ಬುಧವಾರ, ಜನವರಿ 29, 2020
30 °C

ಸ್ಟೇಟಸ್‌ಗಾಗಿ ಇನ್ನೊಂದು ಮದುವೆಯಾಗಲು ಹೊರಟ ಐಪಿಎಸ್ ಅಧಿಕಾರಿ ಅಮಾನತು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಐಪಿಎಸ್‌ಗೆ ಆಯ್ಕೆಯಾದ ನಂತರ ಹಳೇ ಹೆಂಡತಿಗೆ ವಿಚ್ಛೇದನ ಕೊಟ್ಟು ತನ್ನ ಅಂತಸ್ತಿಗೆ ತಕ್ಕ ಹೊಸ ಹೆಂಡತಿಯನ್ನು ಹುಡುಕಿಕೊಳ್ಳಲು ಮುಂದಾಗಿದ್ದ ಪ್ರೊಬೆಷನರಿ ಅಧಿಕಾರಿಯನ್ನು ಗೃಹ ಇಲಾಖೆ ಅಮಾನತು ಮಾಡಿದೆ.

ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಕೆ.ವಿ.ಮಹೇಶ್ವರ ರೆಡ್ಡಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 126ನೇ ರ‍್ಯಾಂಕ್ ಗಳಿಸಿದ್ದರು. ಸಿಕಂದರಾಬಾದ್‌ನಲ್ಲಿ ರೈಲ್ವೆ ಇಲಾಖೆ ಉದ್ಯೋಗಿಯಾಗಿರುವ ಅವರ ಮೊದಲ ಹೆಂಡತಿ ಬಿರ್ದುಲ ಭವಾನಿ ನೀಡಿದ ದೂರು ಆಧರಿಸಿ ಮಹೇಶ್ವರ ರೆಡ್ಡಿ ಮೇಲೆ ಈಗ ಕೌಟುಂಬಿಕ ದೌರ್ಜನ್ಯ ಮತ್ತು ಜಾತಿನಿಂದನೆ ಪ್ರಕರಣ ದಾಖಲಾಗಿದೆ.

ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಕೇಂದ್ರ ಲೋಕಸೇವಾ ಆಯೋಗವು ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಮತ್ತು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಗಮನಕ್ಕೆ ತಂದಿದೆ.

ಫೆ.9, 2018ರಲ್ಲಿ ರೆಡ್ಡಿ ಮತ್ತು ಭವಾನಿ ಮದುವೆಯಾಗಿದ್ದರು. ಆದರೆ ರೆಡ್ಡಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಬೇರೆ ಯೋಚನೆ ಮಾಡಲು ಆರಂಭಿಸಿದ್ದರು. ತನ್ನ ಪೋಷಕರಿಂದ ಮದುವೆ ವಿಚಾರ ಮುಚ್ಚಿಟ್ಟಿದ್ದ ರೆಡ್ಡಿ, ತನ್ನ ಐಪಿಎಸ್ ಆಂತಸ್ತಿಗೆ ತಕ್ಕ ಹೊಸ ಹುಡುಗಿಯನ್ನು ಹುಡುಕಿ ಮದುವೆಯಾಗಲು ಮುಂದಾಗಿದ್ದರು.

ನಿನ್ನ ಅಪ್ಪ–ಅಮ್ಮನಿಗೆ ಮದುವೆ ವಿಷಯ ತಿಳಿಸು ಎಂದು ಎಷ್ಟು ಬಾರಿ ಹೇಳಿದರೂ ರೆಡ್ಡಿ ಕೇಳಲಿಲ್ಲ. ಆದರೆ ಐಪಿಎಸ್‌ಗೆ ಆಯ್ಕೆಯಾದ ನಂತರ, ಮದುವೆಗಾಗಿ ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದಾರೆ. ನಮ್ಮ ಮದುವೆ ವಿಷಯ ಹೊರಗೆಲ್ಲಾದರೂ ಬಾಯ್ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದರಿಲ್ಲ ಎಂದು ರೆಡ್ಡಿ ಹೆದರಿಸಿದ್ದ ಎಂದು ಭವಾನಿ ತಿಳಿಸಿದರು.

ನನ್ನ ದೂರು ಸ್ವೀಕರಿಸಿದ ಪೊಲೀಸರು ರೆಡ್ಡಿಗೆ ಬುದ್ಧಿ ಹೇಳಲು ಯತ್ನಿಸಿದರು. ಆದರೆ ಆತ ನನ್ನನ್ನು ವಿಚ್ಛೇದನ ಬೇಕೆಂದು ಹಟ ಹಿಡಿದ. ನನ್ನ ಕಾಲ್ ರಿಸೀವ್ ಮಾಡದೆ, ಮೆಸೇಜ್‌ಗಳಿಗೆ ರಿಪ್ಲೈ ಮಾಡುವುದನ್ನು ನಿಲ್ಲಿಸಿದ. ನನಗೆ ಸರ್ಕಾರದಿಂದ ನ್ಯಾಯ ಸಿಗುವ ವಿಶ್ವಾಸವಿತ್ತು ಎಂದು ಹೇಳಿದರು.

‘ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ದೋಷಿಮುಕ್ತರಾಗಿ ಹೊರ ಬಂದರೆ ರೆಡ್ಡಿ ಅವರ ನೇಮಕಾತಿಯನ್ನು ಮರುಪರಿಶೀಲಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು