ಶನಿವಾರ, ಜುಲೈ 2, 2022
27 °C

ದಾಳಿ ನಡೆಸಿದ ಉಗ್ರ ಸಂಘಟನೆ ಮುಖ್ಯಸ್ಥ ಅಜರ್‌ಗೆ ಪಾಕ್‌ನಲ್ಲಿ ಪೂರ್ಣ ಸ್ವಾತಂತ್ರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಶ್ರೀನಗರ–ಜಮ್ಮು ಹೆದ್ದಾರಿಯ ಅವಂತಿಪೋರಾ ಎಂಬಲ್ಲಿ ಘೋರ ಕೃತ್ಯ ಸಂಘಟಿಸಿದ್ದ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ಗೆ ಪಾಕಿಸ್ತಾನದಲ್ಲಿ ‘ಪೂರ್ಣ ಸ್ವಾತಂತ್ರ್ಯ’ ನೀಡಲಾಗಿದೆ ಎಂದು ಭಾರತ ಆರೋಪಿಸಿದೆ.

ಗುರುವಾರ ನಡೆದ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌, ‘ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ

‘ವಿಶ್ವಸಂಸ್ಥೆ ಮತ್ತು ಇತರ ದೇಶಗಳಿಂದ ನಿಷೇಧಿಸಲ್ಪಟ್ಟಿರುವ ಹಾಗೂ ಪಾಕಿಸ್ತಾನ ಮೂಲದ, ಬೆಂಬಲಿತ ಜೈಷ್‌–ಎ–ಮೊಹಮ್ಮದ್(ಜೆಎಂ) ಉಗ್ರ ಸಂಘಟನೆ ಈ ಅಮಾನುಷ ಕೃತ್ಯವೆಸಗಿದೆ. ಈ ಸಂಘಟನೆಯನ್ನು ಮುನ್ನಡೆಸುತ್ತಿರುವ ಅಂತರರಾಷ್ಟ್ರೀಯ ಉಗ್ರ ಮೊಹಮದ್‌ ಅಜರ್‌ಗೆ ಪಾಕಿಸ್ತಾನದ ನಿಯಂತ್ರಣದಲ್ಲಿ ಭೂ ಪ್ರದೇಶಗಳಲ್ಲಿ ಸಂಘಟನೆಯ ಮೂಲಸೌಕರ್ಯ ವಿಸ್ತರಿಸಿಕೊಳ್ಳಲು, ಭಾರತ ಹಾಗೂ ಇತರೆಡೆ ಇಂತಹ ಕೃತ್ಯಗಳನ್ನು ಮುಂದುವರಿಸಲು ಪಾಕಿಸ್ತಾನ ಸರ್ಕಾರವು ‘ಸಂಪೂರ್ಣ ಸ್ವಾತಂತ್ರ್ಯ’ ನೀಡಿದೆ’ ಎಂದು ದೂರಿದ್ದಾರೆ.

‘ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಿದ್ಧರಾಗಿದ್ದೇವೆ. ಪಾಕಿಸ್ತಾನವು ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ, ಪಾಕ್‌ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಉಗ್ರ ಸಂಘಟನೆಗಳಿಗೆ ಮೂಲಸೌಕರ್ಯ ವಿಸ್ತರಣೆ, ಕಾರ್ಯಾಚರಣೆಗೆ ಅವಕಾಶ ಕಲ್ಪಿಸದಂತೆ ಹಾಗೂ ಇತರ ದೇಶಗಳ ಮೇಲೆ ಭಯೋತ್ಪಾದನಾ ಕೃತ್ಯ ನಡೆಸಲು ಕುಮ್ಮಕ್ಕು ನೀಡದಂತೆ ಆಗ್ರಹಿಸುತ್ತೇವೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಉಗ್ರರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ವಿಫಲವಾದದ್ದೇ ದಾಳಿಗೆ ಕಾರಣ’

ಅಜರ್‌ ಮಸೂದ್‌ನನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸುವಂತೆ ಭಾರತವು ವಿಶ್ವಸಂಸ್ಥೆಯನ್ನು ಒತ್ತಾಯಿಸುತ್ತಿದೆ. ಆದರೆ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ಹಾಗೂ ‍ಪಾಕಿಸ್ತಾನ ಬೆಂಬಲಿತ ಚೀನಾ ಈ ಪ್ರಯತ್ನಕ್ಕೆ ನಿರಂತವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಇದೀಗ ಈ ಕೃತ್ಯದಿಂದಾಗಿ, ಉಗ್ರರಿಗೆ ರಕ್ಷಣೆ ನೀಡುತ್ತಿರುವ ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಯೋಜನೆಗಳನ್ನು ಕೈಬಿಡುವಂತೆ ಚೀನಾಕ್ಕೆ ಸಂದೇಶ ರವಾನೆಯಾದಂತಾಗಿದೆ.

ಇನ್ನಷ್ಟು ಸುದ್ದಿಗಳು

ಕಾಶ್ಮೀರದ ಅವಂತಿಪೋರಾದಲ್ಲಿ ಉಗ್ರರ ದಾಳಿ: 44 ಯೋಧರು ಬಲಿ
ಉಗ್ರರ ದಾಳಿ: ಮಂಡ್ಯ ಯೋಧ ಹುತಾತ್ಮ
‘ಪಾಕಿಸ್ತಾನ ನಾಶವಾಗದ ಹೊರತು, ವಿಶ್ವ ಶಾಂತಿ–ಪ್ರಾದೇಶಿಕ ಭದ್ರತೆ ಅಸಾಧ್ಯ’
ಪುಲ್ವಾಮಾ ದಾಳಿ ಪಾಕಿಸ್ತಾನ ‘ಹತಾಶೆ’ಯ ಫಲಿತಾಂಶ: ಸತ್ಯಪಾಲ್‌ ಮಲಿಕ್‌ ಹೇಳಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು