ಹಿಂದಿ ಹೇರಿಕೆ: ಕಾವು ಏರಿಕೆ

ಬುಧವಾರ, ಜೂನ್ 19, 2019
31 °C
ತಮಿಳುನಾಡಿನ ಆಕ್ರೋಶ ತಣಿಸಲು ಅಖಾಡಕ್ಕಿಳಿದ ಜೈಶಂಕರ್‌, ನಿರ್ಮಲಾ

ಹಿಂದಿ ಹೇರಿಕೆ: ಕಾವು ಏರಿಕೆ

Published:
Updated:

ನವದೆಹಲಿ: ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ ಎಂಬ ವಿವಾದ ಮತ್ತೆ ಕಾವು ಪಡೆದುಕೊಂಡಿದೆ. ಶಾಲೆಗಳಲ್ಲಿ ತ್ರಿಭಾಷಾ ಸೂತ್ರಅಳವಡಿಕೆಗೆ ತಮಿಳುನಾಡಿನ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಿಗೇ ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ‘ಭಾಷೆ ಹೇರಿಕೆಯು ಭಾಷಾ ಅಂಧಾಭಿಮಾನಕ್ಕೆ ಕಾರಣವಾಗುತ್ತದೆ. ಇದು ದೇಶದ ಒಗ್ಗಟ್ಟಿಗೆ ಮಾರಕ’ ಎಂದು ಸಿಪಿಎಂ ಹೇಳಿದೆ. 

ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಈ ವಿವಾದ ತಣಿಸಲು ಕೇಂದ್ರ ಸರ್ಕಾರವು ಮುಂದಕ್ಕೆ ಬಿಟ್ಟಿದೆ. 

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿದೆ. ಈ ಕರಡು ನೀತಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ತ್ರಿಭಾಷಾ ಸೂತ್ರದ ಭಾಗವಾಗಿ ಹಿಂದಿ ಹೇರಿಕೆಯ ವಿರುದ್ಧ  ತಮಿಳುನಾಡು ರಾಜಕಾರಣಿಗಳು ಭಾರಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೈಶಂಕರ್‌ ಅವರು, ರಾಜ್ಯಗಳ ಮೇಲೆ ಯಾವುದೇ ಭಾಷೆಯನ್ನು ಹೇರುವ ಉದ್ದೇಶವೇ ಇಲ್ಲ ಎಂದು ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ. 

‘ಮಾನವ ಸಂಪನ್ಮೂಲ ಸಚಿವರಿಗೆ ಸಲ್ಲಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಮಾತ್ರ. ಕರಡು ನೀತಿಯ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲಾಗುವುದು. ರಾಜ್ಯ ಸರ್ಕಾರಗಳ ಜತೆಗೂ ಸಮಾಲೋಚನೆ ನಡೆಸಲಾಗುವುದು. ಅದಾದ ಬಳಿಕವೇ ಕರಡು ನೀತಿಯನ್ನು ಅಂತಿಮಗೊಳಿಸಲಾಗುವುದು. ಭಾರತ ಸರ್ಕಾರವು ಎಲ್ಲ ಭಾಷೆಗಳನ್ನೂ ಗೌರವಿಸುತ್ತದೆ. ಯಾವುದೇ ಭಾಷೆಯನ್ನು ಹೇರಲಾಗುವುದಿಲ್ಲ’ ಎಂದು ಜೈಶಂಕರ್ ಟ್ವೀಟ್‌ ಮಾಡಿದ್ದಾರೆ. 

ಪ್ರಾಚೀನವಾದ ತಮಿಳು ಭಾಷೆಯ ಅಭಿವೃದ್ಧಿ ಮತ್ತು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ನಿರ್ಮಲಾ ಅವರು ಹೇಳಿದ್ದಾರೆ. 

ತಮಿಳುನಾಡನ್ನು ಪ್ರತಿನಿಧಿಸುವ ಸಚಿವರು ಕೇಂದ್ರದಲ್ಲಿ ಇಲ್ಲ. ಹಾಗಾಗಿ, ಜೈಶಂಕರ್‌ ಮತ್ತು ನಿರ್ಮಲಾ ಅವರ ಮೂಲಕ ವಿವಾದ ಶಮನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. 

ಈ ಸೂತ್ರವನ್ನು ಕೈಬಿಡುವುದು ಸಮಸ್ಯೆಗೆ ಪರಿಹಾರ ಅಲ್ಲ, ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ತ್ರಿಭಾಷಾ ಸೂತ್ರವನ್ನು 1960ರ ದಶಕದಲ್ಲಿಯೇ ಆರಂಭಿಸಲಾಗಿದೆ. ಆದರೆ, ಅದು ಯಾವತ್ತೂ ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಹೇಳಿದ್ದಾರೆ. 

ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು

ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ 

***

ಜನರೊಂದಿಗೆ ಸಮಾಲೋಚನೆಯ ಬಳಿಕವೇ ನೀತಿ ಅಂತಿಮಗೊಳ್ಳಲಿದೆ. ಪ್ರಧಾನಿಯವರು ಏಕ ಭಾರತ ಶ್ರೇಷ್ಠ ಭಾರತ ಎಂಬ ಪರಿಕಲ್ಪನೆಗೆ ಚಾಲನೆ ಕೊಟ್ಟಿದ್ದಾರೆ. ಎಲ್ಲ ಭಾಷೆಗಳಿಗೆ ಉತ್ತೇಜನ ನೀಡುವುದೇ ಇದರ ಉದ್ದೇಶ

ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ

***

ದಕ್ಷಿಣ ಭಾರತದ ಬಹುತೇಕ ಜನರು ಎರಡನೇ ಭಾಷೆಯಾಗಿ ಹಿಂದಿ ಕಲಿಯುತ್ತಾರೆ. ಆದರೆ, ಉತ್ತರ ಭಾರತದವರು ಮಲಯಾಳ ಅಥವಾ ತಮಿಳು ಭಾಷೆಯನ್ನು ಕಲಿಯುವುದೇ ಇಲ್ಲ

ಶಶಿ ತರೂರ್‌, ಕಾಂಗ್ರೆಸ್‌ ಸಂಸದ

***

ತ್ರಿಭಾಷಾ ಸೂತ್ರ ಇಲ್ಲ

1968ರ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೇ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿದೆ. 1986ರ ನೀತಿಯಲ್ಲಿಯೂ ಅದನ್ನು ಪುನರುಚ್ಚರಿಸಲಾಗಿದೆ. ಆದರೆ, ತಮಿಳುನಾಡು ಮಾತ್ರ 1969ರಿಂದಲೂ ದ್ವಿಭಾಷಾ ಸೂತ್ರ ಅನುಸರಿಸುತ್ತಿದೆ. 

ನೀತಿಯಲ್ಲಿ ಏನಿದೆ?

ತ್ರಿಭಾಷಾ ಸೂತ್ರವನ್ನು ದೇಶದಾದ್ಯಂತ ಅದರ ಸಂಪೂರ್ಣ ಅರ್ಥದಲ್ಲಿ ಜಾರಿ ಮಾಡಬೇಕಿದೆ. ಬಹುಭಾಷೆಯ ದೇಶದಲ್ಲಿ ಬಹುಭಾಷಾ ಸಂವಹನ ಕೌಶಲವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಈ ಸೂತ್ರ ಅಗತ್ಯ ಎಂದು ಕರಡು ನೀತಿಯಲ್ಲಿ ಹೇಳಲಾಗಿದೆ. 

ತೇಜಸ್ವಿ ಟ್ವೀಟ್‌ಗೆ ವಿರೋಧ 

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಲ್ಲಿ ಪ್ರಕಟಿಸಿರುವ ತ್ರಿಭಾಷಾ ಸೂತ್ರವನ್ನು ಸಮರ್ಥಿಸಿ  ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ನಿಮ್ಮ ಮಕ್ಕಳಿಗೆ ಏನಾದರೂ ಕಲಿಸಿ, ನಮ್ಮ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಸಾಕು’ ಎಂದು ಹರೀಶ್‌ ಕುಮಾರ್‌ ಎಂಬುವವರು ಟ್ರೋಲ್‌ ಮಾಡಿದ್ದಾರೆ. ಇತರ ಹಲವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ತ್ರಿಭಾಷಾ ಸೂತ್ರ ಹೊಸ ವಿಚಾರವೇನಲ್ಲ. ಕನ್ನಡಿಗನಾಗಿ ನನಗೆ ನನ್ನ ಮಾತೃಭಾಷೆ ಮೇಲೆ ಅಭಿಮಾನ ಇದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ತಿರುಚಿ, ತಪ್ಪಾಗಿ ವ್ಯಾಖ್ಯಾನಿಸಿ, ಹಿಂದಿ ಭಾಷೆ ಹೇರಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಶಿಕ್ಷಣ ನೀತಿ ಹಿಂದಿಯನ್ನು ಹೇರಿಕೆ ಮಾಡುತ್ತಿಲ್ಲ, ಬದಲಿಗೆ ಭಾಷೆ ಕಲಿಯಲು ಉತ್ತೇಜನ ನೀಡುತ್ತಿದೆ’ ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 2

  Frustrated
 • 8

  Angry

Comments:

0 comments

Write the first review for this !