ಸೋಮವಾರ, ಜೂಲೈ 6, 2020
22 °C

Covid-19 India Update | ಈವರೆಗೆ 77103 ಸೋಂಕು ಪ್ರಕರಣ, 4021 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೆ 77103 ಪ್ರಕರಣಗಳು ವರದಿಯಾಗಿವೆ. 57720 ಮಂದಿ ಗುಣಮುಖರಾಗಿದ್ದು, 4021 ಮಂದಿ ಸಾವಿಗೀಡಾಗಿದ್ದಾರೆ.

ಗುಜರಾತಿನಲ್ಲಿ  ಸೋಮವಾರ 405 ಹೊಸ ಪ್ರಕರಣಗಳು ವರದಿಯಾಗಿದ್ದು ಪ್ರಕರಣಗಳ ಸಂಖ್ಯೆ 14,468 ಕ್ಕೇರಿದೆ.  30  ರೋಗಿಗಳು ಇಂದು ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 888ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಗೋವಾದಲ್ಲಿ ಇವತ್ತು ಒಬ್ಬ ವ್ಯಕ್ತಿಗೆ ಕೋವಿಡ್-19 ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 67ಕ್ಕೇರಿದೆ. 48 ಸಕ್ರಿಯ ಪ್ರಕರಣಗಳು ಇಲ್ಲಿವೆ.  
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 10 ವಾರಗಳಿಂದ ಇಲ್ಲಿಯವರೆಗೆ  1.30 ಲಕ್ಷ ಪರೀಕ್ಷೆಗಳು ನಡೆದಿವೆ ಎಂದು ಪವರ್ ಆ್ಯಂಡ್ ಇನ್ಫಾರ್ಮೇಷನ್‌ನ  ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಸಿಆರ್‌ಪಿಎಫ್‌ನ ನಾಲ್ವರು ಸಿಬ್ಬಂದಿಗಳಿಗೆ ಕೋವಿಡ್-19 ದೃಢಪಟ್ಟಿದೆ. ಇಲ್ಲಿ 141 ಸಕ್ರಿಯ ಪ್ರಕರಣಗಳಿದ್ದು 220 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. ಒಟ್ಟು 363 ಪ್ರಕರಣಗಳು ಈವರೆಗೆ ವರದಿಯಾಗಿದೆ.

ತಮಿಳುನಾಡಿನಲ್ಲಿ 7 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 118ಕ್ಕೇರಿದೆ. ಒಂದೇ ದಿನಕ್ಕೆ 805 ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 17,000 ದಾಟಿದೆ.  ಪಂಜಾಬ್‍ನಲ್ಲಿ  21 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ  2081ಕ್ಕೇರಿದೆ. ಕೇರಳದಲ್ಲಿ ಸೋಮವಾರ 49 ಹೊಸ ಪ್ರಕರಣಗಳು ಪತ್ತೆಯಾಗಿವೆ. 532 ಮಂದಿ ಇಲ್ಲಿಯವರೆಗೆ ಗುಣಮುಖರಾಗಿದ್ದು, 359 ಸಕ್ರಿಯ ಪ್ರಕರಣಗಳು ಇಲ್ಲಿವೆ.

ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಪರಿಣಾಮವಾಗಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಭಾನುವಾರ 11ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಬಂದಿದೆ. 

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೆಚ್ಚು ಕಡಿಮೆ 7 ಸಾವಿರದಷ್ಟು (6977) ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,  ಇದು ಈ ವರೆಗಿನ ಒಂದು ದಿನ ಗರಿಷ್ಠ ಸಂಖ್ಯೆ. ಹೀಗಾಗಿ ದೇಶದಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. 

ಈಗ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 1,38,845 ಏರಿದೆ. ಇದರಲ್ಲಿ  77103 ಸಕ್ರೀಯ ಪ್ರಕರಣಗಳಿದ್ದು, 57720  ಮಂದಿ ಗುಣಮುಖರಾಗಿದ್ದಾರೆ. 4021 ಮಂದಿ ಸಾವಿಗೀಡಾಗಿದ್ದಾರೆ. ಭಾನುವಾರ ಒಂದೇ ದಿನ 154 ಮಂದಿ ಮೃತಪಟ್ಟಿದ್ದಾರೆ. 

ಇದನ್ನೂ ಓದಿ: ಅತಿ ಹೆಚ್ಚು ಕೊರೊನಾ ಪ್ರಕರಣ: ಅಗ್ರ ಹತ್ತರ ಪಟ್ಟಿಯಲ್ಲಿ ಭಾರತ

50 ಸಾವಿರ ಗಡಿ ದಾಟಿದ ಮಹಾರಾಷ್ಟ್ರ: ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲೇ ಇದೆ. ಭಾನುವಾರ ಮಹಾರಾಷ್ಟ್ರವೊಂದರಲ್ಲೇ 3000 ‍ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯನ್ನು 50 ಸಾವಿರದ ಗಡಿ ದಾಟಿಸಿದೆ. ಕೇವಲ ನಾಲ್ಕು ದಿನಗಳಲ್ಲಿ ಅಲ್ಲಿ 10 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿವೆ.  ಭಾನುವಾರ ಒಂದೇ ದಿನ ಅಲ್ಲಿ 58 ಮಂದಿ ಮೃತಪಟ್ಟಿದ್ದಾರೆ. ಮುಂಬೈನ ಧಾರಾವಿ ಕೊಳೆಗೇರಿಗೆ ಸೋಂಕು ಪ್ರವೇಶಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ತಳ್ಳಿದೆ. 

ಇದನ್ನೂ ಓದಿ: Covid-19 World Update: ಅಮೆರಿಕದಲ್ಲಿ 11 ಲಕ್ಷಕ್ಕೂ ಅಧಿಕ ಪ್ರಕರಣ ಕ್ರಿಯಾಶೀಲ

ಇದೇ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅನ್ನು ವಿಸ್ತರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ. 

ಇನ್ನು ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು (16277 ಸೋಂಕಿತರು) ಎರಡನೇ ಸ್ಥಾನದಲ್ಲಿದ್ದಾರೆ, ಗುಜರಾತ್‌ (14056 ಸೋಂಕಿತರು) ಮೂರನೇ ಸ್ಥಾನದಲ್ಲಿ ಸ್ಥಿತವಾಗಿದೆ. 

ಚಂಡೀಗಡದಲ್ಲಿ ಮಗು ಸಾವು: ಮೂರು ವರ್ಷದ ಮಗು ಚಂಡೀಗಡದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಸಾವಿಗೀಡಾಗಿದೆ. ದೇಶದಲ್ಲಿ ಕೊರೊನಾ ವೈರಸ್‌ನಿಂದ ಸಾವಿಗೀಡಾದ ಅತಿ ಕಿರಿಯ ವಯಸ್ಸಿನ ಮಗು ಇದಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.