ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್‌, ಬಬಿತಾ ಪೋಗಟ್‌ಗೆ ಟಿಕೆಟ್

ಮೊದಲ ಪಟ್ಟಿ
Last Updated 17 ಅಕ್ಟೋಬರ್ 2019, 10:08 IST
ಅಕ್ಷರ ಗಾತ್ರ

ಚಂಡೀಗಡ: ಹರಿಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಿದೆ. ಒಲಿಂಪಿಕ್‌ ಕ್ರೀಡಾಪಟುಗಳು, ಪಕ್ಷದ ವಕ್ತಾರರು ಹಾಗೂ ಪಕ್ಷಾಂತರಿಗಳಿಗೆ ಟಿಕೆಟ್‌ ಘೋಷಿಸಲಾಗಿದ್ದು, ಜಾಟ್‌ ಹೊರತಾದ ಸಮುದಾಯದವರೇ ಮೊದಲ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದಾರೆ.

78 ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯಲ್ಲಿ ಸೋಮವಾರ ಪ್ರಕಟಿಸಲಾಯಿತು. ಒಲಿಂಪಿಕ್‌ ಕುಸ್ತಿ ಪಟುಗಳಾದ ಯೋಗೇಶ್ವರ ದತ್‌ ಹಾಗೂ ಬಬಿತಾ ಪೋಗಟ್‌, ಇತ್ತೀಚೆಗೆ ಬಿಜೆಪಿ ಸೇರಿದ್ದ ಭಾರತೀಯ ಹಾಕಿ ತಂಡದ ನಾಯಕ ಸಂದೀಪ್‌ ಸಿಂಗ್‌ ಅವರು ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ.

ಹರಿಯಾಣದ ಇಬ್ಬರು ಸಚಿವರೂ ಸೇರಿದಂತೆ ಏಳು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ವಿಶೇಷವೆಂದರೆ, ಮುಸ್ಲಿಂ ಬಾಹುಳ್ಯದ ಎರಡು ಕ್ಷೇತ್ರಗಳಲ್ಲಿ ಪಕ್ಷವು ಮುಸ್ಲಿಮರನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್‌ ಬರಾಲಾ, ಸಚಿವ ಅನಿಲ್‌ ವಿಜ್‌, ರಾಮವಿಲಾಸ್‌ ಶರ್ಮಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಬಿಜೆಪಿ ಬಹುಮತ ಪಡೆದರೆ ಖಟ್ಟರ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವರು ಎಂಬ ಸೂಚನೆಯನ್ನು ಪಕ್ಷ ಈಗಾಗಲೇ ನೀಡಿದೆ.

ಬಿಜೆಪಿಯ ಮೊದಲ ಪಟ್ಟಿಯಲ್ಲಿ 9 ಮಹಿಳೆಯರು ಸ್ಥಾನ ಪಡೆದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಚೌಧರಿ ಬೀರೇಂದ್ರ ಸಿಂಗ್‌ ಅವರ ಪತ್ನಿ ಪ್ರೇಮಲತಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಇವರ ಪುತ್ರ, ಐಎಎಸ್‌ ಮಾಜಿ ಅಧಿಕಾರಿ ಬ್ರಿಜೇಂದ್ರ ಸಿಂಗ್‌ ಅವರು ಕಳೆದ ಲೋಸಕಭೆ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಪುತ್ರನಿಗೆ ಟಿಕೆಟ್‌ ಕೊಡಿಸುವ ಸಲುವಾಗಿ ಬೀರೇಂದ್ರ ಸಿಂಗ್‌ ಅವರು ತಮ್ಮ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.

ಕೇಂದ್ರದಲ್ಲಿ ಸಚಿವರಾಗಿರುವ ಹರಿಯಾಣ ಮೂಲದ ರಾವ್‌ ಇಂದ್ರಜಿತ್‌ ಸಿಂಗ್‌ ಹಾಗೂ ಕೃಷ್ಣಪಾಲ್‌ ಗುಜ್ಜರ್‌ ಅವರು ತಮ್ಮ ಮಕ್ಕಳಿಗೆ ಟಿಕೆಟ್‌ ನೀಡಬೇಕೆಂದು ಒತ್ತಡ ಹೇರಿದ್ದರಿಂದಾಗಿ ಬಿಜೆಪಿಯ ಪಟ್ಟಿ ಘೋಷಣೆ ವಿಳಂಬವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಬ್ಬರು ಹಾಲಿ ಸಚಿವರಿಗೆ ಟಿಕೆಟ್‌ ನೀಡದಿರುವುದರ ಹಿಂದೆಯೂ ಈ ಇಬ್ಬರ ಕೈವಾಡವಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನ ಮೊದಲ ಪಟ್ಟಿ ಮಂಗಳವಾರ ಘೋಷಣೆಯಾಗುವ ನಿರೀಕ್ಷೆ ಇದೆ.

ಅಲ್ಪೆಶ್‌, ಝಾಲಗೆ ಬಿಜೆಪಿ ಟಿಕೆಟ್‌

ಗುಜರಾತ್‌ ವಿಧಾನಸಭೆಯ ಆರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಕಾಂಗ್ರೆಸ್‌ ತ್ಯಜಿಸಿ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ಅಲ್ಪೆಶ್‌ ಠಾಕೂರ್‌ ಹಾಗೂ ಧವಳಸಿಂಹ ಝಾಲ ಅವರಿಗೆ ಟಿಕೆಟ್‌ ನೀಡಲಾಗಿದೆ. ಅಲ್ಪೆಶ್‌ ಮತ್ತು ಝಾಲ ಅವರು 2019ರ ಲೋಕಸಭಾ ಚುನಾವಣೆಗೂ ಕೆಲವೇ ದಿನಗಳ ಹಿಂದೆ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ್ದರು. ಅಲ್ಪೆಶ್‌ ಅವರು ರಾಧನ್‌ಪುರ ಮತ್ತು ಝಾಲ ಅವರು ಬಾಯಡ್‌ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಮತಪ್ರಮಾಣ ಹೆಚ್ಚಿಸುತ್ತಿರುವ ಕಾಂಗ್ರೆಸ್‌

ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 21ರಂದು ನಡೆಯಲಿರುವ ಚುನಾವಣೆಯು ಅಧಿಕಾರಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ವಿರೋಧಪಕ್ಷಗಳ ಮೈತ್ರಿಯ ನಡುವಿನ ನೇರ ಹಣಾಹಣಿಯಾಗಲಿದೆ.

ರಾಜ್ಯದ ರಾಜಕೀಯ ಚಿತ್ರಣವನ್ನು ನೋಡಿದರೆ ಕಾಂಗ್ರೆಸ್‌ ಪಕ್ಷವು ನೆಲಕಚ್ಚಿರುವಂತೆ ಭಾಸವಾಗುತ್ತದೆ. ಆದರೆ ಇಂಥ ಸ್ಥಿತಿಯಿಂದ ಕಾಂಗ್ರೆಸ್‌ ಪಕ್ಷವು ಮತ್ತೆ ಎದ್ದುಬಂದು ಅಧಿಕಾರ ಹಿಡಿದ ಉದಾಹರಣೆಗಳೂ ಇವೆ.

ರಾಜ್ಯದಲ್ಲಿ ಕಾಂಗ್ರೆಸ್‌ಪಕ್ಷವು ಗಳಿಸುವ ಸ್ಥಾನಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕಳೆದ ಕೆಲವು ವರ್ಷಗಳಿಂದ ಪಕ್ಷದ ಮತಪ್ರಮಾಣವು ಏರಿಕೆಯಾಗುತ್ತಲೇ ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ 22.99ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌, 2019ರ ಚುನಾವಣೆಯಲ್ಲಿ ಅದನ್ನು ಶೇ 29ಕ್ಕೆ ಏರಿಸಿಕೊಂಡಿತ್ತು. ಈ ಏರಿಕೆಯನ್ನು ಸ್ಥಾನಗಳಾಗಿ ಪರಿವರ್ತಿಸಲು ಸಾಧ್ಯವಾಗದಿರುವುದಕ್ಕೆ ‍ಪಕ್ಷದ ಸ್ವಯಂಕೃತ ತಪ್ಪುಗಳೇ ಕಾರಣ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಮತಗಳಿಕೆ ಪ್ರಮಾಣ ಏರಿಕೆಯಾಗಿತ್ತು.

ಈಗ ಪಕ್ಷ ಯಾವರೀತಿ ಚುನಾವಣಾ ಯೋಜನೆಯನ್ನು ರೂಪಿಸುತ್ತದೆ ಎಂಬುದರ ಮೇಲೆ ಅದರ ಭವಿಷ್ಯ ಅವಲಂಬಿಸಿದೆ. ಆಂತರಿಕ ಕಚ್ಚಾಟ ಜೋರಾದರೆ ಪಕ್ಷಕ್ಕೆ ಇನ್ನಷ್ಟು ಹಾನಿಯಾಗುವುದು ಖಚಿತ. ಇನ್ನೊಂದೆಡೆ, 2014ರ ನಂತರ ರಾಜ್ಯದಲ್ಲಿ ಬಿಜೆಪಿಯ ಮತಪ್ರಮಾಣ ಇಳಿಕೆಯಾಗುತ್ತಿರುವುದು ಗಮನಾರ್ಹ ಅಂಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT