ಶುಕ್ರವಾರ, ನವೆಂಬರ್ 22, 2019
20 °C
ಸ್ವಾಮೀಜಿಗಳ ಒಕ್ಕೂಟ ಅಖಿಲ ಭಾರತ ಅಖರ ಪರಿಷತ್‌ (ಎಐಎಪಿ) ಘೋಷಣೆ, ಶೀಘ್ರ ಅಭಿಯಾನ

ರಾಮಮಂದಿರ ನಂತರದ ಗುರಿ ಕಾಶಿ, ಮಥುರಾ

Published:
Updated:

ಲಖನೌ: ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಸ್ಥಳ ವಿವಾದ ಕುರಿತು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಹೊರಬೀಳುವ ಮುನ್ನವೇ ಸ್ವಾಮೀಜಿಗಳ ಒಕ್ಕೂಟ, ‘ಕಾಶಿ ಮತ್ತು ಮಥುರಾ ನಮ್ಮ ಮುಂದಿನ ಗುರಿ’ ಎಂದು ಘೋಷಿಸಿದೆ.

ಸ್ವಾಮೀಜಿಗಳ ಒಕ್ಕೂಟವಾಗಿರುವ ಅಖಿಲ ಭಾರತ ಅಖರ ಪರಿಷತ್ (ಎಐಎಪಿ) ಗುರುವಾರ ಈ ಕುರಿತು ಹೇಳಿಕೆ ನೀಡಿದೆ ‘ವಾರಾಣಸಿಯಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನ, ಮಥುರಾದಲ್ಲಿನ ಶ್ರೀಕೃಷ್ಣ ಜನ್ಮಭೂಮಿ ದೇಗುಲಕ್ಕೆ ಹೊಂದಿಕೊಂಡಿರುವ ಮಸೀದಿಗಳ ತೆರವಿಗೆ ಆದ್ಯತೆ ನೀಡಲಾಗುವುದು. ರಾಮಮಂದಿರ ನಿರ್ಮಾಣದ ನಂತರ ಇದಕ್ಕೆ ಚಾಲನೆ ಸಿಗಲಿದೆ’ ಎಂದಿದೆ.

‘ಬಾಬರಿ ಮಸೀದಿ ಸ್ಥಳದ ಬಳಿ ಇರುವಂತೆಯೇ ಕಾಶಿ ಮತ್ತು ಮಥುರಾಗಳಲ್ಲೂ ಮಸೀದಿಯನ್ನು ನಿರ್ಮಾಣ ಮಾಡಲು ದೇಗುಲಗಳನ್ನು ನೆಲಸಮಗೊಳಿಸಲಾಗಿತ್ತು’ ಎಂದು ಎಐಎಪಿ ಅಧ್ಯಕ್ಷ ಮಹಂತ್‌ ನರೇಂದ್ರ ಗಿರಿ ಪ್ರತಿಪಾದಿಸಿದರು.

‘ಸದ್ಯ, ಉತ್ತರ ಪ್ರದೇಶ ಹಾಗೂ ಕೇಂದ್ರದಲ್ಲಿ ‘ಹಿಂದೂಪರ’ ಸರ್ಕಾರಗಳಿವೆ. ಹೀಗಾಗಿ, ಗುರಿ ಸಾಧನೆ ಕಷ್ಟವಲ್ಲ. ರಾಮಮಂದಿರದಂತೆಯೇ ಕಾಶಿ, ಮಥುರಾವನ್ನು ವಿಶ್ವದಾದ್ಯಂತ ಹಿಂದೂಗಳು ಪೂಜ್ಯಭಾವದಿಂದ ನೋಡುತ್ತಾರೆ’ ಎಂದರು.

ಆಶ್ಚರ್ಯದ ಸಂಗತಿಯೆಂದರೆ ಆಯೋಧ್ಯೆ ಭೂ ವಿವಾದದಲ್ಲಿ ಪ್ರಮುಖ ಅರ್ಜಿದಾರರಾಗಿರುವ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿ ಸುಪ್ರೀಂ ಕೋರ್ಟ್‌ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿಗೆ ಸಲ್ಲಿಸಿದ ಮನವಿಯಲ್ಲಿ ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳ ಮೇಲೆ ತಮ್ಮ ಹಕ್ಕು ಚಲಾಯಿಸಬಾರದು ಎಂಬ ಪೂರ್ವಷರತ್ತು ವಿಧಿಸಿರುವುದು.

ಆದರೆ, ಇದಕ್ಕೆ ಸ್ಪಷ್ಟನೆ ಎಂಬಂತೆ ನರೇಂದ್ರ ಗಿರಿ ಅವರು, ಕಾಶಿ ಮತ್ತು ಮಥುರಾದಲ್ಲಿ ಹಿಂದೂಗಳ ಹಕ್ಕಿಗಾಗಿ ಪ್ರತಿಪಾದನೆ ಮಾಡುವುದನ್ನು ಯಾವುದೇ ಸಂದರ್ಭದಲ್ಲಿಯೂ ಕೈಬಿಡಲಾಗದು ಎಂದು ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕ ವಿನಯ ಕಟಿಯಾರ್‌ ಅವರೂ, ‘ಕಾಶಿ ಮತ್ತು ಮಥುರಾ ಹಿಂದೂಗಳಿಗೆ ಸೇರಿದ್ದಾಗಿದೆ’ ಎಂದು ದನಿಗೂಡಿಸಿದ್ದಾರೆ. ಈ ಎರಡೂ ನಗರಗಳಲ್ಲಿಯೂ ಪ್ರಮುಖ ದೇಗುಲಗಳಿಗೆ ಹೊಂದಿಕೊಂಡಂತೆ ಮಸೀದಿ ಇದೆ.

ಪ್ರತಿಕ್ರಿಯಿಸಿ (+)