ಭಾನುವಾರ, ಸೆಪ್ಟೆಂಬರ್ 20, 2020
23 °C

‘ಅಕ್ರಮ ವಲಸಿಗ’ ಮಾಜಿ ಯೋಧನಿಗೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಕ್ರಮ ವಲಸಿಗ ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸೈನಿಕ ಮೊಹಮ್ಮದ್‌ ಸನಾವುಲ್ಲಾ ಅವರಿಗೆ ಗುವಾಹಟಿ ಹೈಕೋರ್ಟ್‌ ಜಾಮೀನು ನೀಡಿದ ಕಾರಣ ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ದೇಶಕ್ಕೆ ಹಲವು ದಶಕ ಸೇವೆ ಸಲ್ಲಿಸಿದ್ದರೂ ತಮಗೆ ಈ ಪರಿಸ್ಥಿತಿ ಉಂಟಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ನಾನು ನಿಜವಾದ ಭಾರತೀಯ. ಹಲವು ದಶಕಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ. ಆ ನಂತರವೂ ನನ್ನನ್ನು ನಡೆಸಿಕೊಂಡ ಪರಿ ಬೇಸರ ಮೂಡಿಸಿದೆ’ ಎಂದು 53 ವರ್ಷ ವಯಸ್ಸಿನ ಸನಾವುಲ್ಲಾ ಹೇಳಿದ್ದಾರೆ. 

ಅಸ್ಸಾಂನ ಗಡಿಯಲ್ಲಿ ‘ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕ’ ಎಂಬ ಆರೋಪದ ಮೇಲೆ ಭದ್ರತಾ ಪಡೆ ಸಿಬ್ಬಂದಿ ಇವರನ್ನು ಇತ್ತೀಚೆಗೆ ವಶಕ್ಕೆ ಪಡೆದಿದ್ದರು.

ಸನಾವುಲ್ಲಾ ಅವರ ಅರ್ಜಿಯ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್ ಜಾಮೀನಿನ ಮೇಲೆ ಇವರ ಬಿಡುಗಡೆಗೆ ಆದೇಶಿಸಿತ್ತು. 

‘ಯೋಧನಾಗಿ 30 ವರ್ಷ ಸೇವೆ ಸಲ್ಲಿಸಿದ್ದೆ. ಆದರೆ ವಲಸಿಗ ಎಂದು ಬಂಧಿಸಿದ್ದು ನೋವು ತರಿಸಿದೆ. ದೇಶಕ್ಕೆ ಸೇವೆ ಸಲ್ಲಿಸಿದ್ದಕ್ಕೆ ನನಗೆ ಸಿಕ್ಕ ಫಲವಿದು. ಆದರೆ, ಇದೊಂದು ಕಣ್ತೆರೆಸುವ ಪ್ರಕರಣ. ಖಂಡಿತ ನ್ಯಾಯ ಸಿಗುತ್ತದೆ’ ಎಂದು ಬಿಡುಗಡೆಯ ಬಳಿಕ ಸುದ್ದಿವಾಹಿ
ನಿಯೊಂದರ ಜೊತೆಗೆ ಮಾತನಾಡಿದ ಸನಾವುಲ್ಲಾ ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಬೆಂಗಳೂರಿನಲ್ಲಿದ್ದೆ. ನನ್ನ ವಿರುದ್ಧ ಪ್ರಕರಣ ಇರುವುದು ಗೊತ್ತಿರಲಿಲ್ಲ. ನೋಟಿಸ್‌ ಕೂಡಾ ಬಂದಿರಲಿಲ್ಲ. ಪೊಲೀಸ್‌ ಠಾಣೆಗಳು, ವಿದೇಶಿಗರ ನ್ಯಾಯ ಮಂಡಳಿಗೆ ತಿರುಗಾಡಿ ಮಾಹಿತಿ ಪಡೆಯಬೇಕಾಯಿತು’ ಎಂದರು.

‘ತಮ್ಮನ್ನು 12  ದಿನ ಇಟ್ಟಿದ್ದ ಕ್ಯಾಂಪ್‌ನ ಪರಿಸ್ಥಿತಿ ತಿಳಿಸಿದ ಅವರು, ಅಲ್ಲಿ ಕೆಲವರು 10 ವರ್ಷದಿಂದ ಇದ್ದಾರೆ. ವಿದೇಶಿಯರು ಎಂದು ‘ಘೋಷಿಸಲಾದ’ ಹಲವರನ್ನು ಅಲ್ಲಿ ಭೇಟಿ ಮಾಡಿದೆ. ಹೆಚ್ಚಿನವರದು ನನ್ನ ಕಥೆಯೇ. ಅದು ಅಂತ್ಯವಿಲ್ಲದ ಸಜೆ. ದುಃಸ್ವಪ್ನ. ಅವರಿಗಾಗಿ ಏನಾದರೂ ಮಾಡಲೇಬೇಕು’ ಎಂದು ಅಭಿಪ್ರಾಯಪಟ್ಟರು.

‘ಹೈಕೋರ್ಟ್‌ ನನ್ನನ್ನು ಬಂಧಮುಕ್ತಗೊಳಿಸಿದೆ ಎಂಬುದು ಸಂತಸದ ವಿಷಯ. ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ. ಸತ್ಯ ಗೆಲ್ಲುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು