ಮಂಗಳವಾರ, ನವೆಂಬರ್ 12, 2019
28 °C

ಹರಿಯಾಣ ವಿಧಾನಸಭಾ ಚುನಾವಣೆ : ಸಂಜೆವರೆಗೆ ಶೇ.50ರಷ್ಟು ಮತದಾನ

Published:
Updated:

ಹರಿಯಾಣ: ವಿಧಾನಸಭಾ ಚುನಾವಣೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ಶೇ. 50 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹರಿಯಾಣದಲ್ಲಿ 7 ಕ್ಷೇತ್ರಗಳಲ್ಲಿ ಮತದಾನ ಶೇ.60 ದಾಟಿದೆ. ಲೋಹರು ಶೇ.65, ನರ್ನಾಡ್ 63.75, ಗರ್ಹಿ ಸಂಪ್ಲ ಕಿಲೋಯ್ ಶೇ.62.10, ಪುನ್ಹಾನ ಶೇ. 61.20, ಹತಿನ್ ಶೇ.61.16, ಜುಲ್ಲಾನ ಮತ್ತು ಲಡ್ವಾ ಶೇ.61 ಮತ್ತು ಕೈತಾಲ್ ಕ್ಷೇತ್ರಗಳಲ್ಲಿ ಶೇ.60.13 ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ.

ನುಹ್ ಜಿಲ್ಲೆಯಲ್ಲಿ ಬೆಳಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಇದು ಮತದಾನಕ್ಕೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮತಗಟ್ಟೆಯ ಹೊರಗೆ ನಡೆದಿದ್ದು, ಘಟನೆಗೂ ಮತದಾನಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ. ಪರಿಸ್ಥಿತಿ ಈಗ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿಯ ಮುಖಂಡ ಮನೋಹರ್ ಲಾಲ್ ಕಟ್ಟರ್ ನೇತೃತ್ವ ವಹಿಸಿದ್ದು, 75 ಸ್ಥಾನಗಳನ್ನು ಗೆಲ್ಲುವ ಗುರಿಹೊಂದಿದ್ದಾರೆ.  ಮುಖ್ಯಮಂತ್ರಿಯೂ ಆಗಿರುವ ಮನೋಹರ್ ಲಾಲ್‌ಕಟ್ಟರ್ ಸೈಕಲ್‌ನಲ್ಲಿ ಬಂದು ಕರ್ನಲ್ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರೆ, ಜನ್ ನಾಯಕ ಜನತಾ ಪಾರ್ಟಿಯ ದುಶ್ಯಂತ್ ಚೌತಾಲಾ ತನ್ನ ಕುಟುಂಬದವರ ಜೊತೆ ಟ್ರಾಕ್ಟರ್ ನಲ್ಲಿ ಬಂದು ಮತಚಲಾಯಿಸಿದ್ದಾರೆ.

ಹರಿಯಾಣ ಕಾಂಗ್ರೆಸ್ ಮುಖ್ಯಸ್ಥರಾದ ಕುಮಾರಿ ಸೆಲ್ಜಾ, ಟಿಕ್ ಟಾಕ್ ಸ್ಟಾರ್ ಹಾಗೂ ಬಿಜೆಪಿ ಅಭ್ಯರ್ಥಿ ಸೋನಾಲಿ ಪೋಗತ್, ಕುಸ್ತಿ ಪಟು ಯೋಗೇಶ್ವರ್ ದತ್, ಸಚಿವೆ ಕವಿತಾ ಜೈನ್ ಎಲ್ಲರೂ ಸೋನಿಪತ್‌ನಲ್ಲಿ  ಮತಚಲಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)