ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನೆ ಸರಿ, ಕೆಲಸ ಕಷ್ಟ

Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಮತದಾರರ ವೇದಿಕೆಗಳು ರೂಪುಗೊಳ್ಳಲಿ ಎಂಬ ಚಿಂತನೆ ಒಳ್ಳೆಯದೇ (ಪ್ರ.ವಾ., ಸಂಗತ, ಮೇ 29). ಆದರೆ ಅದಕ್ಕೆ ಕೆಲವು ತೊಡಕುಗಳಿವೆ. ನಮ್ಮ ಮತದಾರರಲ್ಲಿ ಹೆಚ್ಚಿನವರು ಜಾತಿ– ಧರ್ಮಕ್ಕೆ ಅಂಟಿಕೊಂಡು ಇಲ್ಲವೇ ಯಾವುದಾದರೊಂದು ರಾಜಕೀಯ ಪಕ್ಷಕ್ಕೆ ಮೆತ್ತಿಕೊಂಡು ಅಂಧ ನಿಷ್ಠೆ ಬೆಳೆಸಿಕೊಂಡಿರುತ್ತಾರೆ. ಸಮಾಜ, ದೇಶದ ಒಳಿತಿನ ಬಗ್ಗೆ ಚಿಂತಿಸುವಷ್ಟು ಪ್ರಬುದ್ಧರಾಗಿರುವುದಿಲ್ಲ. ಇವರನ್ನೆಲ್ಲ ಒಟ್ಟಿಗೆ ಸೇರಿಸುವುದು ಕಷ್ಟದ ಕೆಲಸ.

ಇತ್ತೀಚೆಗೆ ‘ನೋಟಾ’ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ಮತಗಟ್ಟೆಗೆ ಕಾಲಿಡದ ಮಂದಿಯೂ ಇದ್ದಾರೆ. ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ಹೊಂದಿರುವ ಇಂಥವರೆಲ್ಲಾ ಸೇರಿದರೆ ಅವರ ಸಂಖ್ಯೆ ಸರಿಸುಮಾರು ಶೇಕಡ 40ರಷ್ಟು ಆಗಬಹುದು. ಇವರನ್ನು ಇಂತಹ ವೇದಿಕೆಗಳಿಗೆ ಸೆಳೆಯಬಹುದು. ನಮಗೆ ಮತದಾನದ ಹಕ್ಕು ಇದೆ, ಸರಿ. ಆದರೆ ವೋಟು ಹಾಕಿದ ಬಳಿಕ ಗೆದ್ದವರನ್ನು ಪ್ರಶ್ನಿಸುವ ಹಕ್ಕು (ಅದನ್ನು ಧೈರ್ಯ ಅಂತ ಬೇಕಾದರೂ ಕರೆಯಲಿ) ಎಲ್ಲಿ ಚಲಾವಣೆಯಾಗುತ್ತಿದೆ?

ಚುನಾವಣೆ ಮುಗಿದ ನಂತರ ಸೋತ ಅಭ್ಯರ್ಥಿಗಳು ಕಾಣೆಯಾಗುತ್ತಾರೆ. ಅವರಿಗೆ ಯಾವ ಸಾಮಾಜಿಕ ಜವಾಬ್ದಾರಿಯೂ ಇಲ್ಲವೇ? ಗೆದ್ದವರು ಏನು ಮಾಡುತ್ತಿದ್ದಾರೆ, ಮಾಡಿದ್ದೆಲ್ಲಾ ನ್ಯಾಯಯುತವಾಗಿದೆಯೇ? ಮಾಡದೇ ಇದ್ದರೆ ಏಕೆ ಮಾಡುತ್ತಿಲ್ಲ ಎಂದು ಕೇಳಬೇಕಾದವರು ಇವರೇ ಅಲ್ಲವೇ? ಇವರು ಅಂತಹ ನೈತಿಕ ಸ್ಥೈರ್ಯ ತೋರಿದರೆ ಇವರ ಜೊತೆ ಜನರೂ ಕೈಜೋಡಿಸುತ್ತಾರೆ. ಆದರೆ ಅದು ಆಗುತ್ತಿಲ್ಲ.

ಸಮಾಜದ ಬಗ್ಗೆ ಕಳಕಳಿಯುಳ್ಳವರು ಮತದಾರರ ವೇದಿಕೆ ರಚಿಸಬಹುದು. ಆಗ ಶಾಸಕರು ಸುಮ್ಮನಿರುತ್ತಾರೆಯೇ? ವೇದಿಕೆ ವಿರುದ್ಧ ತಮ್ಮ ಹಿಂಬಾಲಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಾರೆ. ಅವರಲ್ಲಿ ಭಂಡರೂ ಇರುತ್ತಾರೆ. ಅವರ ಧ್ವನಿಯೇ ಕೇಳಿಸುವಂತೆ ಮಾಡುತ್ತಾರೆ. ಉಳಿದವರ ಮಾತಿಗೆ ಬೆಲೆ ಇಲ್ಲದಂತೆ ಮಾಡುತ್ತಾರೆ. ಇಷ್ಟಾಗಿಯೂ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ.
-ಮೋಹನ್ ದಾಸ್ ಶೆಟ್ಟಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT