ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ರಸ್ತೆ ನಿರ್ಮಾಣಕ್ಕೆ ವೇಗ ತುಂಬಲು ತೀರ್ಮಾನ

Last Updated 22 ಜೂನ್ 2020, 19:38 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ಚೀನಾ ಗಡಿಯಲ್ಲಿನ 32 ರಸ್ತೆ ಕಾಮಗಾರಿಗಳನ್ನು ಇನ್ನಷ್ಟು ತ್ವರಿತಗೊಳಿಸಲು ನಿರ್ಧರಿಸಲಾಗಿದೆ. ಈ ಪ್ರದೇಶದಲ್ಲಿನ ರಸ್ತೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಯಿತು. ಕಾಮಗಾರಿಗೆ ವೇಗ ತುಂಬಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉನ್ನತ ಮಟ್ಟದ ಈ ಸಭೆಯನ್ನು ಕೇಂದ್ರ ಗೃಹ ಸಚಿವಾಲಯವು ಆಯೋಜಿಸಿತ್ತು. ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ), ಗಡಿ ರಸ್ತೆ ಸಂಘಟನೆ (ಬಿಆರ್‌ಒ) ಮತ್ತು ಇಂಡೊ–ಟಿಬೆಟ್‌ ಗಡಿ ಪೊಲೀಸ್‌ನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಚೀನಾದ ಗಡಿ ಸಮೀಪದಲ್ಲಿನ 32 ರಸ್ತೆ ಯೋಜನೆಗಳ ಕಾಮಗಾರಿ ತ್ವರಿತಗೊಳ್ಳಲಿದೆ. ಸಂಬಂಧಪಟ್ಟ ಎಲ್ಲ ಸಂಸ್ಥೆಗಳು ಇದಕ್ಕೆ ಕೈಜೋಡಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ–ಚೀನಾ ಗಡಿಯಲ್ಲಿ 73 ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ಪೈಕಿ 12 ರಸ್ತೆಗಳನ್ನು ಸಿಪಿಡಬ್ಲ್ಯುಡಿ ನಿರ್ಮಿಸುತ್ತಿದೆ. 61 ರಸ್ತೆಗಳ ನಿರ್ಮಾಣ ಬಿಆರ್‌ಒ ಹೊಣೆ. ಕೇಂದ್ರ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ.

ಗಡಿ ಸಮೀಪದಲ್ಲಿ ಭಾರತವು ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹಾಗಾಗಿ, ರಸ್ತೆ ನಿರ್ಮಾಣವನ್ನು ಬೇಗನೆ ಪೂರ್ಣಗೊಳಿಸುವ ನಿರ್ಧಾರವು ಮಹತ್ವದ್ದಾಗಿದೆ.

ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣದ ಜತೆಗೆ ಇತರ ಸೌಲಭ್ಯಗಳಿಗೂ ಆದ್ಯತೆ ದೊರೆಯಲಿದೆ. ವಿದ್ಯುತ್‌, ಆರೋಗ್ಯ, ದೂರಸಂಪರ್ಕ ಮತ್ತು ಶಿಕ್ಷಣದ ವ್ಯವಸ್ಥೆಗಳನ್ನೂ ಇಲ್ಲಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಕ್ಕಟ್ಟು ಶಮನಕ್ಕೆ ಮಾತುಕತೆ

ಭಾರತ–ಚೀನಾ ಗಡಿಯಲ್ಲಿನ ಗಾಲ್ವನ್‌ ಕಣಿವೆ ಮತ್ತು ಪಾಂಗಾಂಗ್‌ ಸರೋವರ ಪ್ರದೇಶದ ಬಿಕ್ಕಟ್ಟು ಶಮನಕ್ಕಾಗಿ ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಎರಡನೇ ಸುತ್ತಿನ ಮಾತುಕತೆ ಸೋಮವಾರ ನಡೆದಿದೆ.

ಎರಡೂ ಕಡೆಗಳಲ್ಲಿ ವಿಶ್ವಾಸ ವೃದ್ಧಿಗೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆದಿದೆ. ಜೂನ್‌ 6ರಂದು ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಹಲವು ವಿಷಯಗಳಲ್ಲಿ ಒಮ್ಮತಕ್ಕೂ ಬರಲಾಗಿತ್ತು. ಗಾಲ್ವನ್‌ ಕಣಿವೆಯಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳವುದು ಅಂತಹ ಒಂದು ಅಂಶವಾಗಿತ್ತು. ಆದರೆ, ಜೂನ್‌ 15ರಂದು ಹಿಂದಿರುಗುವ ಸಂದರ್ಭದಲ್ಲಿಯೇ ಸಂಘರ್ಷ ನಡೆದು ಭಾರತದ 20 ಯೋಧರು ಹುತಾತ್ಮರಾಗಿದ್ದರು.

ಚೀನಾದಲ್ಲಿಯೂ ಭಾರಿ ಸಾವು ನೋವು ಆಗಿತ್ತು. ಮೃತಪಟ್ಟವರಲ್ಲಿ ಕಮಾಂಡರ್‌ ಮಟ್ಟದ ಅಧಿಕಾರಿಯೂ ಸೇರಿದ್ದಾರೆ ಎಂದು ಚೀನಾದ ನಿಯೋಗವು ಮಾತುಕತೆಯಲ್ಲಿ ದೃಢಪಡಿಸಿದೆ ಎನ್ನಲಾಗಿದೆ.

ಜೂನ್‌ 6ರಂದು ಸಹಮತಕ್ಕೆ ಬರಲಾಗಿದ್ದ ಅಂಶಗಳನ್ನು ಜಾರಿಗೆ ತರುವ ಬಗ್ಗೆ ಸೋಮವಾರ ಚರ್ಚೆ ನಡೆಸಲಾಗಿದೆ.

14 ಕೋರ್‌ನ ಕಮಾಂಡರ್‌ ಲೆ. ಜ. ಹರಿಂದರ್‌ ಸಿಂಗ್‌ ಭಾರತದ ನಿಯೋಗದ ನೇತೃತ್ವ ವಹಿಸಿದ್ದರೆ, ಟಿಬೆಟ್‌ ಮಿಲಿಟರಿ ಡಿಸ್ಟ್ರಿಕ್ಟ್‌ನ ಕಮಾಂಡರ್‌ ಚೀನಾದ ನಿಯೋಗದ ಮುಖ್ಯಸ್ಥರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT