ಗುರುವಾರ , ನವೆಂಬರ್ 14, 2019
19 °C
ಭಾರತದಲ್ಲಿ ನೀಗದ ಹಸಿವು, ದಕ್ಷಿಣ ಏಷ್ಯಾದಲ್ಲೇ ಹೆಚ್ಚು

ಜಾಗತಿಕ ಹಸಿವು ಸೂಚ್ಯಂಕ ವರದಿ 2019: ನೆರೆಯ ರಾಷ್ಟ್ರಗಳಿಗಿಂತ ಹಿಂದುಳಿದ ಭಾರತ

Published:
Updated:

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಈ ಸಾಲಿನಲ್ಲಿ 102ನೇ ಸ್ಥಾನ ಪಡೆದುಕೊಂಡಿದೆ. ಚೀನಾ (25), ಶ್ರೀಲಂಕಾ (66), ನೇಪಾಳ (73),  ಬಾಂಗ್ಲಾದೇಶ (88) ಮತ್ತು ಪಾಕಿಸ್ತಾನ (94) ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್‌ ದೇಶಗಳಲ್ಲಿ ಅತ್ಯಂತ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿರುವ ದೇಶ ಭಾರತ ಎಂದು ‘ಜಾಗತಿಕ ಹಸಿವು ವರದಿ–2019’ರಲ್ಲಿ ವಿವರಿಸಲಾಗಿದೆ.

ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಮತ್ತು ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಶಿಶುಮರಣ ಹೊರತುಪಡಿಸಿ ಉಳಿದ ಮೂರೂ ಕ್ಷೇತ್ರಗಳಲ್ಲಿ ಭಾರತದ ಸ್ಥಿತಿ ಆಶಾದಾಯಕವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

2015ರಲ್ಲಿ ಭಾರತವು 93ನೇ ಸ್ಥಾನದಲ್ಲಿತ್ತು ಮತ್ತು 2018ರಲ್ಲಿ 103ನೇ ಸ್ಥಾನಕ್ಕೆ ಕುಸಿದಿತ್ತು. 2019ರಲ್ಲಿ 102ನೇ ಸ್ಥಾನಕ್ಕೆ ಬಂದಿದೆ. ಆದರೆ, ಭಾರತದ ನೆರೆ ರಾಷ್ಟ್ರಗಳು ಉತ್ತಮ ಸ್ಥಾನ ಕಾಯ್ದುಕೊಂಡಿವೆ. ಚೀನಾ 25ನೇ ಸ್ಥಾನದಲ್ಲಿದ್ದು, ಹಸಿವಿನಿಂದ ಬಳಲುವವರ ಪ್ರಮಾಣ ಅತ್ಯಂತ ಕಡಿಮೆ ಇರುವ ದೇಶಗಳ ವರ್ಗದಲ್ಲಿದೆ.

ಕನ್ಸರ್ನ್‌ ವರ್ಲ್ಡ್‌ವೈಡ್ ಎಂಬ ಜಾಗತಿಕ ಸ್ವಯಂಸೇವಾ ಸಂಸ್ಥೆ 2000ದಿಂದ ಈ ಸೂಚ್ಯಂಕವನ್ನು ಸಿದ್ಧಪಡಿಸುತ್ತಿದೆ. 2000ರ ಸೂಚ್ಯಂಕದಲ್ಲಿ ಭಾರತವು 83ನೇ ಸ್ಥಾನದಲ್ಲಿತ್ತು.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 102ನೇ ರ‍್ಯಾಂಕ್‌ಗೆ ಕುಸಿದಿದೆ. 2015ರಿಂದ ಈವರೆಗೆ ಭಾರತವು ಒಟ್ಟು 10 ರ‍್ಯಾಂಕ್‌ಗಳ ಕುಸಿತ ಕಂಡಿದೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವಿಕೆ ಮತ್ತು ಸ್ವಚ್ಛತೆಯಲ್ಲಿ ಹಿಂದುಳಿದಿರುವುದೇ ಇದಕ್ಕೆ ಕಾರಣ ಎಂದು ‘ಜಾಗತಿಕ ಹಸಿವು ವರದಿ–2019’ರಲ್ಲಿ ವಿವರಿಸಲಾಗಿದೆ.

ಉತ್ಪಾದಕತೆ ಮತ್ತು ಆರ್ಥಿಕ ಬೆಳವಣಿಗೆಯ ಕಾರಣ ಹಸಿವಿನ ನಿರ್ಮೂಲನೆ ಚೀನಾದಲ್ಲಿ ವೇಗ ಪಡೆದಿದೆ. ಹಿಂದಿನ ಐದು ವರ್ಷಗಳಲ್ಲಿ ಕೆಲವೇ ರ‍್ಯಾಂಕ್‌ನಷ್ಟು ಪ್ರಗತಿ ಸಾಧಿಸಿದ್ದರೂ, ಕೋಟ್ಯಂತರ ಜನರು ಹಸಿವಿನಿಂದ ಬಳಲುವುದು ಕಡಿಮೆಯಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಹಸಿವಿನಿಂದ ಬಳಲುವವರ ಪ್ರಮಾಣ ಭಾರತಕ್ಕಿಂತ ಕಡಿಮೆ ಇದೆ. ಈ ಮೂರೂ ದೇಶಗಳು ಅಪೌಷ್ಠಿಕತೆ ಮತ್ತು ಕುಂಠಿತ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ಗಣನೀಯ ಪ್ರಗತಿ ಸಾಧಿಸಿವೆ. ಹೀಗಾಗಿ ರ‍್ಯಾಂಕಿಂಗ್‌ನಲ್ಲಿ ತಮ್ಮ ಸ್ಥಾನಗಳನ್ನು ಕಾಯ್ದುಕೊಂಡಿವೆ. 

ಹಸಿವು ಸೂಚಿಗಳು, ಭಾರತದ ಕುಸಿತಕ್ಕೆ ಕಾರಣಗಳು

1. ಅಪೌಷ್ಟಿಕತೆ

ಭಾರತದಲ್ಲಿ ಅಪೌಷ್ಟಿಕತೆ ಇದೆ. ಗರ್ಭಾವಸ್ಥೆಯಿಂದಲೇ ಅಪೌಷ್ಟಿಕತೆಯ ಸಮಸ್ಯೆ ಎದುರಾಗುತ್ತದೆ. ದೇಶದಲ್ಲಿ 9 ತಿಂಗಳಿಂದ 23 ತಿಂಗಳವರೆಗಿನ ಮಕ್ಕಳಲ್ಲಿ ಶೇ 9.6ರಷ್ಟು ಮಕ್ಕಳಿಗೆ ಮಾತ್ರ ಪೌಷ್ಟಿಕಾಂಶಯುಕ್ತ ಮತ್ತು ಅಗತ್ಯ ಪ್ರಮಾಣದ ಆಹಾರ ಲಭ್ಯವಿದೆ

14.5 % ದೇಶದಲ್ಲಿ ಅಪೌಷ್ಠಿಕತೆ ಎದುರಿಸುತ್ತಿರುವವರ ಪ್ರಮಾಣ

2. ಕುಂಠಿತ ಬೆಳವಣಿಗೆ

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈ ಸೂಚಿಗೆ ಪರಿಗಣಿಸಲಾಗುತ್ತದೆ. ಅಪೌಷ್ಠಿಕತೆಯ ಕಾರಣ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಕಂಡುಬರುತ್ತದೆ. ಅಂದರೆ ಮಕ್ಕಳು ಅವರ ವಯಸ್ಸಿಗೆ ಅಗತ್ಯವಿರುವಷ್ಟು ಎತ್ತರ ಬೆಳೆದಿರುವುದಿಲ್ಲ. ದೇಹದ ಬೆಳವಣಿಗೆಯೂ ಸಾಮಾನ್ಯ ಸ್ಥಿತಿಯಲ್ಲಿ ಇರುವುದಿಲ್ಲ‌

37.8 % ದೇಶದಲ್ಲಿ ಕುಂಠಿತ ಬೆಳವಣಿಗೆಗೆ ತುತ್ತಾಗಿರುವ ಮಕ್ಕಳ ಪ್ರಮಾಣ

3. ಕಡಿಮೆ ತೂಕದ ಮಕ್ಕಳು

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈ ಸೂಚಿಗೆ ಪರಿಗಣಿಸಲಾಗುತ್ತದೆ. ಮಕ್ಕಳು ಅವರ ಎತ್ತರಕ್ಕೆ ತಕ್ಕಷ್ಟು ತೂಕ ಇಲ್ಲದಿರುವುದು. ಅಪೌಷ್ಟಿಕತೆಯ ಕಾರಣ ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಾರೆ. 2008–2012ರ ಅವಧಿಯಲ್ಲಿ ಈ ಸಮಸ್ಯೆಯಿಂದ ಬಳಲುವ ಮಕ್ಕಳ ಪ್ರಮಾಣ ಶೇ 16.5ರಷ್ಟು ಇತ್ತು. ಆದರೆ ಈಗ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಇರುವ 117 ರಾಷ್ಟ್ರಗಳಲ್ಲೇ ಈ ಸಮಸ್ಯೆ ಅತಿ ಹೆಚ್ಚು ಇರುವುದು ಭಾರತದಲ್ಲಿ

20.8 % ಭಾರತದಲ್ಲಿನ ಕಡಿಮೆ ತೂಕದ ಮಕ್ಕಳ ಪ್ರಮಾಣ

4. ಶಿಶುಮರಣ

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ (ಶಿಶುಮರಣ) ಇಳಿಕೆಯಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದೆ. ಪೌಷ್ಟಿಕತೆ ಹೆಚ್ಚಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳು ಮತ್ತು ಆರೋಗ್ಯ ಸೇವೆಯಲ್ಲಿನ ಸುಧಾರಣೆಗಳು ಇದಕ್ಕೆ ಕಾರಣ ಎಂದು ಗುರುತಿಸಲಾಗಿದೆ

3.9 % ಭಾರತದಲ್ಲಿ ಶಿಶುಮರಣ ಪ್ರಮಾಣ

‘ಫಲ ನೀಡದ ಸ್ವಚ್ಛ ಭಾರತ’

‘ಭಾರತವನ್ನು ಬಯಲುಶೌಚಮುಕ್ತ ದೇಶವನ್ನಾಗಿಸುವ ಉದ್ದೇಶದಿಂದ ಆರಂಭಿಸಲಾದ ಸ್ವಚ್ಛ ಭಾರತ ಅಭಿಯಾನವು ನಿರೀಕ್ಷಿತ ಫಲ ನೀಡಿಲ್ಲ. ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಜನರು ಈವರೆಗೆ ಬಯಲುಶೌಚ ರೂಢಿಯನ್ನು ಸಂಪೂರ್ಣವಾಗಿ ತೊರೆದಿಲ್ಲ. ಸ್ವಚ್ಛತೆಯ ಕೊರತೆಯೂ ಮಕ್ಕಳ ಕುಂಠಿತ ಬೆಳವಣಿಗೆಗೆ ಕಾರಣ. ಹಸಿವು ಸೂಚ್ಯಂಕದಲ್ಲಿ ಭಾರತವು ಹಿಂದುಳಿಯಲು ಇದೂ ಒಂದು ಕಾರಣ’ ಎಂದು ಜಾಗತಿಕ ಹಸಿವು ವರದಿಯಲ್ಲಿ ಉಲ್ಲೇಖಿಸಲಾಗಿದೆ.

(ಆಧಾರ: ಜಾಗತಿಕ ಹಸಿವು ವರದಿ–2019)

ಪ್ರತಿಕ್ರಿಯಿಸಿ (+)