ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಬಲಿ ಎಳೆ ಮಗುವಿಗೆ ಹಾಲೂಡಿಸಿದ ಬಾಣಂತಿ ಪೇದೆ

ಮಾತೃವಾತ್ಸಲ್ಯ ಮೆರೆದ ಪ್ರಿಯಾಂಕಾಗೆ ವ್ಯಕ್ತವಾಯ್ತು ಮೆಚ್ಚುಗೆ
Last Updated 1 ಜನವರಿ 2019, 8:35 IST
ಅಕ್ಷರ ಗಾತ್ರ

ಹೈದರಾಬಾದ್:ಹೆತ್ತ ತಾಯಿ ತನ್ನ ಕರುಳ ಕುಡಿಯನ್ನು ಯಾರದೋ ಕೈಗಿತ್ತು ಎಲ್ಲೋ ಹೋಗಿದ್ದಳು. ಹಸುಗೂಸು ಹೆತ್ತಮ್ಮನ ಬೆಚ್ಚನೆಯ ಅಪ್ಪುಗೆಗಾಗಿ ರಚ್ಚೆ ಹಿಡಿದು ಅಳುತ್ತಲೇ ಇತ್ತು. ಊಹೂಂ... ಅಮ್ಮ ಅಲ್ಲಿಲ್ಲ. ಅಷ್ಟು ಹೊತ್ತಿಗೆ ಆ ಕಂದ ಪೊಲೀಸರ ಕೈ ಸೇರಿತ್ತು.ಎಳೆಗೂಸು ಅತ್ತು ಹೈರಾಣಾಗದಿರಲಿ ಎಂದು ಬಾಟಲಿ ಹಾಲು, ನೀರು ಉಣಿಸಿದರೂ ಗಂಟಲು ದಾಟಲಿಲ್ಲ.

ಹೀಗೊಂದು ಮಗು ತಬ್ಬಲಿಯಾಗಿ ಪೊಲೀಸ್‌ ಠಾಣೆ ಸೇರಿದೆ ಎಂಬ ಸುದ್ದಿ ಬಾಣಂತಿಯೊಬ್ಬಳ ಕಿವಿಗೆ ಬಿತ್ತು. ಆಕೆಯೂ ಒಬ್ಬಳು ಪೊಲೀಸ್ ಪೇದೆ. ಆ ಮಗುವಿಗೆ ಬೇಕಾಗಿದ್ದೇನು ಎಂಬುದು ಆಕೆಗೆ ಅರ್ಥವಾಯಿತು. ತಡಮಾಡದೆ ಠಾಣೆಗೆ ಧಾವಿಸಿದವರೇ ಎದೆಹಾಲುಣಿಸಿದರು. ಗಂಟಲು ಹರಿದುಕೊಂಡು ಅಳುತ್ತಿದ್ದ ಕಂದಮ್ಮ ನೆಮ್ಮದಿಯಿಂದ ನಿದ್ರೆಗೆ ಜಾರಿತು. ತಬ್ಬಲಿ ಕಂದನನ್ನು ತನ್ನ ಕರುಳಕುಡಿಯದೇ ಆಪ್ಯಾಯದಿಂದ ಹಾಗೆ ಹಾಲೂಡಿಸಿದ ಮಹಾತಾಯಿ ಕೆ. ಪ್ರಿಯಾಂಕಾ. ಹೈದರಾಬಾದ್‌ನ ಬೇಗಂಪೇಟ್ ಪೊಲೀಸ್ ಠಾಣೆಯ ಈ ಪೇದೆಗೆ ಈಗ ಎಲ್ಲರೂ ಹ್ಯಾಟ್ಸಾಫ್‌ ಹೇಳುತ್ತಿದ್ದಾರೆ.

ನಡೆದಿದ್ದೇನು?:ಹೈದರಾಬಾದ್ ಪೊಲೀಸ್ ಆಯುಕ್ತರು ಹೇಳಿರುವ ಪ್ರಕಾರ, ಒಬ್ಬಾಕೆ ಮಹಿಳೆ ಭಾನುವಾರ ರಾತ್ರಿ ನಗರದ ಉಸ್ಮಾನಿಯಾ ಆಸ್ಪತ್ರೆ ಬಳಿ ಮೊಹಮ್ಮದ್ ಇರ್ಫಾನ್ ಎಂಬುವವರ ಕೈಗೆ ಶಿಶುವೊಂದನ್ನು ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ವಾಪಸ್ ಬರುವುದಾಗಿ ಹೇಳಿ ಶಿಶುವನ್ನು ನೀಡಿದ ಮಹಿಳೆ ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅಷ್ಟರಲ್ಲಿ ಮಗು ಅಳಲಾರಂಭಿಸಿದೆ. ಅಳು ನಿಲ್ಲಿಸದೇ ಇದ್ದುದರಿಂದ ಶಿಶುವನ್ನು ಮನೆಗೆ ಕರೆದೊಯ್ದ ಇರ್ಫಾನ್‌ ಹಾಲು ಕುಡಿಸಲು ಯತ್ನಿಸಿದರೂ ಫಲ ನೀಡಲಿಲ್ಲ.

ನಂತರ ಅವರು ಮಗುವನ್ನು ಅಫ್ಜಲ್‌ಗಂಜ್ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಗುವಿನ ಅಳು ನಿಲ್ಲಿಸಲಾಗದೆ ಪೊಲೀಸರೂ ಪರದಾಡುತ್ತಿದ್ದರೆ ಪೊಲೀಸ್ ಪೇದೆ ರವೀಂದರ್ ಹೆರಿಗೆ ರಜೆಯಲ್ಲಿರುವ ತಮ್ಮ ಪತ್ನಿ ಪ್ರಿಯಾಂಕಾಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಠಾಣೆಗೆ ಬಂದ ಪ್ರಿಯಾಂಕಾ ಎದೆಹಾಲುಣಿಸಿ ಶಿಶುವನ್ನು ಸಮಾಧಾನಪಡಿಸಿದ್ದಾರೆ. ನಂತರ ತಾಯಿಯನ್ನು ಪತ್ತೆಮಾಡಿ ಮಗುವನ್ನು ಆಕೆಗೆ ಹಸ್ತಾಂತರಿಸಲಾಗಿದೆ.

ಶಿಶುವಿನ ತಾಯಿ ಒಬ್ಬಾಕೆ ಚಿಂದಿ ಆಯುವವಳು ಎಂಬುದು ತಿಳಿದುಬಂದಿದೆ. ಇರ್ಫಾನ್‌ ಅವರ ಬಳಿ ಮಗುವನ್ನು ನೀಡಿ ತೆರಳಿದ ಸಂದರ್ಭ ಆ ಮಹಿಳೆ ಗೊಂದಲದಲ್ಲಿದ್ದರು. ಸ್ವಲ್ಪ ಹೊತ್ತಿನ ನಂತರ ಮಗುವನ್ನು ಇರ್ಫಾನ್‌ ಅವರಿಂದ ಪಡೆಯಬೇಕೆಂದುಕೊಂಡರೂ ಅವರಿರುವ ಜಾಗ ತಿಳಿಯದೆ ಮಗು ಕಾಣೆಯಾಗಿದೆ ಎಂದು ಅಳುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಆಕೆಯನ್ನು ಕರೆದುಕೊಂಡುಹೋಗಿ ಮಗುವನ್ನು ತೋರಿಸಿದ್ದಾರೆ ಎಂದು ಹೈದರಾಬಾದ್ ಪೂರ್ವ ವಲಯದ ಡಿಸಿಪಿ ಎಂ. ರಮೇಶ್ ತಿಳಿಸಿದ್ದಾರೆ. ಈ ಮಧ್ಯೆ, ಪೊಲೀಸ್ ದಂಪತಿಯ ಮಾನವೀಯತೆಗೆ ಆಯುಕ್ತ ಅಂಜನಿ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದೇ ಮೊದಲಲ್ಲ

ಪೊಲೀಸ್ ಪೇದೆ ಮತ್ತು ಅಧಿಕಾರಿಗಳು ಮಾತೃವಾತ್ಸಲ್ಯ ಮೆರೆದಿರುವುದು ಇದೇ ಮೊದಲಲ್ಲ. 2018ರ ಅಕ್ಟೋಬರ್‌ನಲ್ಲಿಹೈದರಾಬಾದ್‌ನ ಮೆಹಬೂಬ್‌ನಗರದ ಬಾಲಕರ ಜೂನಿಯರ್‌ ಕಾಲೇಜಿನ ಕೇಂದ್ರದಲ್ಲಿ ಮಹಿಳೆಯೊಬ್ಬರು ಪೊಲೀಸ್‌ ಪ್ರಶಿಕ್ಷಣಾರ್ಥಿ ಪರೀಕ್ಷೆ ಬರೆಯಲು ತೆರಳಿದಾಗ, ಭದ್ರತೆಗೆ ನಿಯೋಜನೆಗೊಂಡಿದ್ದ ಹೆಡ್‌ಕಾನ್‌ಸ್ಟೆಬಲ್‌ ಮುಜೀಬ್‌ ಉರ್‌ ರೆಹಮಾನ್‌ ಎಂಬುವರು ಆ ಮಹಿಳೆಯ 6 ತಿಂಗಳ ಮಗುವನ್ನು ನೋಡಿಕೊಂಡಿದ್ದರು. ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT