ಶನಿವಾರ, ಡಿಸೆಂಬರ್ 14, 2019
25 °C
ಉತ್ತರಾಖಂಡದ ಮಾದರಿ ಅನುಸರಿಸಲು ಕರ್ನಾಟಕ ಸರ್ಕಾರ ಉತ್ಸುಕ

ಪೊಲೀಸ್ ಶ್ವಾನಪಡೆಗೆ ಸೇರ್ಪಡೆ: ರಾಜ್ಯದಲ್ಲೂ ಬೀದಿನಾಯಿಗಳಿಗೆ 'ಗೌರವ' ನಿರೀಕ್ಷೆ

ಗೌತಮ್ ಧೀರ್ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಪೊಲೀಸ್‌ ಇಲಾಖೆಯ ಶ್ವಾನಪಡೆಗೆ ಬೀದಿನಾಯಿಗಳನ್ನು ಸೇರ್ಪಡೆ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದಲ್ಲಿ, ಶ್ರೇಷ್ಠ ತಳಿಯ ಶ್ವಾನಗಳನ್ನು ಮಾತ್ರ ಪೊಲೀಸ್ ಶ್ವಾನಪಡೆಗೆ ಸೇರ್ಪಡೆ ಮಾಡುವ ಪರಿಪಾಟ ಬದಲಾಗಲಿದೆ. 

ಶೋಧ, ರಕ್ಷಣಾ ಕಾರ್ಯಗಳಿಗೆ ಬೀದಿನಾಯಿಗಳನ್ನು ಬಳಸಿಕೊಳ್ಳಬಹುದು. ಪೊಲೀಸ್ ಇಲಾಖೆಗೆ ಇವುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ಮಾಹಿತಿ ನೀಡಲಾಗಿದೆ. ಈ ಯೋಜನೆ ಜಾರಿಯಾದಲ್ಲಿ, ಉತ್ತಮ ತಳಿಯ ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳುವುದೂ ಸೇರಿದಂತೆ ಹಲವು ಸಕಾರಾತ್ಮಕ ಯತ್ನಗಳಿಗೆ ಇದು ಪ್ರೇರಣೆಯಾಗಲಿದೆ.

ಪೊಲೀಸ್ ಪಡೆಗೆ ಶ್ವಾನಗಳನ್ನು ಸೇರ್ಪಡೆ ಮಾಡಿಕೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಉತ್ತರಾಖಂಡ ರಾಜ್ಯದ್ದು. ಆಯ್ಕೆ ಮಾಡಿಕೊಂಡಿರುವ ಶ್ವಾನಗಳಿಗೆ ಮೂರು ತಿಂಗಳ ತರಬೇತಿ ನೀಡಲಾಗುತ್ತಿದ್ದು, ಕೆಲವೇ ವಾರಗಳಲ್ಲಿ ಅವು ಕರ್ತವ್ಯಕ್ಕೆ ಹಾಜರಾಗಲಿವೆ ಎಂದು ಉತ್ತರಾಖಂಡ ಐಜಿಪಿ ಸಂಜಯ್ ಗುಂಜ್ಯಾಲ ತಿಳಿಸಿದ್ದಾರೆ.

ವಿಪತ್ತು ನಿರ್ವಹಣೆ ಕುರಿತು ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತು. ಉತ್ತರಾಖಂಡದಲ್ಲಿ ಬೀದಿನಾಯಿಗಳನ್ನು ಬಳಸಿಕೊಂಡು ನಡೆಸಿದ ರಕ್ಷಣೆ ಹಾಗೂ ಶೋಧ ಕಾರ್ಯಾಚರಣೆ ಮತ್ತು ಅದರ ಸಾಫಲ್ಯದ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಬಗ್ಗೆ ಉತ್ಸಾಹ ತೋರಿದವು ಎಂದು ಗುಂಜ್ಯಾಲ ತಿಳಿಸಿದರು. 

ಬೀದಿನಾಯಿಗಳಿಗೆ ತರಬೇತಿ ನೀಡಿದ್ದು, ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ. ಈ ಮಾಹಿತಿಯನ್ನು ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಜತೆ ಹಂಚಿಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.

ಪ್ರತಿಸ್ಪರ್ಧೆ ಒಡ್ಡಬಲ್ಲ ಸಾಮರ್ಥ್ಯ

ಉತ್ತರಾಖಂಡದಲ್ಲಿ ಬೀದಿನಾಯಿಗಳನ್ನು ಪೊಲೀಸ್ ಪಡೆಗೆ ಸೇರಿಸಿಕೊಳ್ಳುವ ಪ್ರಾಯೋಗಿಕ ಯೋಜನೆ ಶುರುವಾಗಿದ್ದು ಆಕಸ್ಮಿಕ. ಡೆಹ್ರಾಡೂನ್‌ನ ಹೊರವಲಯದಲ್ಲಿ ಸಿಕ್ಕ 8 ತಿಂಗಳ ಬೀದಿನಾಯಿಯನ್ನು ಶ್ವಾನಪಡೆಯ ಸನ್‌ ಇನ್ಸ್‌ಪೆಕ್ಟರ್ ಒಬ್ಬರು ದತ್ತು ತೆಗೆದುಕೊಂಡಿದ್ದರು. ಶ್ವಾನಗಳ ಸೇರ್ಪಡೆ ಸಭೆಯಲ್ಲಿ ಬೀದಿನಾಯಿ ಸೇರ್ಪಡೆ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿತು. ಈ ಪೈಕಿ ಒಂದು ನಾಯಿಗೆ ‘ಥೆಂಗ’ ಎಂದು ಹೆಸರಿಡಲಾಯಿತು. ಈ ಶ್ವಾನವು ಉತ್ತಮ ತಳಿಯ ಶ್ವಾನಗಳಿಗೆ ಪ್ರತಿಸ್ಪರ್ಧೆ ಒಡ್ಡುವಷ್ಟು ಸಾಮರ್ಥ್ಯ ಹೊಂದಿದೆ. ಬೀದಿನಾಯಿಗಳನ್ನು ದತ್ತು ಪಡೆಯುವ ಜನರಿಗೆ ಪಾರ್ಕಿಂಗ್ ಶುಲ್ಕ ಹಾಗೂ ತ್ಯಾಜ್ಯದ ಶುಲ್ಕದಿಂದ ವಿನಾಯಿತಿ ನೀಡಲು ಹಿಮಾಚಲ ಪ್ರದೇಶ ಸರ್ಕಾರ ಮುಂದಾಗಿದೆ.

***

ಉತ್ತರಾಖಂಡದ ಪ್ರಾಯೋಗಿಕ ಯೋಜನೆಯನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಉತ್ಸುಕವಾಗಿವೆ

– ಸಂಜಯ್ ಗುಂಜ್ಯಾಲ, ಉತ್ತರಾಖಂಡ ಐಜಿಪಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು