ಗುರುವಾರ , ಜುಲೈ 16, 2020
25 °C

ಆತ್ಮಾಹುತಿ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ: ಕಾಶ್ಮೀರದಲ್ಲಿ ಹೈ–ಅಲರ್ಟ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಶ್ರೀನಗರ: ಇಸ್ಲಾಂ ಧಾರ್ಮಿಕ ಆಚರಣೆ ರಂಜಾನ್‌ 17ನೇ ದಿನವಾದ ಇಂದು ಉಗ್ರರು ಆತ್ಮಾಹುತಿ ಬಾಂಬ್‌ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಕ್ರಿ.ಶ 7 ನೇ ಶತಮಾನದಲ್ಲಿ ಪ್ರವಾದಿ ಮೊಹಮದ್‌ ಮತ್ತು ಆತನ 300 ಸಹಚರರು ರಂಜಾನ್‌ ಆಚರಣೆಯ 17ನೇ ದಿನದಂದು ಅರಬ್‌ನ ಬುಡಕಟ್ಟು ಸಮುದಾಯದ ವಿರುದ್ಧ ಬರ್ದ್‌ ಕದನದಲ್ಲಿ ಜಯ ಸಾಧಿಸಿದ್ದರು. ಇಸ್ಲಾಂ ಧರ್ಮ ಆರಂಭದ ದಿನಗಳಲ್ಲಿ ದೊರೆತ ದೊಡ್ಡ ಜಯ ಇದು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಕಾಕತಾಳೀಯ ಎಂಬಂತೆ ಮೇ 11 ರಂಜಾನ್‌ ಆಚರಣೆಯ 17ನೇ ದಿನವಾಗಿದೆ.

ಕಣಿವೆ ರಾಜ್ಯದಲ್ಲಿ ಉಗ್ರರು ರಂಜಾನ್‌ ಆಚರಣೆಯ 17ನೇ ದಿನದಂದು ಸೇನಾ ಪಡೆ ಹಾಗೂ ಶಿಬಿರಗಳ ಮೇಲೆ ಈ ಹಿಂದೆಯೂ ದಾಳಿ ನಡೆಸಿದ್ದಾರೆ. ಹೀಗಾಗಿ ಕಟ್ಟೆಚ್ಚರ ವಹಿಸಲಾಗಿದೆ.

‘ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್, ಭದ್ರತಾ ಪಡೆಗಳನ್ನು ಗುರಿಯಾಗಿರಿಸಿ ಸೋಮವಾರ ದಾಳಿ ನಡೆಸಬಹುದು ಎಂದು ತಿಳಿದು ಬಂದಿದೆ. ಉಗ್ರರು ಕಾರ್ ಬಾಂಬ್ ಅಥವಾ ಆತ್ಮಾಹುತಿ ಬಾಂಬರ್‌ಗಳನ್ನು ಬಳಸಿಕೊಂಡು ದಾಳಿ ನಡೆಸುವ ಸಾಧ್ಯತೆಗಳಿವೆ’ ಎಂದು ಎಚ್ಚರಿಸಲಾಗಿದೆ.

ಕಳೆದ ಬುಧವಾರ ಹತ್ಯೆಯಾದ ಹಿಜ್ಬುಲ್‌–ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ರಿಯಾಜ್‌ ನೈಕೂ ಹತ್ಯೆಗೆ ಪ್ರತೀಕಾರವಾಗಿ ಉಗ್ರರು ದೊಡ್ಡ ಸಂಚು ನಡೆಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆತ್ಮಾಹುತಿ ದಾಳಿ ಎಚ್ಚರಿಕೆಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಲಷ್ಕರ್-ಎ-ತಯಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರರು ಕಾಶ್ಮೀರದಲ್ಲಿ ಇಂತಹ ದಾಳಿಗಳನ್ನು ನಡೆಸಬಲ್ಲರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದುವೇಳೆ ಉಗ್ರರು ಮೇ 11 ರಂದು ದಾಳಿ ನಡೆಸಲು ಸಾಧ್ಯವಾಗದಿದ್ದರೂ ಭೀತಿ ಇದ್ದೇ ಇರುತ್ತದೆ. ಹಾಗಾಗಿ ನಾವು ಸದಾ ಎಚ್ಚರದಿಂದ ಇರಲಿದ್ದೇವೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು