ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗೆ ತಳುಕು ಹಾಕಿಕೊಂಡ ‘ಎಚ್‌ಡಿಕೆ ಕರ್ನಾಟಕ ಮಾದರಿ’

Last Updated 23 ನವೆಂಬರ್ 2019, 13:38 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತ ಎಂಬಂತಿದ್ದ ಹೊತ್ತಿನಲ್ಲೇ ಬಿಜೆಪಿಯು ಎನ್‌ಸಿಪಿ ಜೊತೆ ಸೇರಿ ಸರ್ಕಾರ ರಚಿಸಿದೆ. ಮಹಾರಾಷ್ಟ್ರದಲ್ಲಿ ನಡೆದ ಈ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ 13 ವರ್ಷಗಳ ಹಿಂದಿನ ‘ಕರ್ನಾಟಕ ಮಾದರಿ’ಯೇ ಪ್ರೇರಣೆ ಎಂಬ ಚರ್ಚೆ ದೇಶದ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. 2006ರಲ್ಲಿ ದೇವೇಗೌಡರು ಇದ್ದ ಸ್ಥಾನದಲ್ಲೇ ಇಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರೂ ಇದ್ದಾರೆ ಎಂದು ವ್ಯಾಪಕವಾಗಿ ವಿಶ್ಲೇಷಿಸಲಾಗುತ್ತಿದೆ.

ಕರ್ನಾಟದಲ್ಲಿ 13 ವರ್ಷಗಳ ಹಿಂದೆ, ಅಂದರೆ... 2006ರಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದರೆ, ಜೆಡಿಎಸ್‌ನ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಚ್ಛಾಟನೆಗೊಂಡು, ಎಂಪಿ ಪ್ರಕಾಶ್‌ ಉಪ ಮುಖ್ಯಮಂತ್ರಿಯಾಗಿದ್ದರು.

ಹೀಗಿರುವಾಗಲೇ ಅದೇ ಮೊದಲ ಬಾರಿಯ ಶಾಸಕ, ಎಚ್‌.ಡಿ ಕುಮಾರಸ್ವಾಮಿ ಅವರು ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಕಾರಣರಾಗಿದ್ದರು. ಜೆಡಿಎಸ್‌ನ ದೊಡ್ಡ ಬಣವನ್ನು ಗೋವಾದ ರೆಸಾರ್ಟ್‌ಗೆ ಕರೆದೊಯ್ದಿದ್ದ ಕುಮಾರಸ್ವಾಮಿ, ಅಲ್ಲಿಂದ ಬಂದು ಬಿಜೆಪಿ ಜೊತೆ ಸೇರಿ ಧರ್ಮಸಿಂಗ್‌ ನೇತೃತ್ವದ ಸರ್ಕಾರವನ್ನು ಕೆಡವಿದ್ದರು. ನಂತರ ಜೆಡಿಎಸ್‌–ಬಿಜೆಪಿ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿಯೂ ಆಗಿದ್ದರು. ಬಿ.ಎಸ್‌.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು.

ಎಚ್‌.ಡಿ ಕುಮಾರಸ್ವಾಮಿಯ ಮುಂದಾಳತ್ವದಲ್ಲಿ ನಡೆದಿದ್ದ ರಾಜಕೀಯ ಪ್ರಹಸನದ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮಾರ್ಗದರ್ಶನವಿತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿದ್ದವು. ಆದರೆ, ಇದನ್ನು ನಿರಾಕರಿಸಿದ್ದ ದೇವೇಗೌಡರು, ಕುಮಾರಸ್ವಾಮಿ ಅವರನ್ನೂ ಒಳಗೊಂಡಂತೆ ಅವರೊಂದಿಗಿದ್ದ38 ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸಿದ್ದರು. ಆ ಮೂಲಕಇದರಲ್ಲಿ ತಮ್ಮ ಪಾತ್ರವಿಲ್ಲ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದರು. ಅಂದು ದೇವೇಗೌಡರ ಜೊತೆಗೆ ಇದ್ದದ್ದು ಎಚ್‌.ಡಿ ರೇವಣ್ಣ, ಪಿ.ಜಿ.ಆರ್‌ ಸಿಂಧ್ಯಾ, ಎಂ.ಪಿ. ಪ್ರಕಾಶ್‌ ಸೇರಿದಂತೆ ಕೆಲವೇಶಾಸಕರಷ್ಟೇ.

ಮಹಾರಾಷ್ಟ್ರದಲ್ಲೂ ಇಂದು ಇದೇ ಮಾದರಿಯಪರಿಸ್ಥಿತಿ ಉದ್ಭವಿಸಿದೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರ ಅಣ್ಣನ ಮಗ ಅಜಿತ್‌ ಪವಾರ್‌, ಕುಮಾರಸ್ವಾಮಿ ಅವರದ್ದೇ ರೀತಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರೀಗ ಉಪ ಮುಖ್ಯಮಂತ್ರಿಯೂ ಆಗಿದ್ದಾರೆ. ‘ಬಿಜೆಪಿಯನ್ನು ಬೆಂಬಲಿಸುವ ಅಜಿತ್‌ ಪವಾರ್‌ ಅವರ ನಡೆಗೆ ನನ್ನ ಸಹಮತವಿಲ್ಲ, ಪಕ್ಷದ ಬೆಂಬಲವಿಲ್ಲ,’ ಎಂದಿದ್ದಾರೆಶರದ್‌ ಪವಾರ್‌.

ಇತ್ತೀಚೆಗೆ ಶಿವಸೇನೆಯ ಸಂಜಯ್‌ ರಾವುತ್‌ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ‘ಶರದ್‌ ಪವಾರ್‌ ಅವರನ್ನು ಅರ್ಥ ಮಾಡಿಕೊಳ್ಳಲು ನೂರು ಜನ್ಮವೆತ್ತಿ ಬರಬೇಕು,’ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT