ಶನಿವಾರ, ಆಗಸ್ಟ್ 24, 2019
27 °C
ನಮಾಜ್‌ಗಾಗಿ ನಿಷೇಧ ಸಡಿಲಿಕೆ: ಮುಂದುವರಿದ ಕಟ್ಟೆಚ್ಚರ

ಸಹಜ ಸ್ಥಿತಿಯತ್ತ ಜಮ್ಮು–ಕಾಶ್ಮೀರ

Published:
Updated:
Prajavani

ಶ್ರೀನಗರ: ಸಹಜಸ್ಥಿತಿಗೆ ಮರಳುವತ್ತ ಜಮ್ಮು ಮತ್ತು ಕಾಶ್ಮೀರ ಮೊದಲ ಹೆಜ್ಜೆ ಇರಿಸಿದೆ. ಬಿಗಿ ಭದ್ರತೆಯ ನಡುವೆಯೇ ಜಮ್ಮು ಕಾಶ್ಮೀರದ ಜನರು ಮನೆಗಳಿಂದ ಹೊರಬಂದು ಸಮೀಪದ ಮಸೀದಿಗಳಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

‘ಪ್ರಾರ್ಥನೆಯ ಸಲುವಾಗಿಯೇ ನಿಷೇಧಾಜ್ಞೆಯನ್ನು ಸ್ವಲ್ಪ ಸಡಿಲಗೊಳಿಸಲಾಗಿತ್ತು. ಕಲ್ಲು ತೂರಾಟದ ಒಂದೆರಡು ಘಟನೆಗಳನ್ನು ಬಿಟ್ಟರೆ ಜಮ್ಮು ಕಾಶ್ಮೀರ ಬಹುತೇಕ ಶಾಂತಿಯುತವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ಕಾಶ್ಮೀರ ವಿಭಜನೆಗೆ ರಾಷ್ಟ್ರಪತಿ ಅನುಮೋದನೆ

ಕಳೆದ ಕೆಲವು ದಿನಗಳಿಂದ ಮನೆಯಿಂದ ಹೊರಬರಲಾಗದಂಥ ಸ್ಥಿತಿಯಲ್ಲಿದ್ದ ಸ್ಥಳೀಯರು, ಶುಕ್ರವಾರ ಪ್ರಾರ್ಥನೆ ಸಲುವಾಗಿಯೇ ರಸ್ತೆಗೆ ಇಳಿದಿದ್ದರು. ಆದರೆ ಹೊರ ಬಂದವರ ಸಂಖ್ಯೆ ಕಡಿಮೆ ಇತ್ತು. ಭದ್ರತಾ ಸಿಬ್ಬಂದಿ ಯಾವುದೇ ವಿಚಾರಣೆ ನಡೆಸದೆ ಅವರನ್ನು ಮಸೀದಿಗಳಿಗೆ ಹೋಗಲು ಬಿಟ್ಟರು.

‘ಸ್ಥಳೀಯರಿಗೆ ಯಾವುದೇ ಕಿರುಕುಳ ಆಗದಂತೆ ಎಚ್ಚರ ವಹಿಸಬೇಕು’ ಎಂದು ರಾಜ್ಯಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆ ಬಳಿಕ ನಿಷೇಧಾಜ್ಞೆ ಸಡಿಲಿಸಲು ತೀರ್ಮಾನಿಸಲಾಗಿದೆ.  ಆದರೆ, ಜನರು ಹೊರಗೆ ಬಂದ ಬಳಿಕ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಕಟ್ಟೆಚ್ಚರದಿಂದ ಇರುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಡೊಭಾಲ್‌ ಅವರು ಕೆಲವು ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಜೊತೆಯಲ್ಲಿ ಶುಕ್ರವಾರ ಈದ್ಗಾ ಪ್ರದೇಶದಲ್ಲಿ ಸಂಚರಿಸಿದರು. ಅಲ್ಲಲ್ಲಿ ನಿಂತು ಸ್ಥಳೀಯರ ಜೊತೆ ಸಂವಾದ ನಡೆಸಿರುವುದು ಕಂಡುಬಂದಿದೆ.

‘ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು’ ಎಂದೂ ಅಧಿಕಾರಿಗಳು ತಿಳಿಸಿದರು.

ಶ್ರೀನಗರ ಹಾಗೂ ಇತರ ಕೆಲವು ಪ್ರಮುಖ ಪಟ್ಟಣಗಳಲ್ಲಿ ಪ್ರತಿ 100 ಮೀಟರ್‌ಗೆ ಒಂದರಂತೆ ತಪಾಸಣಾ ಕೇಂದ್ರ ತೆರೆಯಲಾಗಿದ್ದು, ಆಸ್ಪತ್ರೆಗೆ ಹೋಗುವವರು ಮತ್ತು ತುರ್ತು ಕೆಲಸಗಳಿಗಾಗಿ ಓಡಾಡುವವರನ್ನು ಮಾತ್ರ ಬಿಡಲಾಗುತ್ತಿದೆ. ಫೋನ್‌, ಇಂಟರ್‌ನೆಟ್‌ ವ್ಯವಸ್ಥೆಯನ್ನು ಕಡಿತಗೊಳಿಸಲಾಗಿದೆ. ‘ದೂರದರ್ಶನ’ ಸೇರಿದಂತೆ ಒಟ್ಟು ಮೂರು ಟಿ.ವಿ. ವಾಹಿನಿಗಳ ಕಾರ್ಯಕ್ರಮ ಮಾತ್ರ ಪ್ರಸಾರವಾಗುತ್ತಿವೆ.

ಜಮ್ಮುವಿನಲ್ಲಿ ನಿಷೇಧಾಜ್ಞೆ ತೆರವು

ಜಮ್ಮು ಜಿಲ್ಲೆಯಲ್ಲಿ ಹೇರಿದ್ದ ನಿಷೇಧಾಜ್ಞೆಯನ್ನು ತೆರವುಗೊಳಿಸಿರುವುದಾಗಿ ಜಿಲ್ಲಾಡಳಿತ ಶುಕ್ರವಾರ ಹೇಳಿದೆ.

ಈ ಬಗ್ಗೆ ಆದೇಶವನ್ನು ಹೊರಡಿಸಿರುವ ಜಿಲ್ಲಾಧಿಕಾರಿ ಸುಷ್ಮಾ ಚೌಹಾಣ್‌ ಅವರು, ‘ಶನಿವಾರದಿಂದ (ಆ.10) ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಬಹುದು’ ಎಂದು ಸೂಚಿಸಿದ್ದಾರೆ.

Post Comments (+)