ಶುಕ್ರವಾರ, ಜನವರಿ 21, 2022
30 °C

ಜೆಎನ್‌ಯು ಹಿಂಸಾಚಾರ: ಪ್ರತಿಕ್ರಿಯಿಸಲು ಪೊಲೀಸರಿಗೆ ದೆಹಲಿ ಹೈಕೋರ್ಟ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಜನವರಿ 5 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಗಳನ್ನು ಸಂರಕ್ಷಿಸಬೇಕು ಎಂದು ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ದೆಹಲಿ ಪೊಲೀಸರು, ಸರ್ಕಾರ, ವಾಟ್ಸ್‌ಆ್ಯಪ್‌, ಗೂಗಲ್‌ ಮತ್ತು ಆ್ಯಪಲ್‌ ಕಂಪನಿಯ ಪ್ರತಿಕ್ರಿಯೆ ಕೇಳಿದೆ. 

ಹಿಂಸಾಚಾರದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿ ಹಸ್ತಾಂತರಿಸುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ಕೇಳಲಾಗಿದೆ ಎಂದು ದೆಹಲಿ ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದರು.

ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಸಂದೇಶಗಳು, ಚಿತ್ರಗಳು ಮತ್ತು ವಿಡಿಯೊಗಳು ಹಾಗೂ ಸದಸ್ಯರ ಮೊಬೈಲ್‌ ಸಂಖ್ಯೆಗಳು ಸೇರಿದಂತೆ ‘ಎಡಗೈ ವಿರುದ್ಧ ಏಕತೆ’ ಮತ್ತು ‘ಆರ್‌ಎಸ್‌ಎಸ್‌ ಸ್ನೇಹಿತರು’ ಎಂಬ ಎರಡು ಗುಂಪುಗಳ ಮಾಹಿತಿಯನ್ನು ಸಂರಕ್ಷಿಸಲು ವಾಟ್ಸ್ಆ್ಯಪ್‌ಗೆ ಪೊಲೀಸರು ಪತ್ರ ಬರೆದಿದ್ದಾರೆ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. 

ಪ್ರಾಧ್ಯಾಪಕರಾದ ಅಮೀತ್‌ ಪರಮೇಶ್ವರನ್‌, ಅತುಲ್‌ ಸೂದ್‌ ಮತ್ತು ಶುಕ್ಲಾ ವಿನಾಯಕ ಸಾವಂತ್‌ ಅವರ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ಮಂಗಳವಾರಕ್ಕೆ ಮುಂದೂಡಿತು.

ತನಿಖೆ ನಡೆಸಿದ ಪೊಲೀಸರ ತಂಡ 

ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಕುರಿತು ದೆಹಲಿ ಅಪರಾಧ ದಳದ ಪೊಲೀಸರ ತಂಡವೊಂದು ಸೋಮವಾರ ಕ್ಯಾಂಪಸ್‌ನಲ್ಲಿ ತನಿಖೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಾರುವೇಷದ ಕಾರ್ಯಾಚರಣೆ ನಡೆಸಿದ ಸುದ್ದಿ ವಾಹಿನಿಯೊಂದರ ಕ್ಷತ್‌ ಅವಸ್ಥಿ ಮತ್ತು ರೋಹಿತ್‌ ಶಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಹಲ್ಲೆ ನಡೆದ ಸಂದರ್ಭದಲ್ಲಿ ಮುಸುಕುಧಾರಿ ಯುವತಿಯನ್ನು ಕೋಮಲ್‌ ಶರ್ಮಾ ಎಂದು ಗುರುತಿಸಲಾಗಿದೆ. ದೌಲತ್‌ ರಾಮ್‌ ಕಾಲೇಜಿನ ವಿದ್ಯಾರ್ಥಿನಿಯಾದ ಕೋಮಲ್‌ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು 

ಶುಲ್ಕ ಹೆಚ್ಚಿಸಿದ್ದನ್ನು ವಿರೋಧಿಸಿ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಸೋಮವಾರದಿಂದ ಆರಂಭವಾಗಬೇಕಿದ್ದ ತರಗತಿಗಳು ನಡೆಯಲಿಲ್ಲ. 

ಹೆಚ್ಚಿಸಿರುವ ಹಾಸ್ಟೇಲ್‌ ಶುಲ್ಕ ಹೊರತುಪಡಿಸಿ ಬೋಧನಾ ಶುಲ್ಕವನ್ನು ಮಾತ್ರ ಪಾವತಿಸುವುದರ ಮೂಲಕ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ವಿದ್ಯಾರ್ಥಿ ಸಂಘವು ಈ ಮೊದಲೇ ತಿಳಿಸಿತ್ತು. ಆದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಅನೇಕ ವಿದ್ಯಾರ್ಥಿಗಳ ನೋಂದಣಿ ಪೋರ್ಟಲ್‌ ಅನ್ನು ತಡೆಹಿಡಿದಿದೆ ಎಂಬುದು ಗೊತ್ತಾದ ನಂತರ ವಿದ್ಯಾರ್ಥಿ ಸಂಘವು ತನ್ನ ನಿರ್ಣಯವನ್ನು ತಡೆಹಿಡಿದಿದೆ. 

ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಸಹಕಾರಕ್ಕೆ ಪ್ರಾಧ್ಯಾಪಕರ ಸಂಘ ಸಹ ಕರೆ ನೀಡಿದೆ. ಕುಲಪತಿ ಎಂ.ಜಗದೀಶಕುಮಾರ್‌ ಅವರನ್ನು ವಜಾಗೊಳಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ.

ಅಸಹಕಾರ ಹೋರಾಟ ಕೈಬಿಡಲು ಪ್ರಾಧ್ಯಾಪಕರಿಗೆ ಸಲಹೆ 

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಸಹಕಾರ ಹೋರಾಟದ ನಿರ್ಧಾರವನ್ನು ಕೈಬಿಟ್ಟು ತರಗತಿಗಳಿಗೆ ಮರಳಬೇಕು ಎಂದು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪ್ರಾಧ್ಯಾಪಕರಿಗೆ ಸಲಹೆ ನೀಡಿದೆ.

ಜೆಎನ್‌ಯು ಪ್ರಾಧ್ಯಾಪಕರ ಸಂಘವು ಶೈಕ್ಷಣಿಕ ಚಟುವಟಿಕೆಗಳಿಗೆ ಅಸಹಕಾರ ನೀಡುವುದಾಗಿ ಪ್ರಕಟಿಸಿದ ನಂತರ ಆಡಳಿತ ಮಂಡಳಿ ಈ ಸಲಹೆ ನೀಡಿದೆ. 

‘ಅಸಹಕಾರದಿಂದ ಕ್ಯಾಂಪಸ್‌ನಲ್ಲಿ ಸಾಮಾನ್ಯ ಸ್ಥಿತಿ ಪುನಃ ಸ್ಥಾಪಿಸಲು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಪುನರ್‌ ಆರಂಭಿಸುವ ಆಡಳಿತ ಮಂಡಳಿಯ ಪ್ರಯತ್ನಗಳಿಗೆ ತೊಂದರೆಯಾಗಲಿದೆ. ಇದಲ್ಲದೇ ಸಾಮಾನ್ಯ ಕಾರ್ಯಗಳಿಗೂ ಅಡ್ಡಿಪಡಿಸುವ ಉದ್ದೇಶವನ್ನು ಪ್ರಾಧ್ಯಾಪಕರ ಸಂಘ ಉದ್ದೇಶಿಸಿದೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ’ ಎಂದು ವಿಶ್ವವಿದ್ಯಾಲಯ ನೀಡಿರುವ ಸಲಹಾ ಹೇಳಿಕೆಯಲ್ಲಿ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು