ಮಂಗಳವಾರ, ಸೆಪ್ಟೆಂಬರ್ 28, 2021
25 °C

ಕಾಂಗ್ರೆಸ್‌ ಹೇಳಿರುವ ಸೇನಾ ದಾಳಿಗಿಂತ 2016ರ ಸರ್ಜಿಕಲ್‌ ಸ್ಟ್ರೈಕ್‌ ಹೇಗೆ ಭಿನ್ನ?

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಹತ್ತು ವರ್ಷಗಳ ಯುಪಿಎ ಸರ್ಕಾರದ ಅವಧಿಯಲ್ಲಿ ಆರು ನಿರ್ದಿಷ್ಟ ದಾಳಿಗಳನ್ನು ನಡೆಸಿದ್ದಾಗಿ ಕಾಂಗ್ರೆಸ್‌ ಹೇಳಿಕೊಂಡಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆಯ ಹಿರಿಯ ಅಧಿಕಾರಿಗಳು 2016ರಲ್ಲಿ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಹಿಂದಿನ ಯಾವುದೇ ದಾಳಿಗೂ ಹೋಲಿಸಲು ಸಾಧ್ಯವಿಲ್ಲ ಎನ್ನುತ್ತಾರೆ.

2008 ರಿಂದ 2014ರವರೆಗೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಆರು ಬಾರಿ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

2008ರ ಜೂನ್‌ 19ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಗಡಿಯ ಭಟ್ಟಾಳ್‌ನಲ್ಲಿ ಮೊದಲ ದಾಳಿ ನಡೆಸಲಾಗಿದೆ. ಎರಡನೇಯದು 2011ರ ಆಗಸ್ಟ್‌ 30– ಸೆಪ್ಟೆಂಬರ್‌ 1ರಂದು ನೀಲಿಂ ನದಿ ಕಣಿವೆ ಭಾಗದಲ್ಲಿ ಕೈಗೊಳ್ಳಲಾಗಿದೆ, 2013ರಲ್ಲಿ ಮೂರು ಕಡೆಗಳಲ್ಲಿ ಹಾಗೂ 2014ರಲ್ಲಿ ನಿರ್ದಿಷ್ಟ ದಾಳಿ ನಡೆಸಿದ್ದೇವೆ ಎಂದು ಕಾಂಗ್ರೆಸ್‌ ಮುಖಂಡ ರಾಜೀವ್‌ ಶುಕ್ಲಾ ವಿವರಿಸಿದ್ದಾರೆ.

2016ರ ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಇತರೆ ದಾಳಿಗಳನ್ನು ಹೋಲಿಸಿ ಮಾತನಾಡಿರುವ ಸೇನೆಯ ಕೆಲವು ಹಿರಿಯ ಅಧಿಕಾರಿಗಳು 2016ರಲ್ಲಿ ನಡೆದ ದಾಳಿ ಸಾಕಷ್ಟು ಭಿನ್ನತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  2016ರ ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಪರಿಣಾಮಗಳನ್ನು ನೋಡಿದರೆ, ನಿಜಕ್ಕೂ ಅದು ‘ನಿರ್ದಿಷ್ಟ ದಾಳಿಯೇ (ಸರ್ಜಿಕಲ್‌ ಸ್ಟ್ರೈಕ್‌)’ ಎಂದು ಉದ್ಘರಿಸುತ್ತಾರೆ ಸೇನಾಧಿಕಾರಿಗಳು.

2016ರಲ್ಲಿ ನಡೆದ ದಾಳಿಯಲ್ಲಿ ಇದ್ದ ಭಿನ್ನತೆ ಏನು?

ಗಡಿ ನಿಯಂತ್ರಣ ರೇಖೆಯನ್ನು ದಾಟುವ ಪ್ರಕ್ರಿಯೆ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಆದರೆ, ಅಷ್ಟಾಗಿ ವರದಿಯಾಗುವುದಿಲ್ಲ. ಇವುಗಳು ಬೆಟಾಲಿಯನ್‌, ದಳ ಅಥವಾ ವಿಭಾಗೀಯ ಮಟ್ಟದಲ್ಲಿ ನಡೆಯುತ್ತವೆ.

ಆದರೆ, 2016ರಲ್ಲಿ ನಡೆದ ನಿರ್ದಿಷ್ಟ ದಾಳಿಯ ಯೋಜನೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಸೇನಾ ಮುಖ್ಯಸ್ಥರು ಹಾಗೂ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಯೋಜನೆ ರೂಪಗೊಂಡಿದೆ.

‘ಗಡಿಯಾಚೆಗಿನ ದಾಳಿಗಳು ಈ ಹಿಂದೆಯೂ ನಡೆದಿವೆ. ಆದರೆ, 2016ರ ಸರ್ಜಿಕಲ್‌ ಸ್ಟ್ರೈಕ್‌ ಕಾರ್ಯಾಚರಣೆಯ ವ್ಯಾಪ್ತಿ ಹಾಗೂ ಪ್ರಧಾನಿ ಈ ದಾಳಿಯ ಕುರಿತು ನಿರ್ಧಾರ ಕೈಗೊಂಡಿರುವುದು ಇದು ಇತರೆ ದಾಳಿಗಳಿಗಿಂತ ಭಿನ್ನವಾಗಿದೆ’ ಎಂದು ಸರ್ಜಿಕಲ್‌ ಸ್ಟ್ರೈಕ್‌ ದಾಳಿಯ ನೇತೃತ್ವ ವಹಿಸಿದ್ದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್‌.ಹೂಡಾ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು