ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣದ ವೇಳೆ ಅರ್ನಬ್‌ಗೆ ಪ್ರಶ್ನೆಗಳ ಸುರಿಮಳೆ: ಕುನಾಲ್‌ಗೆ ಇಂಡಿಗೊ ನಿರ್ಬಂಧ

ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರಿಗೆ ಪ್ರಶ್ನೆಗಳನ್ನು ಕೇಳಿ ಕಿರಿಕಿರಿ ಮಾಡಿದ್ದರಿಂದ ಈ ನಿರ್ಧಾರ
Last Updated 29 ಜನವರಿ 2020, 19:44 IST
ಅಕ್ಷರ ಗಾತ್ರ

ನವದೆಹಲಿ: ವಿಮಾನದಲ್ಲಿ ಸಂಚರಿಸುವಾಗ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರಿಗೆ ಪ್ರಶ್ನೆಗಳನ್ನು ಕೇಳಿ ಕಿರಿಕಿರಿ ಉಂಟು ಮಾಡಿದ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಹಾಸ್ಯ ಕಲಾವಿದ ಕುನಾಲ್‌ ಕಾಮ್ರಅವರಿಗೆ ಆರು ತಿಂಗಳ ಕಾಲ ವಿಮಾನದಲ್ಲಿ ಸಂಚರಿಸದಂತೆ ಇಂಡಿಗೊ ವಿಮಾನ ಸಂಸ್ಥೆ ನಿರ್ಬಂಧ ಹೇರಿದೆ.

ಇದರ ಬೆನ್ನಲ್ಲೇ, ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಮತ್ತು ಗೋಏರ್‌ ವಿಮಾನ ಸಂಸ್ಥೆಗಳೂ ಕುನಾಲ್‌ ಅವರಿಗೆ ನಿರ್ಬಂಧ ಹೇರಿವೆ. ‘ಆಂತರಿಕ ಸಮಿತಿಯು ಪ್ರಕರಣ ಕುರಿತು ಪರಾಮರ್ಶೆ ನಡೆಸಿದೆ. ವರದಿ ಬಂದ ನಂತರ ಕ್ರಮಕೈಗೊಳ್ಳಲಾಗುವುದು’ ಎಂದು ಏರ್‌ಏಷ್ಯಾ ಸಂಸ್ಥೆ ತಿಳಿಸಿದೆ.

ನಿರ್ಬಂಧದ ಕುರಿತು ಪ್ರತಿಕ್ರಿಯೆ ನೀಡಿರುವ ಕುನಾಲ್‌, ‘ಆರು ತಿಂಗಳವರೆಗೆ ನಿರ್ಬಂಧ ಹೇರಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಮೋದಿ ಅವರು ಏರ್‌ಇಂಡಿಯಾವನ್ನು ಶಾಶ್ವತವಾಗಿ ಅಮಾನತು ಮಾಡಲಿದ್ದಾರೆ’ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು, ಭಾರತದ ಇತರೆ ವಿಮಾನ ಸಂಸ್ಥೆಗಳಿಗೆ ಕುನಾಲ್‌ ಅವರ ಮೇಲೆ ನಿರ್ಬಂಧ ಹೇರುವಂತೆ ‘ಸಲಹೆ’ ನೀಡಿದ್ದಾರೆ. ‘ಕುನಾಲ್‌ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಯಾಣಿಕರ ರಕ್ಷಣೆಗೂ ಇದು ಕುತ್ತು ತರುತ್ತದೆ’ ಎಂದು ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

‘ಅರ್ನಬ್‌ ಒಬ್ಬರನ್ನು ಬಿಟ್ಟು ಬೇರೆ ಎಲ್ಲಾ ಪ್ರಯಾಣಿಕರಿಗೆ ಆದ ತೊಂದರೆಗೆ ನಾನು ಕ್ಷಮೆ ಕೇಳುತ್ತೇನೆ. ಪ್ರಯಾಣಿಕರ ರಕ್ಷಣೆಗೆ ಕುತ್ತು ತರುವಂಥ ಕೆಲಸ ಮಾಡಿಲ್ಲ. ‘ಪತ್ರಕರ್ತ’ ಅರ್ನಬ್‌ ಅವರ ಅಹಂಕಾರಕ್ಕೆ ಹಾನಿ ಉಂಟುಮಾಡುವ ಕೆಲಸ ಮಾಡಿದ್ದೇನೆ ಅಷ್ಟೆ’ ಎಂದು ಕುನಾಲ್‌ ಟ್ವೀಟ್‌ ಮಾಡಿದ್ದಾರೆ.

ನಡೆದದ್ದೇನು?: ಮುಂಬೈನಿಂದ ಲಖನೌಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ಅರ್ನಬ್‌ ಹಾಗೂ ಕುನಾಲ್‌ ಪ್ರಯಾಣಿಸುತ್ತಿದ್ದರು. ಈ ವೇಳೆ ಕುನಾಲ್‌ ಅವರು ಅರ್ನಬ್‌ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಅರ್ನಬ್‌ ಉತ್ತರಿಸದೇ ಇಯರ್‌ಫೋನ್‌ ಹಾಕಿಕೊಂಡು ಲ್ಯಾಪ್‌ಟಾಪ್‌ನಲ್ಲಿ ಏನನ್ನೊ ನೋಡುತ್ತಿದ್ದರು.

ಆಗ, ಕುನಾಲ್‌, ‘ಅನರ್ಬ್‌ ಅವರು ಹೇಡಿಯೋ ಅಥವಾ ರಾಷ್ಟ್ರೀಯವಾದಿಯೋ ಎನ್ನುವುದನ್ನು ನೋಡಲು ವೀಕ್ಷಕರು ಇಚ್ಛಿಸುತ್ತಿದ್ದಾರೆ. ದೇಶದ ಹಿತಕ್ಕಾಗಿ ನೀವು ಉತ್ತರಿಸಬೇಕಿದೆ. ನಾನು ತುಕ್ಡೆ ತುಕ್ಡೆ ಗುಂಪಿನವ. ರಾಷ್ಟ್ರವಿರೋಧಿಯನ್ನು ನೀವು ಸೋಲಿಸಬೇಕು. ದೇಶ ಮೋದಿ ಅವರ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ನೀವು ದೃಢಪಡಿಸಬೇಕು’ ಎಂದು ಪ್ರಶ್ನೆ ಕೇಳುತ್ತಿರುವ ವಿಡಿಯೊವನ್ನು ಕುನಾಲ್‌ ಅವರು ಮಂಗಳವಾರ ಟ್ವೀಟ್‌ ಮಾಡಿದ್ದರು. ಇದು ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT