ಶುಕ್ರವಾರ, ಮಾರ್ಚ್ 5, 2021
30 °C
ಐತಿಹಾಸಿಕ ನಿರ್ಧಾರ ಕೈಗೊಂಡ ಮೋದಿ, ಶಾ l ವಿಶೇಷ ಸೌಲಭ್ಯ ಕಲ್ಪಿಸಿದ್ದ 370ನೇ ವಿಧಿ ರದ್ದು l ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯ ವಿಭಜನೆ

ಕಾಶ್ಮೀರ: ಇನ್ನಿಲ್ಲ ವಿಶೇಷಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಮಹತ್ವದ ಮತ್ತು ಐತಿಹಾಸಿಕವಾದ ನಿರ್ಧಾರವನ್ನು ಕೈಗೊಂಡಿದೆ. ಸಂವಿಧಾನದ 370ನೇ ವಿಧಿಯು ಇನ್ನು ಮುಂದೆ ಈ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ ಎಂಬ ಅಧಿಸೂಚನೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೊರಡಿಸಿದ್ದಾರೆ. ಅದರ ಪರಿಣಾಮವಾಗಿ, ಈ ರಾಜ್ಯವು ಈವರೆಗೆ ಅನುಭವಿಸಿಕೊಂಡು ಬಂದಿದ್ದ ವಿಶೇಷ ಅಧಿಕಾರ ಮತ್ತು ಸೌಲಭ್ಯಗಳು ರದ್ದಾಗಿವೆ. 

ರಾಷ್ಟ್ರಪತಿಯವರ ಅಧಿಸೂಚನೆಯ ಬಗೆಗಿನ ನಿರ್ಣಯವನ್ನು ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ಬೆಳಿಗ್ಗೆ ರಾಜ್ಯಸಭೆಯಲ್ಲಿ ಮಂಡಿಸಿದರು. ಅದರ ಜತೆಗೆ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ ಮಸೂದೆಯನ್ನೂ ಅವರು ಮಂಡಿಸಿದರು. ಅದರ ಪ್ರಕಾರ, ಈ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗುವುದು.

ಲಡಾಕ್‌ನಲ್ಲಿ ವಿಧಾನಸಭೆ ಇರುವುದಿಲ್ಲ. ಇದು ಚಂಡಿಗಡ ಮಾದರಿಯ ಕೇಂದ್ರಾ ಡಳಿತ ಪ್ರದೇಶವಾಗಿರುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇರಲಿದೆ. ಇದು ದೆಹಲಿ ಮತ್ತು ಪುದುಚೇರಿ ಹೊಂದಿರುವಂತಹ ಸ್ಥಾನವನ್ನು ಪಡೆಯಲಿದೆ.  

ಶಾ ಅವರು ರಾಜ್ಯಸಭೆ ಪ್ರವೇಶಿಸಿದಾಗ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿ ಅವರನ್ನು ಸ್ವಾಗತಿಸಿದರು. ಕಲಾಪ ಆರಂಭಕ್ಕೆ ಮುನ್ನವೇ ಅವರು, 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಹಾಗಾಗಿ ತಮ್ಮದು ಐತಿಹಾಸಿಕ ನಿರ್ಧಾರ ಎಂದರು. 

ರಾಷ್ಟ್ರಪತಿಯವರು ಅಧಿಸೂಚನೆಗೆ ಈಗಾಗಲೇ ಸಹಿ ಮಾಡಿದ್ದಾರೆ. ಹಾಗಾಗಿ, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ಆಗುವುದಿಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯು ಈಗ ಅಸ್ತಿತ್ವದಲ್ಲಿ ಇಲ್ಲ. ಜತೆಗೆ, ಜಮ್ಮು  ಮತ್ತು ಕಾಶ್ಮೀರ ವಿಧಾನಸಭೆಯೂ ವಿಸರ್ಜನೆ ಆಗಿದೆ. ಈ ಕಾರಣದಿಂದ ವಿಧಾನಸಭೆಯ ಅಧಿಕಾರವು ಸಂಸತ್ತಿಗೆ ಲಭಿಸಿದೆ. ಸಂಸತ್ತಿನ ಉಭಯ ಸದನಗಳು ರಾಷ್ಟ್ರಪತಿಯವರ ಅಧಿಸೂಚನೆಯನ್ನು ಚರ್ಚೆ ಮಾಡಿ ಅಂಗೀಕರಿಸಬಹುದು ಎಂದು ಹೇಳಿದರು. 

ಇಂತಹ ಅಧಿಸೂಚನೆ ಮೂಲಕ 370ನೇ ವಿಧಿಯ ಅನ್ವಯಕ್ಕೆ ತಡೆ ಒಡ್ಡುವ ಅವಕಾಶ ಇದೆ. ಇದು ಈ ವಿಧಿಯಲ್ಲಿಯೇ ಸ್ಪಷ್ಟವಾಗಿ ಇದೆ ಎಂದರು.

**

ಬದಲಾವಣೆ ಏನೇನು?

* ಯಾವುದೇ ನೀತಿಯ ಅನುಷ್ಠಾನಕ್ಕೆ ಕೇಂದ್ರವು ರಾಜ್ಯ ವಿಧಾನಸಭೆಯ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಈಗ ಅದರ ಅಗತ್ಯ ಇಲ್ಲ

* ರಕ್ಷಣೆ, ಸಂವಹನ ಮತ್ತು ವಿದೇಶಾಂಗ ನೀತಿ ಬಿಟ್ಟು ಇತರ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಜಮ್ಮು ಮತ್ತು ಕಾಶ್ಮೀರಕ್ಕೆ ಇತ್ತು. ಈ ವಿಶೇಷ ಅಧಿಕಾರ ಇನ್ನು ಮುಂದೆ ಇರುವುದಿಲ್ಲ

* ಜಮ್ಮು ಮತ್ತು ಕಾಶ್ಮೀರದ ಜನರಿಗೆ ದ್ವಿ–ಪೌರತ್ವದ ಅವಕಾಶ ಇತ್ತು. ಬೇರೆ ರಾಜ್ಯಗಳ ಜನರನ್ನು ಮದುವೆ ಆದರೆ ಈ ದ್ವಿ–ಪೌರತ್ವ ರದ್ದಾಗುತ್ತಿತ್ತು. ಇನ್ನು ಮುಂದೆ ದ್ವಿ–ಪೌರತ್ವದ ಅವಕಾಶ ಇಲ್ಲ

* ಈ ರಾಜ್ಯವು ತನ್ನದೇ ಆದ ಪ್ರತ್ಯೇಕ ಧ್ವಜವನ್ನು ಹೊಂದಿತ್ತು. ಮುಂದೆ, ತ್ರಿವರ್ಣ ಧ್ವಜವೇ ಆ ರಾಜ್ಯಕ್ಕೂ ಅನ್ವಯ

* 360ನೇ ವಿಧಿಯ ಅಡಿಯಲ್ಲಿ ಯಾವುದೇ ರಾಜ್ಯದ ಮೇಲೆ ಆರ್ಥಿಕ ತುರ್ತುಸ್ಥಿತಿ ಹೇರುವ ಅಧಿಕಾರ ಕೇಂದ್ರಕ್ಕೆ ಇದೆ. ಆದರೆ, ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಯುದ್ಧ ಅಥವಾ ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ಮಾತ್ರ ತುರ್ತು ಸ್ಥಿತಿ ಹೇರುವ ಅವಕಾಶ ಇತ್ತು. ಇನ್ನು ಮುಂದೆ 360ನೇ ವಿಧಿಯೂ ಈ ರಾಜ್ಯಕ್ಕೆ ಅನ್ವಯ

* ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ವಯ ಆಗುತ್ತಿರಲಿಲ್ಲ. ಮುಂದೆ, ಈ ರಾಜ್ಯವೂ ಆರ್‌ಟಿಐ ಅಡಿ ಬರಲಿದೆ

* ವಿಧಾನಸಭೆಯ ಅವಧಿ ಆರು ವರ್ಷ ಇತ್ತು. ಇನ್ನು ಮುಂದೆ ಇತರ ರಾಜ್ಯಗಳಂತೆ ಐದು ವರ್ಷ ಆಗಿರುತ್ತದೆ

**

ವಿರೋಧ ಪಕ್ಷಗಳ ವಿಭಜನೆ

ಗೃಹ ಸಚಿವರ ಘೋಷಣೆಯ ಬೆನ್ನಿಗೇ ರಾಜ್ಯಸಭೆಯಲ್ಲಿ ತೀವ್ರವಾದ ಪ್ರತಿಭಟನೆ ಆರಂಭವಾಯಿತು. ಕಾಂಗ್ರೆಸ್‌, ಟಿಎಂಸಿ, ಡಿಎಂಕೆ, ಎನ್‌ಸಿಪಿ ಮತ್ತು ಎಡಪಕ್ಷಗಳ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಸಭಾಪತಿ ಪೀಠದ ಮುಂದೆ ಧರಣಿ ಕುಳಿತರು.

ಆದರೆ, ಬಿಎಸ್‌ಪಿ, ಬಿಜೆಡಿ, ಟಿಆರ್‌ಎಸ್‌ ಮತ್ತು ಎಐಎಡಿಎಂಕೆ ಸದಸ್ಯರು ಸರ್ಕಾರದ ಪರವಾಗಿ ನಿಂತರು. ನಿರ್ಣಯಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ಆಡಳಿತಾರೂಢ ಎನ್‌ಡಿಎಯ ಅಂಗಪಕ್ಷವಾಗಿರುವ ಜೆಡಿಯು ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿತು. ಎಲ್ಲ ಸದಸ್ಯರು ಸಭಾತ್ಯಾಗ ಮಾಡಿದರು. ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಎಎಪಿ ಕೂಡ ಈಗ ಬೆಂಬಲ ಕೊಟ್ಟಿದೆ.

**

ದೊಡ್ಡ ನಿರ್ಧಾರಕ್ಕೆ ಮುನ್ನ ಭಾರಿ ಸಿದ್ಧತೆ

* ಅಮರನಾಥ ಯಾತ್ರೆ 15 ದಿನಗಳಿಗೆ ಮೊದಲೇ ಮೊಟಕು. ಯಾತ್ರಿಕರು, ಪ್ರವಾಸಿಗರನ್ನು ರಾಜ್ಯದಿಂದ ಹೊರಕ್ಕೆ ಕಳುಹಿಸಿದ ಸರ್ಕಾರ

* ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ, ಒಮರ್‌ ಅಬ್ದುಲ್ಲಾ ಸೇರಿ ಕಾಶ್ಮೀರದ ಹಲವು ಮುಖಂಡರಿಗೆ ಗೃಹ ಬಂಧನ

* ಜನರು ಗುಂಪುಗೂಡುವುದನ್ನು ತಡೆಯಲು ರಾಜ್ಯದಾದ್ಯಂತ 144ನೇ ಸೆಕ್ಷನ್‌ ಜಾರಿ

* ರಾಜ್ಯದಾದ್ಯಂತ ಇಂಟರ್‌ನೆಟ್‌ ಮತ್ತು ಇತರ ಸಂವಹನ ಸೇವೆಗಳು ಸ್ಥಗಿತ

* ರಾಜ್ಯದ ಉದ್ದಕ್ಕೂ ಭಾರಿ ಸಂಖ್ಯೆಯಲ್ಲಿ ಯೋಧರ ನಿಯೋಜನೆ

**

ನಮಗೆ ಐದು ವರ್ಷ ಕೊಡಿ. ಕಾಶ್ಮೀರವನ್ನು ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಪರಿವರ್ತಿಸುತ್ತೇವೆ. ರಾಜ್ಯದ ಜನರು ಬಡವರಾಗಿಯೇ ಇರಬೇಕು ಎಂದು ನೀವು (ನಿರ್ಣಯದ ಟೀಕಾಕಾರರು) ಯಾಕೆ ಬಯಸುತ್ತಿದ್ದೀರಿ? ಇಲ್ಲಿನ ಜನರು 18ನೇ ಶತಮಾನದಲ್ಲಿಯೇ ಬದುಕಬೇಕೇ? ಅವರಿಗೆ 21ನೇ ಶತಮಾನದಲ್ಲಿ ಬದುಕುವ ಹಕ್ಕು ಇಲ್ಲವೇ?
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

**

370 ಮತ್ತು 35ಎ ವಿಧಿಗಳ ರದ್ದತಿ ಮಾತ್ರವಲ್ಲ, ಅವರು ರಾಜ್ಯವನ್ನೂ ವಿಭಜಿಸಿದ್ದಾರೆ. ಈ ಸರ್ಕಾರವು ಭಾರತದ ಶಿರಚ್ಛೇದ ಮಾಡಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಶಿರವಾಗಿತ್ತು. ಈಗ ರಾಜ್ಯವನ್ನು ಛಿದ್ರ ಮಾಡಲಾಗಿದೆ. ನಿರ್ಧಾರ ಕೈಗೊಳ್ಳುವಾಗ ರಕ್ಷಣೆಗೆ ಸಂಬಂಧಿಸಿದ ವಿಚಾರಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಗಡಿ ರಾಜ್ಯ, ಅಲ್ಲಿನ ಜನರ ಜತೆ ಆಟವಾಡುವುದು ದೇಶದ್ರೋಹದ ಕೆಲಸ
– ಗುಲಾಂ ನಬಿ ಆಜಾದ್‌, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ

ಇವನ್ನೂ ಓದಿ

‘ದೊಡ್ಡ ತೀರ್ಮಾನ’ದ ಹಿಂದಿನ ಆರು ಮಂದಿ

ಕಾಶ್ಮೀರಕ್ಕೆ ಬನ್ನಿ: ಕನ್ನಡತಿ ಸುಜಾತಾ ಆಹ್ವಾನ

* ಜಮ್ಮು ಕಾಶ್ಮೀರ ಎರಡು ಭಾಗವಾಯಿತು: ಏನು ಇದರ ಅರ್ಥ?

ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಬೆಂಬಲಿಸಿದ, ವಿರೋಧಿಸಿದ ಪಕ್ಷಗಳಿವು​

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮಗಳೇನು?

ಎಲ್ಲ ಪ್ರಶ್ನೆಗೆ ಉತ್ತರಿಸಲು ಸಿದ್ಧ: ಪ್ರತಿಪಕ್ಷಗಳಿಗೆ ಅಮಿತ್‌ ಶಾ

ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಸ್ತಾವ ಮಂಡಿಸಿದ ಅಮಿತ್ ಶಾ​

ಜಮ್ಮು–ಕಾಶ್ಮೀರ: ಸಂವಿಧಾನದ 370ನೇ ವಿಧಿ ತಿದ್ದುಪಡಿ ಬಗ್ಗೆ ರಾಷ್ಟ್ರಪತಿ ಅಧಿಸೂಚನೆ​

ರಾಜ್ಯಸಭೆಯಲ್ಲಿ ಹೈಡ್ರಾಮಾ: ಸಂವಿಧಾನದ ಪ್ರತಿ ಹರಿದುಹಾಕಿದ ಪಿಡಿಪಿ ಸದಸ್ಯರು

ಕಾಶ್ಮೀರ ಮತ್ತು 35ಎ, 370: ಬದಲಾಗುತ್ತಾ ಸ್ಥಿತಿಗತಿ​

ಸಂವಿಧಾನದ 370ನೇ ಕಲಂ ಪ್ರಸ್ತುತತೆ

35 ಎ ಕಲಂ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಬೇಕು

‘35-ಎ’ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಸಂವಿಧಾನದ 370ನೇ ವಿಧಿ ತಾತ್ಕಾಲಿಕವಲ್ಲ: ಸುಪ್ರೀಂ ಕೋರ್ಟ್

ಬಿಳಿ ಬಾವುಟ ತೋರಿಸಿ, ಶವ ತಗೊಂಡು ಹೋಗಿ: ಪಾಕಿಸ್ತಾನಕ್ಕೆ ಸೇನೆಯ ಸೂಚನೆ​ 

ಯೋಧರು, ಉಗ್ರರ ಮೃತದೇಹ ಕೊಂಡೊಯ್ಯಲು ನಿರಾಕರಿಸಿದ ಪಾಕಿಸ್ತಾನ?

ಜಮ್ಮು–ಕಾಶ್ಮೀರದಲ್ಲಿ ಕಟ್ಟೆಚ್ಚರ| ಕಣಿವೆ ತೊರೆಯಲು ಪ್ರವಾಸಿ, ಯಾತ್ರಿಕರಿಗೆ ಸೂಚನೆ​

ಸೇನಾ ಕೋಟೆಯಾದ ಶ್ರೀನಗರ: ಆತಂಕ ತೀವ್ರ​​

ಕಾಶ್ಮೀರದಲ್ಲಿ ಉಗ್ರ ದಾಳಿ ಭೀತಿ: ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ

ಇಂದು ಸಂಪುಟ ಸಭೆ ಕಾಶ್ಮೀರ ಬಗ್ಗೆ ನಿರ್ಧಾರ?

ಶ್ರೀನಗರದಲ್ಲಿ ನಿಷೇಧಾಜ್ಞೆ: ಮೆಹಬೂಬಾ ಮುಫ್ತಿಗೆ ಗೃಹ ಬಂಧನ​

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು