್ರಿಯೆ ಸುಲಭಗೊಳಿಸುವ ಕಂಪನಿ(ದ್ವಿತೀಯ ತಿದ್ದುಪಡಿ) ಮಸೂದೆ, ಬದಲಾಗಿರುವ ಮಾರುಕಟ್ಟೆಯ ಅವಶ್ಯಕತೆಗಳನ್ನು ತೋರುವ ಸ್ಪರ್ಧಾ(ತಿದ್ದುಪಡಿ) ಮಸೂದೆ ಹಾಗೂ ಕೈಗಾರಿಕೆ, ಕಾರ್ಮಿಕರಿಗೆ ಸಂಬಂಧಿಸಿದ ಮಸೂದೆಗಳೂ ಸಾಲಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT