ಶನಿವಾರ, ಆಗಸ್ಟ್ 24, 2019
28 °C
ಕಾಶ್ಮೀರವಾಸಿ ಕನ್ನಡತಿಯ ಮನದಾಳದ ಮಾತು

ಕಾಶ್ಮೀರಕ್ಕೆ ಬನ್ನಿ: ಕನ್ನಡತಿ ಸುಜಾತಾ ಆಹ್ವಾನ

Published:
Updated:

ನವದೆಹಲಿ: ‘ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ಹಾಗೂ 35 ‘ಎ’ ಕಲಂ ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಪ್ರೇರಕವಾಗಲಿದೆ’.

24 ವರ್ಷಗಳ ಹಿಂದೆ ಕಾಶ್ಮೀರದ ಶ್ರೀನಗರ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಅಲ್ಲಿಯೇ ವಾಸಿಸುತ್ತಿರುವ ಕನ್ನಡತಿ ಸುಜಾತಾ ಅವರ ಅಭಿಪ್ರಾಯವಿದು.

ಪ್ರಧಾನಿ ಮೋದಿ ಕೈಗೊಂಡ ಮಹತ್ವದ ನಿರ್ಧಾರ ಸಂತಸ ತಂದಿದೆ. ನಿತ್ಯವೂ ಪ್ರತಿಭಟನೆ, ಬಂದ್‌ನಿಂದ ಬಸವಳಿದಿದ್ದ ಕಾಶ್ಮೀರದ ಬಹುತೇಕ ಜನ ಈ ನಿರ್ಧಾರವನ್ನು ಸ್ವಾಗತಿಸಲಿದ್ದಾರೆ. ರಾಜ್ಯ ಇನ್ನು ಅಭಿವೃದ್ಧಿಯಾಗಲಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತರ ರಾಜ್ಯಗಳ ಜನರನ್ನು ಗೌರವಿಸುವ ಕಾಶ್ಮೀರದ ಶೇ 75ರಷ್ಟು ಜನರು ಈ ನಿರ್ಣಯವನ್ನು ಖಂಡಿತ ಬೆಂಬಲಿಸಲಿದ್ದಾರೆ. ಸಂವಿಧಾನದ 35 ‘ಎ’ ಕಲಂ ರದ್ದತಿಯಿಂದ ಇನ್ನು ಮುಂದೆ ಇತರ ರಾಜ್ಯದವರೂ ಕಾಶ್ಮೀರದಲ್ಲಿ ನಿರಾಳವಾಗಿ ನೆಲೆಸಬಹುದು. ಆಸ್ತಿ ಖರೀದಿಸಬಹುದು. ದೇಶ ಒಂದೇ ಎಂಬ ಭಾವನೆ ಉಂಟುಮಾಡುವ ಈ ತೀರ್ಮಾನ ಒಳ್ಳೆಯ ನಡೆಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಆತಿಥ್ಯಕ್ಕೆ ಹೆಸರಾಗಿರುವ ಕಾಶ್ಮೀರದ ಜನ ಅನ್ಯ ಧರ್ಮೀಯರನ್ನೂ ಪ್ರೀತಿಯಿಂದ ಕಾಣುತ್ತಾರೆ. ಪ್ರವಾಸಿಗರನ್ನು ಗೌರವಿಸುತ್ತಾರೆ. ಐತಿಹಾಸಿಕ ತೀರ್ಮಾನದಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ. ಆ ಮೂಲಕ ಕಣಿವೆ ರಾಜ್ಯದ ಅಭಿವೃದ್ಧಿಯಾಗಲಿದೆ ಎಂಬ ಆಶಯ ಅವರದು.

‘ಒಳ್ಳೆಯವರು, ಕೆಟ್ಟವರು ಎಲ್ಲೆಡೆ ಇರುತ್ತಾರೆ. ಇಲ್ಲಿನ ಯುವಜನತೆ ಕೆಲವು ಪ್ರತ್ಯೇಕತಾವಾದಿಗಳ ಪ್ರಚೋದನೆಗೆ ಒಳಗಾಗಿ ಸೇನೆಯ ಸಿಬ್ಬಂದಿ ಮೇಲೆ ಕಲ್ಲು ತೂರುತ್ತಿದ್ದರು. ಆದರೆ, ಈಗ ಅಂಥವರ ಮನಃಸ್ಥಿತಿಯೂ ಬದಲಾಗಿದೆ. ನಾವು ಎದುರಿಸಿರುವ ಕಷ್ಟವನ್ನು ನಮ್ಮ ಮಕ್ಕಳು ಎದುರಿಸುವುದು ಬೇಡ ಎಂಬ ಅನಿಸಿಕೆ ಬಹುತೇಕರದ್ದಾಗಿದೆ’ ಎನ್ನುತ್ತಾರೆ ಸುಜಾತಾ.


ಸುಜಾತಾ

‘ನಮ್ಮದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಅಂಕನಳ್ಳಿ ಗ್ರಾಮ. ತಂದೆ– ತಾಯಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ರಾಮನಗರದ ಗೌಸಿಯಾ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಓದುತ್ತಿದ್ದ ಕಾಶ್ಮೀರದ ಮಹಮ್ಮದ್‌ ಸಲೀಂ ಅವರೊಂದಿಗಿನ ಸ್ನೇಹ ಮದುವೆಗೆ ಪ್ರೇರೇಪಿಸಿತ್ತು. ಎರಡೂ ಕುಟುಂಬದವರ ಒಪ್ಪಿಗೆ ಪಡೆದೇ 1995ರಲ್ಲಿ ಮದುವೆಯಾಗಿ ಶ್ರೀನಗರದಲ್ಲೇ ವಾಸಿಸುತ್ತಿರುವ ನಮಗೆ, 11ನೇ ತರಗತಿ ಓದುತ್ತಿರುವ ಮಗಳು ಇದ್ದಾಳೆ. ಅವಿಭಕ್ತ ಕುಟುಂಬದ ಭಾಗವಾಗಿರುವ ನನಗೆ ಧರ್ಮ ಎಂದಿಗೂ ಸಮಸ್ಯೆಯಾಗಿಲ್ಲ’ ಎಂದು ದೈಹಿಕ ಶಿಕ್ಷಣದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುಜಾತಾ ಒತ್ತಿಹೇಳಿದರು.

ಶ್ರೀನಗರದಲ್ಲಿ ಕನ್ನಡ ಸಂಘ ಸ್ಥಾಪಿಸಬೇಕು. ಆ ಮೂಲಕ ಪ್ರವಾಸಕ್ಕೆ ಬರುವ ಕನ್ನಡಿಗರಿಗೆ, ಸೇನೆಯಲ್ಲಿ ಕೆಲಸ ಮಾಡುವ ಕರ್ನಾಟಕದ ಸೈನಿಕರಿಗೆ ನೆರವಾಗಬೇಕು ಎಂಬ ಆಸೆ ಇದೆ ಎಂದು ಅವರು ತಿಳಿಸಿದರು.

Post Comments (+)