ಶನಿವಾರ, ಜನವರಿ 18, 2020
25 °C

ಜೈಪುರ ಸ್ಫೋಟ ಪ್ರಕರಣ: ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ನಗರದಲ್ಲಿ 2008ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

2008ರ ಮೇ 13ರಂದು ನಡೆದ ಎಂಟು ಸರಣಿ ಸ್ಫೋಟಗಳಲ್ಲಿ 71 ಮಂದಿ ಸಾವಿಗೀಡಾಗಿದ್ದರು. ಮೊಹಮ್ಮದ್‌ ಸೈಫ್‌, ಮೊಹಮ್ಮದ್‌ ಸರ್ವಾರ್‌ ಆಜ್ಮಿ, ಮೊಹಮ್ಮದ್‌ ಸಲ್ಮಾನ್‌ ಮತ್ತು ಸೈಫುರ್‌ ರೆಹಮಾನ್‌ ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗಳು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್‌ ಕುಮಾರ್‌ ಶರ್ಮಾ ಈ ತೀರ್ಪು ನೀಡಿದ್ದಾರೆ.

ಎಲ್ಲ ಎಂಟು ಪ್ರಕರಣಗಳಲ್ಲಿ ಈ ನಾಲ್ವರು ತಪ್ಪಿತಸ್ಥರು ಎಂದು ಸಾಬೀತಾಗಿದೆ ಎಂದು ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು. ಸೆಕ್ಷನ್‌ 302 ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ 16 (1ಎ) ಅಡಿಯಲ್ಲಿ ಇವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದೇ ಪ್ರಕರಣದಲ್ಲಿ ಬಿಡುಗಡೆಯಾಗಿರುವ ಐದನೇ ಆರೋಪಿ ಶಹಬಾಜ್‌ ಹುಸೇನ್‌ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲ ಶ್ರೀಚಾಂದ್‌ ತಿಳಿಸಿದ್ದಾರೆ.

ಎಲ್ಲ ಎಂಟು ಪ್ರಕರಣಗಳಿಂದ ಶಹಬಾಜ್‌ ಹುಸೇನ್‌ ಆರೋಪ ಮುಕ್ತರಾಗಿದ್ದಾರೆ. ಲಖನೌದಲ್ಲಿ ಅಂಗಡಿ ಹೊಂದಿದ್ದ ಈತ, ಸರಣಿ ಸ್ಫೋಟಗಳ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿತ್ತು. ಈತ ನಿಷೇಧಿತ ಸಂಘಟನೆಯಾಗಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ) ಸದಸ್ಯನಾಗಿದ್ದ ಎಂದು ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 11 ಆರೋಪಿಗಳಲ್ಲಿ ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. 2008ರಲ್ಲಿ ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಆರೋಪಿಗಳು ಸಾವಿಗೀಡಾಗಿದ್ದರು. ಕಳೆದ ವರ್ಷ ದೆಹಲಿ ಪೊಲೀಸರು ಮತ್ತೊಬ್ಬ ಆರೋಪಿ ಅರಿಜ್‌ ಖಾನ್‌ ಅಲಿಯಾಸ್‌ ಜುನೈದ್‌ನನ್ನು ಬಂಧಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು