ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಕಣ್ಗಾವಲಿಗೆ ಬಾಂಗ್ಲಾದಲ್ಲಿ ರೇಡಾರ್

ಭಾರತದಿಂದ ನೆರೆಯ ದೇಶದ ಕರಾವಳಿಯಲ್ಲಿ 6 ಕಣ್ಗಾವಲು ಕೇಂದ್ರ ನಿರ್ಮಾಣ
Last Updated 5 ಅಕ್ಟೋಬರ್ 2019, 19:44 IST
ಅಕ್ಷರ ಗಾತ್ರ

ನವದೆಹಲಿ: ಬಂಗಾಳಕೊಲ್ಲಿ ಸಮುದ್ರದಲ್ಲಿ ಚೀನಾದ ಹಡುಗಗಳ ಮೇಲೆ ಕಣ್ಗಾವಲು ಇರಿಸಲು ಭಾರತವು ಬಾಂಗ್ಲಾದೇಶದ ಕರಾವಳಿಯಲ್ಲಿ ಏಳು ರೇಡಾರ್‌ಗಳನ್ನು ನಿರ್ಮಿಸಲಿದೆ. ಈ ಸಂಬಂಧ ಎರಡೂ ದೇಶಗಳು ಶನಿವಾರ ಒಪ್ಪಂದಕ್ಕೆ ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಷೇಕ್ ಹಸೀನಾ ಅವರ ನಡುವೆ ಶನಿವಾರ ಇಲ್ಲಿ ನಡೆದ ಸುದೀರ್ಘ ಮಾತುಕತೆಯ ನಂತರ ಎರಡೂ ದೇಶಗಳ ರಾಜತಾಂತ್ರಿಕರು ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಕರಾವಳಿ ಕಣ್ಗಾವಲು ರೇಡಾರ್‌ ಸೇರಿದಂತೆ ಒಟ್ಟು ಏಳು ಒಪ್ಪಂದಗಳಿಗೆ ಶನಿವಾರ ಸಹಿ ಮಾಡಲಾಗಿದೆ.ಜಲಸಂಪನ್ಮೂಲದ ಸದ್ಬಳಕೆ ಮತ್ತು ಹಂಚಿಕೆ, ಯುವಜನ ಮತ್ತು ಸಂಸ್ಕೃತಿ, ಶಿಕ್ಷಣ ಹಾಗೂ ಕರಾವಳಿ ಗಸ್ತು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ದಕ್ಷಿಣ ಚೀನಾ ಸಮುದ್ರದಿಂದ ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದ ಮೂಲಕ ಚೀನಾದ ವಾಣಿಜ್ಯ ಮತ್ತು ನೌಕಾಪಡೆ ಹಡಗುಗಳು ಪಾಕಿಸ್ತಾನದ ಕರಾವಳಿಯನ್ನು ತಲುಪುತ್ತವೆ. 2018ರಲ್ಲಿ ಇದೇ ಮಾರ್ಗದಲ್ಲಿ ಚೀನಾದ ಜಲಾಂತರ್ಗಾಮಿಗಳು ಅಕ್ರಮವಾಗಿ ಭಾರತದ ಜಲಗಡಿಯನ್ನು ಪ್ರವೇಶಿಸಿದ್ದವು. ಹೀಗಾಗಿ ಬಂಗಾಳಕೊಲ್ಲಿಯಲ್ಲಿ ಕಣ್ಗಾವಲಿನ ಅವಶ್ಯಕತೆ ಇದೆ. ಬಾಂಗ್ಲಾದಲ್ಲಿ ನಿರ್ಮಿಸಲಿರುವ ರೇಡಾರ್‌ಗಳು ಬಂಗಾಳ ಕೊಲ್ಲಿ ಮೇಲಿನ ಭಾರತದ ಕಣ್ಗಾವಲನ್ನು ಹೆಚ್ಚಿಸಲಿದೆ.

ಗುರುವಾರದಿಂದ ಭಾರತದ ಪ್ರವಾಸದಲ್ಲಿರುವ ಷೇಕ್ ಹಸೀನಾ ಅವರು ಶನಿವಾರ ಮೋದಿ ಅವರನ್ನು ಭೇಟಿ ಮಾಡಿದ್ದರು. ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಮತ್ತು ಷೇಕ್ ಹಸೀನಾ ಅವರೂ ಬಾಂಗ್ಲಾದ ಪ್ರಧಾನಿಯಾಗಿ ಎರಡನೇ ಬಾರಿ ಆಯ್ಕೆಯಾದ ನಂತರ ಅವರು ಭಾರತಕ್ಕೆ ಭೇಟಿ ನೀಡಿದ್ದು ಇದೇ ಮೊದಲು.

ಜಲಸಂಪನ್ಮೂಲದ ಸದ್ಬಳಕೆ ಮತ್ತು ಹಂಚಿಕೆ, ಯುವಜನ ಮತ್ತು ಸಂಸ್ಕೃತಿ, ಶಿಕ್ಷಣ ಹಾಗೂ ಕರಾವಳಿ ಗಸ್ತು ಕ್ಷೇತ್ರಗಳಲ್ಲಿ ಸಹಕಾರದ ಅಗತ್ಯವಿದೆ ಎಂಬ ಅಭಿಪ್ರಾಯವು ಇಬ್ಬರು ನಾಯಕರ ಮಾತುಕತೆ ವೇಳೆ ವ್ಯಕ್ತವಾಗಿತ್ತು. ಈ ಬಗ್ಗೆ ಮೋದಿ ಮತ್ತು ಹಸೀನಾ ಬಹಳ ವಿವರವಾಗಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಅನಿಲ ಕೊಳವೆ ಮಾರ್ಗ

ಈ ಇಬ್ಬರು ನಾಯಕರೂ ಎರಡು ವರ್ಷಗಳ ಹಿಂದೆ ಐದು ಒಪ್ಪಂದಗಳಿಗೆ ಸಮ್ಮತಿ ಸೂಚಿಸಿದ್ದರು. ಇವುಗಳಲ್ಲಿ ಮೂರನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು. ಅದರಲ್ಲಿ ಬಾಂಗ್ಲಾದಿಂದ ಈಶಾನ್ಯ ಭಾರತದ ರಾಜ್ಯಗಳ ಮಧ್ಯೆ ನಿರ್ಮಿಸಲಾಗಿರುವ ಅನಿಲ ಕೊಳವೆ ಮಾರ್ಗ ಪ್ರಮುಖವಾದುದು.

ಭಾರತದ ಬೇರೆ ಭಾಗಗಳಿಮದ ಈಶಾನ್ಯ ರಾಜ್ಯಗಳಿಗೆ ರಸ್ತೆ ಮೂಲಕ ವರ್ಷ ಪೂರ್ತಿ ಅಡುಗೆ ಅನಿಲಪೂರೈಕೆ ಸಾಧ್ಯವಿರಲಿಲ್ಲ.ಈಗ ಬಾಂಗ್ಲಾದಿಂದ ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಆಮದು ಮಾಡಿಕೊಳ್ಳುವುದರಿಂದ, ಈಶಾನ್ಯ ರಾಜ್ಯಗಳ ಜನರಿಗೆ ಅಡುಗೆ ಅನಿಲ ಸಿಲಿಂಡರ್‌ ಸದಾ ಲಭ್ಯವಿರಲಿದೆ. ಸಾಗಣೆ ವೆಚ್ಚವೂ ಕಡಿಮೆ ಆಗುವುದರಿಂದ ಅಡುಗೆ ಅನಿಲ ಸಿಲಿಂಡರ್‌ಗಳ ದರವೂ ಕಡಿಮೆಯಾಗಲಿದೆ ಎಂದು ಮೂಲಗಳು ಹೇಳಿವೆ.

* 15,000 ಕಿ.ಮೀ. ಕೊಳವೆ ಮಾರ್ಗದ ಉದ್ದ
* ₹ 6,000 ಕೋಟಿ ಯೋಜನೆಯ ಅಂದಾಜು ವೆಚ್ಚ

ದಕ್ಷಿಣ ಏಷ್ಯಾದಲ್ಲಿ ನೆರೆಯ ದೇಶಗಳ ಜತೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಇದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕಿದೆ. ಇದಕ್ಕಾಗಿ ಭಾರತ–ಬಾಂಗ್ಲಾ ನಡುವಣ ಸಹಕಾರ ಒಪ್ಪಂದಗಳು ಮಹತ್ವ ಪಡೆದಿವೆ ಎಂದು ಎರಡೂ ದೇಶಗಳ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT