ಶುಕ್ರವಾರ, ನವೆಂಬರ್ 22, 2019
20 °C
ಹರಿಯಾಣ ವಿಧಾನಸಭೆ ಚುನಾವಣೆ

ಸಾಮರ್ಥ್ಯ ಸಾಬೀತುಪಡಿಸಿದ ಅನನುಭವಿ ಖಟ್ಟರ್‌ : ಜಾಟರ ನಾಡಿನಲ್ಲಿ ಯಾರಿಗೆ ಜಯ?

Published:
Updated:

ಕರ್ನಾಲ್ (ಹರಿಯಾಣ): 2014ರವರೆಗೂ ಮನೋಹರ ಲಾಲ್‌ ಖಟ್ಟರ್‌ ಬಗ್ಗೆ ಬಹುತೇಕರಿಗೆ ತಿಳಿದಿರಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಚಾರಕರಾಗಿ, ತಳಮಟ್ಟದಲ್ಲಿ ಸದ್ದಿಲ್ಲದೇ ಸಂಘಟನೆ ಮಾಡುವ ವ್ಯಕ್ತಿ ಎಂಬುದು ಕೆಲವರಿಗಷ್ಟೇ ಗೊತ್ತಿತ್ತು. ಅಚ್ಚರಿಯೆಂಬಂತೆ ಬಿಜೆಪಿಗೆ ‘ವೈಲ್ಡ್‌ ಕಾರ್ಡ್ ಎಂಟ್ರಿ’ ಕೊಟ್ಟ ಅವರು ಹರಿಯಾಣದ ಮುಖ್ಯಮಂತ್ರಿ ಗಾದಿ ಮೇಲೆ ಕುಳಿತುಕೊಂಡರು. ಅನನುಭವಿಯಾಗಿ ರಾಜಕೀಯಕ್ಕೆ ಬಂದ ಖಟ್ಟರ್, ತಮ್ಮನ್ನು ಪೋಷಿಸಿದ ನರೇಂದ್ರ ಮೋದಿ ಅವರಂತೆ ಚತುರ ರಾಜಕಾರಣಿಯಾಗಿ ಬದಲಾದರು. 

ಖಟ್ಟರ್ ನೇತೃತ್ವದಲ್ಲಿ ಐದು ವರ್ಷದ ಆಳ್ವಿಕೆ ಬಿಜೆಪಿಗೆ ದೊಡ್ಡ ಗುಣಾತ್ಮಕ ಅಂಶ. ಜಾಟರ ನಾಡಿನಲ್ಲಿ ನಡೆಯುತ್ತಿರುವ ಈ ಚುನಾವಣೆ ಮೋದಿ ಸುತ್ತವೇ ಸುತ್ತಲಿದೆ. ಜೊತೆಗೆ ಖಟ್ಟರ್ ಅವರ ಕಳಂಕರಹಿತ ವ್ಯಕ್ತಿತ್ವ ಹಾಗೂ ಪ್ರಾಮಾಣಿಕತೆ ಇನ್ನಷ್ಟು ಬಲ ಕೊಡಲಿದೆ. ‘ಮೈ ಭೀ ಮನೋಹರ ಲಾಲ್’ ಎಂಬ ಘೋಷಣೆಯು ಕರ್ನಾಲ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಬಿಜೆಪಿಯ ರಾಷ್ಟ್ರೀಯವಾದಕ್ಕೆ ಹೂಡಾ ತಿರುಗೇಟು : ಜಾಟರ ನಾಡಿನಲ್ಲಿ ಯಾರಿಗೆ ಜಯ?

ಖಟ್ಟರ್ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡದ ಕಳಂಕರಹಿತ ಆಡಳಿತವನ್ನು ನೆನಪಿಸುತ್ತಾರೆ. ಒಂದಿಷ್ಟೂ ಅಕ್ರಮಕ್ಕೆ ಅವಕಾಶ ನೀಡದಂತೆ ಸರ್ಕಾರಿ ನೇಮಕಾತಿ ಮಾಡುವ ವಿಧಾನವನ್ನು ಅವರು ತಮ್ಮ ಅವಧಿಯಲ್ಲಿ  ತೋರಿಸಿಕೊಟ್ಟರು ಎಂದು ವಿಶ್ಲೇಷಕರು ಹೇಳುತ್ತಾರೆ. 

ಕೇಂದ್ರದ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳು, ಕಾರ್ಯಕ್ರಮಗಳನ್ನು ರಾಜ್ಯದ ಕಟ್ಟಕಡೆಯ ಗ್ರಾಮಗಳಿಗೂ ತಲುಪಿಸುವ ಬಗ್ಗೆ ಖಟ್ಟರ್ ಹೆಚ್ಚು ಗಮನ ಕೇಂದ್ರೀಕರಿಸಿದ್ದರು. ಈ ಎಲ್ಲವೂ ನಗರ ವರ್ಗದವರಿಗೆ ನೀರಸವಾಗಿ ಕಾಣಬಹುದು. ಆದರೆ ಪಕ್ಷದ ವಲಯದಲ್ಲಿ ಇವೆಲ್ಲ ಹೆಚ್ಚು ಮಹತ್ವ ಪಡೆದಿವೆ.  

ಖಟ್ಟರ್ ಅವರ ‘ಸ್ವಚ್ಛ ಆಡಳಿತ’ವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ ಕೇಳುತ್ತಿದೆ. ಜತೆಗೆ ಮೋದಿ ಅಲೆಯೂ ಜಾಟರ ನಾಡಿನ ಮತಗಳನ್ನು ಸೆಳೆಯಲು ನೆರವಾಗಲಿದೆ ಎಂದು ಪಕ್ಷ ಭಾವಿಸಿದೆ. 

ಹರಿಯಾಣದಲ್ಲಿ ಬಿಜೆಪಿಯ ಹೆಜ್ಜೆಗುರುತು ವ್ಯಾಪಿಸಿದ್ದು, ಅದೀಗ ಭದ್ರವಾಗಿ ನೆಲೆಯೂರಿದೆ. ನಿರ್ಣಾಯಕರಲ್ಲ ಎಂದೇ ಪರಿಗಣಿತವಾಗಿದ್ದ ಇತರ ಸಮುದಾಯಗಳನ್ನು ಒಗ್ಗೂಡಿಸಿದ ಖ್ಯಾತಿ ಅವರದ್ದು.

**

ರಾಷ್ಟ್ರದ ಹಿತಾಸಕ್ತಿಯಿಂದ ನಾವು ಕೈಗೊಂಡ ಕ್ರಮಗಳನ್ನು ಕೈಗೊಂಡಿದ್ದೇವೆ. ಇಂತಹ ನಿರ್ಧಾರ ಕೈಗೊಳ್ಳುವ ಛಾತಿ ಹಿಂದಿನ ಸರ್ಕಾರಗಳಿಗೆ ಇರಲಿಲ್ಲ.
-ನರೇಂದ್ರ ಮೋದಿ, ಪ್ರಧಾನಿ

**

ಎಲ್ಲರೂ ರಾಷ್ಟ್ರೀಯವಾದಿಗಳೇ. ಈ ದೇಶದಲ್ಲಿರುವ ಯಾರು ರಾಷ್ಟ್ರೀಯವಾದಿ ಅಲ್ಲ ಹೇಳೀ? ನನ್ನ ತಂದೆ ರಾಷ್ಟ್ರೀಯವಾದಿ, ತಾತ ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ.
-ಭೂಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ಚುನಾವಣಾ ಸಮಿತಿ ಮುಖ್ಯಸ್ಥ

**

1857ರ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದ ಶ್ರೇಯ ಸಾವರ್ಕರ್‌ಗೆ ಸಲ್ಲಬೇಕು. ಇತಿಹಾಸವನ್ನು ಪುನಃ ಬರೆಯುವ ಅಗತ್ಯವಿದೆ.
-ಅಮಿತ್ ಶಾ, ಕೇಂದ್ರ ಗೃಹಸಚಿವ

ಪ್ರತಿಕ್ರಿಯಿಸಿ (+)