ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯಾಕಾಂಡ ತೀವ್ರ ವಿಷಾದನೀಯ: ಬ್ರಿಟನ್‌ ರಾಯಭಾರಿ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ 100 ವರ್ಷ: ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಣೆ
Last Updated 13 ಏಪ್ರಿಲ್ 2019, 19:19 IST
ಅಕ್ಷರ ಗಾತ್ರ

ಅಮೃತಸರ: ‘ಅಮೃತಸರದಲ್ಲಿ 1919ರ ಏಪ್ರಿಲ್‌ 13ರಂದು ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಘಟಿಸಿದ್ದಕ್ಕೆ ಬ್ರಿಟನ್‌ ಸರ್ಕಾರ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ’ ಎಂದು ಭಾರತದಲ್ಲಿನ ಬ್ರಿಟನ್‌ ರಾಯಭಾರಿ ಡೊಮಿನಿಕ್‌ ಅಶ್ಖಿತ್‌ ಹೇಳಿದ್ದಾರೆ.

ಹತ್ಯಾಕಾಂಡ ನಡೆದು 100 ವರ್ಷಗಳಾದ ಸ್ಮರಣಾರ್ಥ, ಇಲ್ಲಿನ ಜಲಿಯನ್‌ ವಾಲಾಬಾಗ್‌ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಪ್ರವಾಸಿ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾರೆ.

‘ಬ್ರಿಟಿಷ್‌–ಭಾರತದ ಇತಿಹಾಸದಲ್ಲಿ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಒಂದು ಅವಮಾನಕರ ಕೃತ್ಯ. ಇದರಿಂದ ಆದ ಪರಿಣಾಮಗಳ ಬಗ್ಗೆ ಬ್ರಿಟನ್‌ ಸರ್ಕಾರ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.

‘ಇಪ್ಪತ್ತೊಂದನೆಯ ಶತಮಾನದಲ್ಲಿ ಇಂಗ್ಲೆಂಡ್‌–ಭಾರತ ಪರಸ್ಪರ ಸಹಭಾಗಿತ್ವದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವುದು ಸಂತಸದ ಸಂಗತಿ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಘಟನೆಯ ಕುರಿತು ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಕೂಡ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಕ್ಷಮೆ ಕೇಳಬೇಕು ಎಂಬ ಒತ್ತಾಯಕ್ಕೆ ಅವರು ಸ್ಪಂದಿಸಿರಲಿಲ್ಲ. ಈ ಕುರಿತು ಬ್ರಿಟನ್‌ ಏಕೆ ಕ್ಷಮೆ ಕೋರಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶ್ಖಿತ್‌, ‘ಇದು ಅತಿ ಮುಖ್ಯ ಪ್ರಶ್ನೆ ಎಂಬುದು ನನಗೆ ಗೊತ್ತಿದೆ. ನಾನು ಈ ಸ್ಥಳಕ್ಕೆ ಬಂದು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದನ್ನು ನೀವು ಗೌರವಿಸಬೇಕು. ಹತ್ಯಾಕಾಂಡದಲ್ಲಿ ಮಡಿದವರಿಗೆ ಬ್ರಿಟನ್‌ ಸರ್ಕಾರ ಮತ್ತು ಬ್ರಿಟನ್‌ ಜನ ಸಂತಾಪ ವ್ಯಕ್ತಪಡಿಸುತ್ತಾರೆ. ಆದರೆ, ಈಗ ಉಭಯ ದೇಶಗಳು ಉತ್ತಮ ಸಹಭಾಗಿತ್ವ ಹೊಂದಿವೆ ಎಂದು ಮತ್ತೊಮ್ಮೆ ಹೇಳಲು ಇಚ್ಛಿಸುತ್ತೇನೆ‘ ಎಂದ ಅವರು, ಕ್ಷಮಾಪಣೆ ಕುರಿತ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲ.

ಇಂಗ್ಲೆಂಡ್‌ ರಾಣಿ ಎರಡನೆಯ ಎಲಿಜಬೆತ್‌ ಕೂಡ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಬ್ರಿಟಿಷ್‌–ಭಾರತ ಇತಿಹಾಸದ ದಾರುಣ ಘಟನೆ ಎಂದಿದ್ದಾರೆ ಎಂದೂ ಅಶ್ಖಿತ್‌ ತಿಳಿಸಿದ್ದಾರೆ.

’ಇತಿಹಾಸವನ್ನು ಪುನರ್‌ ರಚಿಸಲು ನೀವು ಬಯಸುತ್ತಿರಬಹುದು. ಆದರೆ, ಅದು ಸಾಧ್ಯವಿಲ್ಲ ಎಂದು ರಾಣಿ ಹೇಳಿದ್ದಾರೆ’ ಎಂಬುದಾಗಿ ತಿಳಿಸಿದ್ದಾರೆ.

‘ನಾವು ಈ ಘಟನೆಯನ್ನು ಎಂದಿಗೂ ಸ್ಮರಿಸುತ್ತೇವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಏನು ನಡೆದಿದೆಯೋ ನಾವು ಎಂದಿಗೂ ಮರೆಯುವುದಿಲ್ಲ‘ ಎಂದು ಅವರು ಪುಸ್ತಕದಲ್ಲಿ ಬರೆದಿದ್ದಾರೆ.

’ನನ್ನ ಮುತ್ತಜ್ಜ ಎಚ್.ಎಚ್. ಅಶ್ಖಿತ್‌ 1908ರ ಮತ್ತು 1916ರ ಅವಧಿಯಲ್ಲಿ ಬ್ರಿಟನ್‌ನ ಪ್ರಧಾನಿಯಾಗಿದ್ದರು. ಅವರು ಕೂಡ ಈ ಘಟನೆಯನ್ನು ಅತಿ ದುರದೃಷ್ಟಕರ ಎಂದಿದ್ದರು‘ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

ಏನಾಗಿತ್ತು ?

1919ರ ಏಪ್ರಿಲ್‌ 13ರಂದು ಸುಗ್ಗಿ (ಬೈಸಾಕಿ) ಹಬ್ಬಕ್ಕಾಗಿ ಸಾವಿರಾರು ಜನ ಜಲಿಯನ್‌ ವಾಲಾಬಾಗ್‌ನಲ್ಲಿ ಸೇರಿದ್ದರು. ರೌಲತ್‌ ಕಾಯ್ದೆ ವಿರೋಧಿಸಿ ಇದೇ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿಗೆ ಬ್ರಿಟಿಷ್‌ ಅಧಿಕಾರಿ ಕರ್ನಲ್‌ ರೆಗಿನಾಲ್ಡ್‌ ಡೈಯರ್‌ ಆದೇಶಿಸಿದ್ದ. ಮನಬಂದಂತೆ ಗುಂಡಿನ ದಾಳಿ ನಡೆದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿ ಸಾವಿರಾರು ಜನ ಅಸುನೀಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT