ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ಎಡ–ಬಲ ತಿಕ್ಕಾಟ ಹೊಸದಲ್ಲ, ಸದ್ಯಕ್ಕೆ ಮುಗಿಯುವ ಲಕ್ಷಣವೂ ಇಲ್ಲ

ವಿದ್ಯಾರ್ಥಿ ವಿಘಟನೆ
Last Updated 7 ಜನವರಿ 2020, 2:09 IST
ಅಕ್ಷರ ಗಾತ್ರ

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಇತ್ತೀಚಿನ ವರ್ಷಗಳಲ್ಲಿ ಘರ್ಷಣೆಯ ತಾಣವಾಗುತ್ತಿದೆ. ಎಡಪಂಥೀಯ ಹಾಗೂ ಬಲಪಂಥೀಯ ವಿಚಾರಧಾರೆಗಳ ವಿದ್ಯಾರ್ಥಿ ಸಂಘಟನೆಗಳು ಪರಸ್ಪರ ಕಾದಾಟಕ್ಕೆ ಇಳಿದಿವೆ ಎಂಬುದಕ್ಕೆ ವಿದ್ಯಾರ್ಥಿ ಸಂಘದ ಚುನಾವಣೆ ಸೇರಿದಂತೆ ಹಲವು ನಿದರ್ಶನಗಳು ಸಿಗುತ್ತವೆ.

ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಎಡಪಂಥೀಯ ಸಂಘಟನೆ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಬಲಪಂಥೀಯ ಸಂಘಟನೆಗಳು ಚಳವಳಿ, ಚುನಾವಣೆಗಳಲ್ಲಿ ತೀವ್ರ ಸ್ಪರ್ಧೆ ಒಡ್ಡುತ್ತಿವೆ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್‌ಎ (ಆಲ್ ಇಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್), ಎಸ್‌ಎಫ್‌ಐ (ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ) ಮತ್ತು ಡಿಎಸ್‌ಎಫ್‌ (ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್) ಒಕ್ಕೂಟ ರಚಿಸಿಕೊಂಡಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯು ಎಡಪಂಥೀಯ ಸಂಘಟನೆಗಳ ಒಕ್ಕೂಟ ಹಾಗೂ ಸಂಘ ಪರಿವಾರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಡುವಿನ ನೇರ ಹಣಾಹಣಿಯಾಗಿತ್ತು. ಆದರೆ ಎಂದಿನಂತೆ ಎಡಪಂಥೀಯರು ಭಾರಿ ಅಂತರದಿಂದ ಜಯ ಗಳಿಸಿದರು. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಹುದ್ದೆಗಳು ಎಡಪಂಥೀಯರ ಪಾಲಾದವು.

2018ರ ಚುನಾವಣೆಯ ಫಲಿತಾಂಶ ಘೋಷಣೆ ಬಳಿಕ ಘರ್ಷಣೆ ಉಂಟಾಗಿತ್ತು. ಎಬಿವಿಪಿ ಸದಸ್ಯರು ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಚುನಾಯಿತ ಅಧ್ಯಕ್ಷರನ್ನು ಥಳಿಸಿದ್ದಾರೆ ಎಂದು ಎಐಎಸ್‌ಎ ಆರೋಪಿಸಿತ್ತು. ಆದರೆ ಎಡಪಂಥೀಯರು ತಮ್ಮವರ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಎಬಿವಿಪಿ ಪ್ರತಿ ಆರೋಪ ಮಾಡಿತ್ತು.

ವಿದ್ಯಾರ್ಥಿ ನಜೀಬ್‌ ನಾಪತ್ತೆ ವಿಚಾರದಿಂದ ಹಿಡಿದು, ಯುಜಿಸಿ ಶಿಷ್ಯವೇತನ ಕಡಿತದ ಬಗ್ಗೆ ಧ್ವನಿ ಎತ್ತದಿದ್ದುದೇ ಎಬಿವಿಪಿ ಸೋಲಲು ಕಾರಣವಾದ ಅಂಶಗಳು ಎಂದು ವಿಶ್ಲೇಷಿಸಲಾಗಿತ್ತು.

ಯುಪಿಎ–2ರ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇ 54ರಷ್ಟು ಹೆಚ್ಚಿಸಲು ಜೆಎನ್‌ಯುಗೆ ಸೂಚನೆ ನೀಡಲಾಗಿತ್ತು. ಆದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಒಂದಿಷ್ಟು ಘಟನಾವಳಿಗಳಿಗೆ ವಿಶ್ವವಿದ್ಯಾಲಯ ಸಾಕ್ಷಿಯಾಯಿತು. ವಿದ್ಯಾರ್ಥಿ ಮುಖಂಡರಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರು ದೇಶದ್ರೋಹ ಪ್ರಕರಣದಲ್ಲಿ ಜೈಲು ಸೇರಿದರು. ಬಳಿಕ ಈ ಆರೋಪವನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು.

ಎನ್‌ಡಿಎ ಅವಧಿಯಲ್ಲಿ, ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸಿತು. ಈ ವಿಚಾರವನ್ನು ತಮ್ಮೊಂದಿಗೆ ಚರ್ಚಿಸಿರಲಿಲ್ಲ ಎಂದು ಜೆಎನ್‌ಯು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆರೋಪಿಸಿದ್ದರು.

2018 ಏಪ್ರಿಲ್‌ನಲ್ಲಿ ‘ಲವ್ ಜಿಹಾದ್‌’ಗೆ ಸಂಬಂಧಿಸಿದ ಸಾಕ್ಷ್ಯಚಿತ್ರವನ್ನು ಜೆಎನ್‌ಯುನಲ್ಲಿ ಪ್ರದರ್ಶಿಸಿದ ವೇಳೆ ಎಬಿವಿಪಿ ಹಾಗೂ ಎಡಪಂಥೀಯ ಸಂಘಟನೆಗಳ ನಡುವೆ ಗಲಾಟೆ ನಡೆದಿತ್ತು. ಕ್ಯಾಂಪಸ್‌ನ ಪಾವಿತ್ರ್ಯ ಹಾಳಾಗುತ್ತಿದೆ ಎಂದು ಆರೋಪಿಸಿ ಎರಡೂ ಗುಂಪಿನ ಸದಸ್ಯರು ದೊಡ್ಡ ಮೆರವಣಿಗೆ ನಡೆಸಿದ್ದರು. ಕ್ಯಾಂಪಸ್‌ನಲ್ಲಿ ಕೋಮುಭಾವನೆಯನ್ನು ಹರಡಲು ಸಾಕ್ಷ್ಯಚಿತ್ರ ಪ್ರದರ್ಶಿಸಲಾಗಿದೆ ಎಂದು ಎಡಪಂಥೀಯರು ಆರೋಪಿಸಿದ್ದರು. ಆದರೆ ಎಡಪಂಥೀಯರ ಬೂಟಾಟಿಕೆಯನ್ನು ಸಹಿಸುವುದಿಲ್ಲ ಎಂಬುದಾಗಿ ಎಬಿವಿಪಿ ಸದಸ್ಯರು ತಿರುಗೇಟು ನೀಡಿದ್ದರು.

ಸಂವಿಧಾನದ 370ನೇ ವಿಧಿ ಕುರಿತು ಕಳೆದ ಅಕ್ಟೋಬರ್‌ನಲ್ಲಿ ಜೆಎನ್‌ಯುನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ವೇಳೆ ಎಬಿವಿಪಿ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ನಡುವೆ ಘರ್ಷಣೆ ಭುಗಿಲೆದ್ದಿತ್ತು. ಕಾರ್ಯಕ್ರಮದ ವಿರುದ್ಧ ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘರ್ಷಣೆ ನಡೆದಿತ್ತು.

ವಿದ್ಯಾರ್ಥಿ ಹೋರಾಟ: ಬದಲಾದ ಸ್ವರೂಪ

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿದ್ಯಾರ್ಥಿಗಳ ಪ್ರತಿಭಟನೆಯ ದಿಕ್ಕು ಬದಲಾಗಿದೆ. ಪ್ರತಿಭಟನೆಯ ಸ್ವರೂಪದಲ್ಲಿ ಬದಲಾವಣೆ ಕಂಡುಬಂದಿದೆ. ಹಿಂದೆಲ್ಲಾ ವಿದ್ಯಾರ್ಥಿಗಳು, ಹೊರಗಿನ ಶಕ್ತಿಗಳ ವಿರುದ್ಧ ಒಂದಾಗಿ ಹೋರಾಟಕ್ಕೆ ನಿಲ್ಲುತ್ತಿದ್ದರು. ಆದರೆ ಈಗ ವಿದ್ಯಾರ್ಥಿ ಸಂಘಟನೆಗಳು ತಮ್ಮ ಮಧ್ಯೆ ಗೆರೆ ಎಳೆದುಕೊಂಡಿದ್ದು, ರಾಜಕೀಯ ಪಕ್ಷ ಹಾಗೂ ಅದರ ಸಿದ್ಧಾಂತಗಳ ಜತೆ ಬೆಸೆದುಕೊಂಡಿವೆ.

ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ (ಎಫ್‌ಟಿಐಐ) ವಿದ್ಯಾರ್ಥಿಗಳು ಮೊದಲಿಗೆ ಇಂತಹ ಪ್ರತಿಭಟನೆ ನಡೆಸಿದ್ದರು. ಗಜೇಂದ್ರ ಚವಾಣ್ ಅವರನ್ನು ಎಫ್‌ಟಿಐಐನ ಮುಖ್ಯಸ್ಥರನ್ನಾಗಿ ನೇಮಕ ವಿಚಾರದಲ್ಲಿ ಕ್ಯಾಂಪಸ್ ಹೊರಗಿನ ರಾಜಕೀಯ ಶಕ್ತಿಗಳು ವಿವಾದದಲ್ಲಿ ತಲೆತೂರಿಸಿದ್ದವು. ಮುಖ್ಯವಾಗಿ ಎಡಪಂಥೀಯ ಸಂಘಟನೆ ಸದಸ್ಯರು ಸೇರಿದಂತೆ, ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದರು.

ಆ ಬಳಿಕ ಹೈದರಾಬಾದ್‌ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡರು. ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ, ದೇಶದಾದ್ಯಂತ ಎಲ್ಲ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಆಕ್ರೋಶ ವ್ಯಕ್ತವಾಯಿತು.

2010ರ ಸಂಸತ್‌ ಭನವದ ಮೇಲಿನ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಜಾರಿಯಾಗಿತ್ತು. ಇದರ ವಿರುದ್ಧ ಜೆಎನ್‌ಯುನಲ್ಲಿ2016ರ ಫೆಬ್ರುವರಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನೆಯು ವಿದ್ಯಾರ್ಥಿಗಳಲ್ಲಿನ ಒಡಕು ಎದ್ದು ಕಾಣುವಂತೆ ಮಾಡಿತು.

ಎಡಪಂಥೀಯ ಸಂಘಟನೆಯ ಬೆಂಬಲವಿದ್ದ ಅಂದಿನ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನಾರ್ಹ ಘೋಷಣೆಗಳನ್ನು ಕೂಗಲಾಯಿತು ಎಂಬ ಆರೋಪವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಲಪಂಥೀಯ ಸಂಘಟನೆಗಳು ಎಡಪಂಥೀಯ ಸಂಘಟನೆಗಳನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ (ಭಾರತವನ್ನು ತುಂಡು ತುಂಡು ಮಾಡುವ ಉದ್ದೇಶ ಹೊಂದಿರುವ ಸಂಘಟನೆ) ಎಂಬುದಾಗಿ ಕರೆಯಲಾರಂಭಿಸಿದವು. ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಯಿತು. ಕ್ಯಾಂಪಸ್‌ನಲ್ಲಿ ನಡೆದ ಇತ್ತೀಚಿನ ಹಿಂಸಾಚಾರಗಳು ವಿಭಜನೆಯ ಮುಂದುವರಿದ ಭಾಗವಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT