ಭಾನುವಾರ, ಸೆಪ್ಟೆಂಬರ್ 15, 2019
30 °C
ಶಾಲೆಗಳ ಪುನರಾರಂಭಕ್ಕೆ ಹೆತ್ತವರ ಅಸಮಾಧಾನ * ಕಣಿವೆಯ ಕೆಲವೆಡೆ ಮುಂದುವರಿದ ನಿರ್ಬಂಧ

ಕಾಶ್ಮೀರ: ಶಿಕ್ಷಕರು ಹಾಜರು, ವಿದ್ಯಾರ್ಥಿಗಳು ಗೈರು

Published:
Updated:
Prajavani

ಶ್ರೀನಗರ: ಶ್ರೀನಗರದ 190 ಪ‍್ರಾಥಮಿಕ ಶಾಲೆಗಳ ಪುನರಾರಂಭಕ್ಕೆ ಅಲ್ಲಿನ ಸರ್ಕಾರ ವ್ಯವಸ್ಥೆ ಮಾಡಿತ್ತು. ಆದರೆ, ಈ ಪ್ರಯತ್ನಕ್ಕೆ ನಿರೀಕ್ಷಿತ ಫಲಿತಾಂಶ ಕಂಡುಬಂದಿಲ್ಲ. ಯಾವ ಶಾಲೆಗೂ ವಿದ್ಯಾರ್ಥಿಗಳು ಬಂದಿಲ್ಲ. ಕೆಲವೆಡೆ ಶಿಕ್ಷಕರು ಬಂದಿದ್ದರು.

ಸೋಮವಾರ ಬೆಳಿಗ್ಗೆ ಶಾಲೆಗಳ ಗೇಟುಗಳನ್ನು ತೆರೆಯಲಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಗೇಟುಗಳನ್ನು ಮುಚ್ಚಲಾಗಿದೆ. ‘ಕೆಲವು ಶಿಕ್ಷಕರು ಬಂದಿದ್ದರು. ಆದರೆ, ವಿದ್ಯಾರ್ಥಿಗಳು ಇಲ್ಲದ ಕಾರಣ ಅವರೆಲ್ಲರೂ ವಾಪಸ್‌ ಹೋದರು’ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ. 

ಬೆಮಿನಾದಲ್ಲಿರುವ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಮತ್ತು ಕೆಲವು ಕೇಂದ್ರೀಯ ವಿದ್ಯಾಲಯಗಳಿಗೆ ಕೆಲವು ವಿದ್ಯಾರ್ಥಿಗಳು ಬಂದಿದ್ದರು ಎಂದು ವರದಿಯಾಗಿದೆ. ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಸೋಮವಾರದಿಂದ ತೆರೆಯಬೇಕು ಎಂಬ ನಿರ್ಧಾರವನ್ನು ಶನಿವಾರ ಕೈಗೊಳ್ಳಲಾಗಿತ್ತು.

‘ಶ್ರೀನಗರದ 900 ಶಾಲೆಗಳ ಪೈಕಿ 190 ಶಾಲೆಗಳನ್ನು ತೆರೆದಿದ್ದೇವೆ. ಭದ್ರತಾ ಸ್ಥಿತಿ ಪರಿಶೀಲನೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ತೆರೆಯಲಾಗಿರುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತೆ ಹೆತ್ತವರಿಗೆ ಮನವಿ ಮಾಡುತ್ತಿದ್ದೇವೆ. ಸುರಕ್ಷತೆ ನಮ್ಮ ಹೊಣೆ’ ಎಂದು ಶ್ರೀನಗರದ ಉಪ ಆಯುಕ್ತ ಶಾಹಿದ್‌ ಇಕ್ಬಾಲ್‌ ಹೇಳಿದ್ದಾರೆ.

ಪರಿಸ್ಥಿತಿ ಪ್ರಕ್ಷುಬ್ಧವಾಗಿಯೇ ಮುಂದುವರಿದಿರುವಾಗ ಶಾಲೆಗಳನ್ನು ತೆರೆಯುವ ನಿರ್ಧಾರ ಕೈಗೊಂಡದ್ದು ಯಾಕೆ ಎಂದು ಹೆತ್ತವರು ಪ್ರಶ್ನಿಸುತ್ತಿದ್ದಾರೆ. ಕಾಶ್ಮೀರ ಸಹಜಸ್ಥಿತಿಗೆ ಮರಳಿದೆ ಎಂಬುದನ್ನು ತೋರಿಸುವುದಕ್ಕೆ ಸರ್ಕಾರವು ಮಕ್ಕಳನ್ನು ಬಲಿಪಶುವಾಗಿಸುತ್ತಿದೆ ಎಂಬುದು ಅವರ ಆರೋಪ. ‘ಸಹಜ ಸ್ಥಿತಿ ಇದೆ ಎಂದಾದರೆ ನಿರ್ಬಂಧಗಳನ್ನು ತೆಗೆಯಲು ಮತ್ತು ಸಂವಹನ ವ್ಯವಸ್ಥೆಯನ್ನು ಮರುಸ್ಥಾಪಿಸಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ’ ಎಂದು ಶಾಹಿದ್‌ ದರ್‌ ಎಂಬವರು ಪ್ರಶ್ನಿಸಿದ್ದಾರೆ.

‘ಪರಿಸ್ಥಿತಿ ಬಹಳ ಅನಿಶ್ಚಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರಶ್ನೆಯೇ ಇಲ್ಲ’ ಎಂದು ದರ್‌ ಹೇಳಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿಯೂ ಹಾಜರಾತಿ ವಿರಳವಾಗಿಯೇ ಇತ್ತು. ನಿರ್ಬಂಧಗಳಿಂದಾಗಿ ಸರ್ಕಾರಿ ಸಿಬ್ಬಂದಿ ಕಚೇರಿಗೆ ಬರಲು ಸಾಧ್ಯವಾಗಿಲ್ಲ. ಜತೆಗೆ, ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟವೂ ನಡೆದಿದೆ. ಕಾಶ್ಮೀರದ ವಿವಿಧ ಭಾಗಗಳಲ್ಲಿ ಕಲ್ಲು ತೂರಾಟ ನಡೆದಿದೆ ಎಂಬ ವರದಿಗಳೂ ಬಂದಿವೆ.

ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಮತ್ತು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಿಸಿದ ನಿರ್ಧಾರದ ನಂತರದ ದಿನಗಳಲ್ಲಿ ಶಾಂತಿಯುತವಾಗಿ ಇದ್ದ ಶ್ರೀನಗರದ ಪ್ರದೇಶಗಳಲ್ಲಿನ ಬ್ಯಾರಿಕೇಡ್‌ಗಳನ್ನು ತೆಗೆಯಲಾಗಿದೆ. 

ಮೋದಿ–ಟ್ರಂಪ್‌ ಮಾತುಕತೆ
ಭಾರತ ವಿರೋಧಿ ಹೇಳಿಕೆಗಳು ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಹೇಳಿಕೆಗಳು ಶಾಂತಿಗೆ ಪೂರಕವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹೇಳಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ನೀಡುತ್ತಿರುವ ಹೇಳಿಕೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ ಮೋದಿ ಹೀಗೆ ಹೇಳಿದ್ದಾರೆ. ಮೋದಿ ಅವರು ಟ್ರಂಪ್‌ ಜತೆಗೆ ದೂರವಾಣಿ ಮೂಲಕ ಮಾತನಾಡಿದರು.

ಇಬ್ಬರು ನಾಯಕರ ನಡುವೆ ಸುಮಾರು 30 ನಿಮಿಷ ಸಂವಾದ ನಡೆಯಿತು. ಇದರಲ್ಲಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಚಾರಗಳು ಚರ್ಚೆಯಾಗಿವೆ. ಮಾತುಕತೆಯು ಸೌಹಾರ್ದಯುತವಾಗಿತ್ತು ಮತ್ತು ಆತ್ಮೀಯತೆಯಿಂದ ಕೂಡಿತ್ತು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣ ಸೃಷ್ಟಿಯ ಅಗತ್ಯ ಇದೆ. ಗಡಿಯಾಚೆಗಿನ ಭಯೋತ್ಪಾದನೆಯೂ ಇದಕ್ಕೆ ಹೊರತಲ್ಲ. ಭಯೋತ್ಪಾದನೆ ತಡೆ ಮತ್ತು ಬಡತನ, ಅನಕ್ಷರತೆ ಹಾಗೂ ಅನಾರೋಗ್ಯ ತಡೆಯಲು ಕೆಲಸ ಮಾಡುವವರಿಗೆ ಸಹಕಾರ ನೀಡಲು ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ. 

ಆರ್ಥಿಕತೆಯನ್ನೂ ಸರಿಪಡಿಸಿ: ಸ್ವಾಮಿ
ಪುಣೆ (ಪಿಟಿಐ): ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಸರಿಯಾದ ನಿರ್ಧಾರ. ಆದರೆ, ಅರ್ಥವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಇದು ಕೂಡ ರಾಷ್ಟ್ರೀಯ ಸುರಕ್ಷತೆ ಮತ್ತು ರಾಷ್ಟ್ರ ನಿರ್ಮಾಣದ ದೃಷ್ಟಿಯಲ್ಲಿ ಮಹತ್ವದ ಅಂಶ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

‘ಅರುಣ್‌ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಅನುಸರಿಸಿದ ಮತ್ತು ಈಗಲೂ ಜಾರಿಯಲ್ಲಿರುವ ಭಾರಿ ತೆರಿಗೆ ಹೇರಿಕೆಯ ನೀತಿಯೇ ಈಗಿನ ಹಿಂಜರಿತಕ್ಕೆ ಕಾರಣ. ರಘುರಾಮ್‌ ರಾಜನ್‌ ಅವರು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿದ್ದಾಗ ಬಡ್ಡಿ ದರ ಏರಿಸಿದ್ದೂ (ಆರ್ಥಿಕ ಕುಸಿತಕ್ಕೆ) ಕಾರಣ’ ಎಂದು ಸ್ವಾಮಿ ಆರೋಪಿಸಿದ್ದಾರೆ.

ಕೋಟೆಗಳಾದ ಮಾಜಿ ಸಿ.ಎಂ ಓಮರ್‌, ಮೆಹಬೂಬಾ ಮನೆಗಳು
ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಒಮರ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಅಧಿಕೃತ ನಿವಾಸಗಳು ಮತ್ತು ಹಲವು ಮಂದಿ ಮಾಜಿ ಶಾಸಕರು ಹಾಗೂ ರಾಜಕೀಯ ನಾಯಕರ ಮನೆಗಳಿರುವ ಗುಪ್ಕರ್‌ ರಸ್ತೆಯ ಕಡೆಗೆ ಜನರು ಸುಳಿಯುವುದಕ್ಕೇ ಸಾಧ್ಯವಾಗುತ್ತಿಲ್ಲ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸತತ 15 ದಿನಗಳಿಂದ ಬಂಧನದಲ್ಲಿದ್ದಾರೆ. ಅವರ ಮನೆಗಳ ಸುತ್ತಲೂ ಬ್ಯಾರಿಕೇಡ್‌ ಹಾಕಲಾಗಿದೆ. ಅರೆಸೇನಾ ಪಡೆಗಳ ಗುಂಡುನಿರೋಧಕ ವಾಹನಗಳು ಇಲ್ಲಿ ಬೀಡು ಬಿಟ್ಟಿವೆ. 

ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳಿಗೆ ಮಾತ್ರ ಈ ಇಬ್ಬರ ಮನೆಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಒಮರ್‌ ಮನೆಯ ಹತ್ತಿರದಲ್ಲಿಯೇ ಅವರ ತಂದೆ ಫಾರೂಕ್‌ ಅಬ್ದುಲ್ಲಾ ಅವರ ಮನೆಯೂ ಇದೆ. ಭದ್ರತಾ ಪಡೆಯ ಅನುಮತಿ ಇಲ್ಲದೆ ಈ ಯಾವುದೇ ಮನೆಗೆ ಪ್ರವೇಶಿಸಲು ಅಥವಾ ಅಲ್ಲಿಂದ ಹೊರಕ್ಕೆ ಹೋಗಲು ಅವಕಾಶ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಜಮ್ಮು–ಕಾಶ್ಮೀರ ರಾಜ್ಯದಲ್ಲಿನ ನಿಯಮ ಪ್ರಕಾರ ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆ ಹೊಂದುವ ಅವಕಾಶ ಇದೆ. ಆದರೆ, ಈಗ ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಈ ನಿಯಮ ರದ್ದಾಗಿದೆ. ಹಾಗಾಗಿ, ಈ ಇಬ್ಬರು ಮತ್ತು ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್‌ ಅವರು ಸದ್ಯದಲ್ಲೇ ಸರ್ಕಾರಿ ಬಂಗಲೆಗಳನ್ನು ತೆರವು ಮಾಡಬೇಕಿದೆ.

ಅಮಿತ್‌ ಶಾಗೆ ವಿವರ ನೀಡಿದ ಡೊಭಾಲ್‌
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿಯಾಗಿ ಜಮ್ಮು–ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

10 ದಿನ ಕಾಶ್ಮೀರದಲ್ಲಿಯೇ ಇದ್ದು ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆ ನಡೆಸಿದ್ದ ಡೊಭಾಲ್‌ ಅವರು ಕಾಶ್ಮೀರದಿಂದ ಹಿಂದಿರುಗಿದ ಬಳಿಕ ಶಾ ಅವರನ್ನು ಭೇಟಿಯಾದರು. 

ನಿರ್ಬಂಧ ತೆರವಾದ ತಕ್ಷಣ ಪ್ರತಿಭಟನೆ: ಎನ್‌ಸಿ
ಕಾಶ್ಮೀರದಲ್ಲಿನ ನಿರ್ಬಂಧಗಳು ತೆರವಾದ ಕೂಡಲೇ ಇಲ್ಲಿ ಭಾರಿ ದೊಡ್ಡ ಪ್ರತಿಭಟನೆ ನಡೆಯಲಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ನ (ಎನ್‌ಸಿ) ಮುಖಂಡ ಮತ್ತು ಸಂಸದ ಅಕ್ಬರ್‌ ಲೋನ್‌ ಸೋಮವಾರ ಹೇಳಿದ್ದಾರೆ.

‘ಕಾಶ್ಮೀರದ ಜನರಲ್ಲಿ ಭಾರಿ ಆಕ್ರೋಶ ಮತ್ತು ಅಸಮಾಧಾನ ಇದೆ. ನಿರ್ಬಂಧಗಳು ತೆರವಾದ ಕೂಡಲೇ ಅವರು ಅದನ್ನು ವ್ಯಕ್ತಪಡಿಸಲಿದ್ದಾರೆ. ತಮ್ಮ ತಪ್ಪು ಏನು ಎಂಬುದನ್ನು ಜನರು ತಿಳಿಯಲು ಬಯಸಿದ್ದಾರೆ. ಭಾರತವು ತಮ್ಮನ್ನು ಗುಲಾಮರು ಎಂದು ಪರಿಗಣಿಸುತ್ತದೆಯೇ ಅಥವಾ ಪೌರರು ಎಂದು ಪರಿಗಣಿಸುತ್ತದೆಯೇ ಎಂಬುದು ಅವರಿಗೆ ತಿಳಿಯಬೇಕಿದೆ’ ಎಂದು ಲೋನ್‌ ಹೇಳಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಂಸದ ಹಸ್ನೈನ್‌ ಮಸೂದಿ ಮತ್ತು ಇತರ ಮುಖಂಡರು ಹಾಜರಿದ್ದರು. 

‘ನಾವು ರಾಜ್ಯ, ಸಂವಿಧಾನ, ಅಸ್ಮಿತೆ ಮತ್ತು ಧ್ವಜವನ್ನು ಕಳೆದುಕೊಂಡಿದ್ದೇವೆ. ಜನರಲ್ಲಿ ಭಾರಿ ಆತಂಕ ಇದೆ. ಭಾರತವು ಕಾಶ್ಮೀರದ ಜತೆಗೆ ಮಾಡಿಕೊಂಡಿದ್ದ ದೆಹಲಿ ಒಪ್ಪಂದ ಮತ್ತು ನೀಡಿದ್ದ ಇತರ ಭರವಸೆಗಳು ಎಲ್ಲಿ ಹೋದವು? ಈಗ, ವಿಶೇಷ ಸ್ಥಾನಮಾನವನ್ನು ಸಂವಿಧಾನಬಾಹಿರವಾಗಿ ತೆಗೆದು ಹಾಕಲಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಮ್ಮು: ಬಿಜೆಪಿ ಸೇರಿದ 50ಕ್ಕೂ ಹೆಚ್ಚು ಮಂದಿ
ವಿಶೇಷಾಧಿಕಾರ ರದ್ದತಿಯ ನಿರ್ಧಾರದಿಂದ ಖುಷಿಗೊಂಡಿರುವ ಜಮ್ಮುವಿನ ಹಲವು ಮಂದಿ ಬಿಜೆಪಿ ಸೇರಿದ್ದಾರೆ. 50ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರಿದ್ದು ಅವರಲ್ಲಿ ಗೋರ್ಖಾ ಸಮುದಾಯದ ಗಣ್ಯರು ಮತ್ತು ಕಾಂಗ್ರೆಸ್‌ ಸೇವಾ ದಳದ ಸದಸ್ಯರು ಇದ್ದಾರೆ. 

ಬಿಜೆಪಿ ಜಮ್ಮು ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಈ ಸೇರ್ಪಡೆ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅಶೋಕ್‌ ಕೌಲ್‌, ಮಾಜಿ ಉಪ ಮುಖ್ಯಮಂತ್ರಿ ಕವಿಂದರ್‌ ಗುಪ್ತಾ ಅವರು ಸಮಾರಂಭದಲ್ಲಿ ಹಾಜರಿದ್ದರು. 


ಶಾಲಾ ಬಸ್‌ಗಳು ರಸ್ತೆಗಿಳಿಯಲಿಲ್ಲ 

ಸೋಮವಾರದ ಬೆಳವಣಿಗೆ
* ಬಾರಾಮುಲ್ಲಾ ಜಿಲ್ಲೆಯ ಐದು ಪಟ್ಟಣಗಳಲ್ಲಿ ಶಾಲೆಗಳು ತೆರೆದಿಲ್ಲ. ಉಳಿದೆಡೆ ಶಾಲೆಗಳು ಪುನರಾರಂಭ ಆಗಿವೆ

* ಕಾಶ್ಮೀರದ ಮಾರುಕಟ್ಟೆ ತೆರೆದಿಲ್ಲ, ಸಾರ್ವಜನಿಕ ಸಾರಿಗೆ ವಾಹನಗಳೂ ರಸ್ತೆಗಿಳಿದಿಲ್ಲ. ಹೆಚ್ಚಿನ ಭಾಗಗಳಲ್ಲಿ ನಿರ್ಬಂಧ ತೆರವಾದ ಕಾರಣ ಖಾಸಗಿ ವಾಹನಗಳ ಓಡಾಟ ಹೆಚ್ಚಳವಾಗಿದೆ

* ಬಂಧಿತ ರಾಜಕೀಯ ನಾಯಕರ ಬಿಡುಗಡೆಗೆ ಒತ್ತಾಯಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಡಿಎಂಕೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲು ನಿರ್ಧಾರ

* ಮಾಜಿ ಐಎಎಸ್‌ ಅಧಿಕಾರಿ ಮತ್ತು ರಾಜಕಾರಣಿ ಶಾ ಫೈಸಲ್‌ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ, ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. 

*
ಇಂದು (ಆ.19) ವಿಶ್ವ ಮಾನವೀಯತೆ ದಿನ. ಕಾಶ್ಮೀರದಲ್ಲಿ ಮಾನವ ಹಕ್ಕುಗಳು ಸಂಪೂರ್ಣವಾಗಿ ಉಲ್ಲಂಘನೆ ಆಗುತ್ತಿವೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಶಾಂತಿಗಾಗಿ ಪ್ರಾರ್ಥಿಸೋಣ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿ.ಎಂ

Post Comments (+)