ಮಧ್ಯಪ್ರದೇಶ: ಡಿ.17ರಂದು ಮುಖ್ಯಮಂತ್ರಿಯಾಗಿ ಕಮಲನಾಥ್‌ ಪ್ರಮಾಣವಚನ 

7

ಮಧ್ಯಪ್ರದೇಶ: ಡಿ.17ರಂದು ಮುಖ್ಯಮಂತ್ರಿಯಾಗಿ ಕಮಲನಾಥ್‌ ಪ್ರಮಾಣವಚನ 

Published:
Updated:

ಭೋಪಾಲ್: ಅತ್ಯಂತ ಹಿರಿಯ ಸಂಸದ, ಮುಖಂಡ ಕಮಲನಾಥ್‌ (72) ಅವರು ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಡಿ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಮುಖ್ಯಮಂತ್ರಿ ಗಾದಿ ವಿಚಾರದಲ್ಲಿ ಜ್ಯೋತಿರಾಧ್ಯ ಸಿಂಧ್ಯಾ ಹಾಗೂ ಕಮಲನಾಥ್ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಸಾಕಷ್ಟು ಬೆಳವಣಿಗೆಯ ನಂತರ ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿಯು ಕಮಲನಾಥ್ ಅವರನ್ನು ಗುರುವಾರ ರಾತ್ರಿ ನೂತನ ಸಿಎಂ ಆಗಿ ಘೋಷಿಸಿತ್ತು. 

ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ 9 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕಮಲನಾಥ್‌ 2014ರಲ್ಲಿ 16ನೇ ಲೋಕಸಭೆಗೆ ಹಂಗಾಮಿ ಸ್ಪೀಕರ್‌ ಆಗಿ ಸೇವೆ ಸಲ್ಲಿಸಿದ್ದರು. 

ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮ, ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಈ ವರ್ಷ ಮೇನಲ್ಲಿ ಮಧ್ಯಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ವಿಧಾನಸಭಾ ಚುನಾವಣೆಯ ನೇತೃತ್ವ ವಹಿಸಿದ್ದರು. 

ಇದನ್ನೂ ಓದಿ: ಒಂಭತ್ತು ಬಾರಿ ‘ಎಂಪಿ’ ಮಧ್ಯಪ್ರದೇಶದ ಸಿಎಂ ಕಮಲನಾಥ್

ಇಂದಿರಾ ಗಾಂಧಿ ‘ಮೂರನೇ ಮಗ’ 

1979ರಲ್ಲಿ ಮಧ್ಯ ಪ್ರದೇಶದ ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಮಲನಾಥ್‌ ಪರ ಇಂದಿರಾ ಗಾಂಧಿ ಪ್ರಚಾರ ನಡೆಸಿದ್ದರು.‘ಕಮಲ್‌ ನನ್ನ ಮೂರನೇ ಮಗ’ ಎಂದು ಮತ ಯಾಚಿಸಿದ್ದರು. 

ಅದಾದ ನಂತರ ಛಿಂದ್ವಾರಾ ಕ್ಷೇತ್ರದಿಂದ ಒಂಬತ್ತು ಬಾರಿ ಕಮಲನಾಥ್‌ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಂದಿನಿಂದಲೂ ಕಾಂಗ್ರೆಸ್‌ ಮತ್ತು ನೆಹರೂ–ಗಾಂಧಿ ಕುಟುಂಬದ ಮೇಲಿನ ತಮ್ಮ ನಿಷ್ಠೆ ಬದಲಿಸಿಲ್ಲ.

ತುರ್ತು ಪರಿಸ್ಥಿತಿ ನಂತರ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮನೆ ಸೇರಿದ್ದ ಇಂದಿರಾ ಬೆನ್ನಿಗೆ ಕಮಲನಾಥ್‌ ನಿಂತಿದ್ದರು. ಅಂದು ಅಜ್ಜಿಗೆ ಕಮಲ್‌ ತೋರಿದ ನಿಷ್ಠೆಗೆ ಇಂದು ಮೊಮ್ಮಗ ರಾಹುಲ್‌ ಗಾಂಧಿ ಉಡುಗೊರೆ ನೀಡಿದ್ದಾರೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಹುದ್ದೆಗೆ 72 ವರ್ಷದ ಕಮಲನಾಥ್‌ ಮತ್ತು 47 ವರ್ಷದ ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಪೈಪೋಟಿ ಇತ್ತು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್‌ ‘ಅನುಭವ’ಕ್ಕೆ ಮಣೆ ಹಾಕಿದೆ.

ಇದೇ ಏಪ್ರಿಲ್‌ನಲ್ಲಿ ಜೋತಿರಾದಿತ್ಯ ಸಿಂಧಿಯಾ ಬದಲಿಸಿ ಕಮಲನಾಥ್‌ ಅವರನ್ನು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದಕ್ಕೂ ಮೊದಲು ಅವರು ಕೇಂದ್ರ ಸಚಿವ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

ಕಮಲನಾಥ್‌ ಮೂಲತಃ ಮಧ್ಯ ಪ್ರದೇಶದವರಲ್ಲ. ಅವರ ತಂದೆ ಮಹೇಂದ್ರ ನಾಥ್‌ ಉತ್ತರ ಪ್ರದೇಶದ ಕಾನ್ಪುರದ ಉದ್ಯಮಿ. ಪ್ರತಿಷ್ಠಿತ ಡೆಹ್ರಾಡೂನ್‌ನ ಡೂನ್‌ ಶಾಲೆ ಮತ್ತು ಕೋಲ್ಕತ್ತದ ಸೇಂಟ್‌ ಕ್ಸೇವಿಯರ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !