ಶುಕ್ರವಾರ, ಏಪ್ರಿಲ್ 3, 2020
19 °C
ಈಶಾನ್ಯ ದೆಹಲಿಯಲ್ಲಿ ಸಿಎಎ ಪರ– ವಿರೋಧಿ ಗುಂಪುಗಳ ನಡುವೆ ಹೊಯ್‌ಕೈ

ಸಿಎಎ ಪರ– ವಿರೋಧಿ ಗುಂಪು ಘರ್ಷಣೆ: ಹೆಡ್‌ಕಾನ್‌ಸ್ಟೆಬಲ್‌ ಸೇರಿ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಮತ್ತು ವಿರೋಧಿ ಗುಂಪುಗಳ ನಡುವೆ ಈಶಾನ್ಯ ದೆಹಲಿಯ ವಿವಿಧೆಡೆ ಸೋಮವಾರವೂ ಘರ್ಷಣೆ ನಡೆದಿದ್ದು, ಹಿಂಸಾಚಾರದಲ್ಲಿ ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಡಿಸಿಪಿ ಸೇರಿದಂತೆ 11 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಗೋಕುಲ್‌ಪುರಿ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಾಗ ಹೆಡ್‌ ಕಾನ್‌ಸ್ಟೆಬಲ್‌ ರತನ್‌ ಲಾಲ್‌ (42) ಮೃತಪಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗ ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್‌ ಫರ್ಕ್ವಾನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರತಿಭಟನಕಾರರು ಅಗ್ನಿಶಾಮಕ ದಳದ ವಾಹನ ಸೇರಿದಂತೆ ಹಲವು ವಾಹನಗಳಿಗೆ, ಮನೆಗಳು, ಪೆಟ್ರೋಲ್‌ ಬಂಕ್‌ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಗಲಭೆ ಪೀಡಿತ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದೆಹಲಿಯಲ್ಲಿ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ಜಾಫರಾಬಾದ್‌, ಚಾಂದ್‌ಬಾಗ್‌, ಭಜನ್‌ಪುರ, ಮೌಜ್‌ಪುರ ಮತ್ತು ಖಜೂರಿ ಖಾಸ್‌ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್‌ ಸಿಡಿಸಿದ್ದಾರೆ.

ಜಾಫರಾಬಾದ್‌ ಪ್ರದೇಶದಲ್ಲಿ ಪ್ರತಿಭಟನೆಯ ವೇಳೆ ಯುವಕನೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ಜಾಫರಾಬಾದ್‌ ಮತ್ತು ಮೌಜ್‌ಪುರ–ಬಾಬರ್‌ಪುರ ಸೇರಿದಂತೆ ಒಂಬತ್ತು ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳನ್ನು ಮುಚ್ಚಲಾಗಿದ್ದು, ಈ ನಿಲ್ದಾಣಗಳಲ್ಲಿ ಮೆಟ್ರೊ ರೈಲುಗಳು ನಿಲುಗಡೆಯಾಗುವುದಿಲ್ಲ ಎಂದು ದೆಹಲಿ ಮೆಟ್ರೊ ಟ್ವೀಟ್‌ ಮಾಡಿದೆ.

ಜಾಫರಾಬಾದ್‌ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಮೀಪ ಭಾನುವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಅನಂತರ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದ್ದರು. ಬಳಿಕ ಪ್ರತಿಭಟನೆ ಇತರೆಡೆಗೂ ವ್ಯಾಪಿಸಿತ್ತು.

ಕಾನೂನು ಸುವ್ಯವಸ್ಥೆ ಕಾಪಾಡಲು ಮನವಿ: ‘ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ತರುವ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಕಾನೂನು ಸುವ್ಯವಸ್ಥೆ ಪುನರ್‌ಸ್ಥಾಪಿಸಲು ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಒತ್ತಾಯಿಸಿದ್ದಾರೆ.

‘ಕೇಂದ್ರವೇ ಹೊಣೆ’: ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು