ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಉಗ್ರರ ಕುಲುಮೆ

ಇಸ್ಲಾಮಿಕ್ ಸ್ಟೇಟ್ ಮಾದರಿಯಲ್ಲಿ ಕ್ರಿಯಾಶೀಲವಾಗಿರುವ ಜೈಷ್‌–ಎ– ಮೊಹಮ್ಮದ್‌ ಸಂಘಟನೆ
Last Updated 20 ಆಗಸ್ಟ್ 2019, 7:01 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ಜಗತ್ಪ್ರಸಿದ್ಧ ಟುಲಿಪ್‌ ಹೂ ಅರಳಿದಾಗ ಸೃಷ್ಟಿಯಾಗುವ ಅಸಾಧಾರಣ ಸೊಬಗಿಗೆ ಮಾರು ಹೋದವರೆಲ್ಲ ‘ಆಹಾ ಕೆಂಪು ಕಣಿವೆ’ ಎಂದು ಉದ್ಗಾರ ತೆಗೆಯುವುದು ರೂಢಿ. ಆದರೆ, ಭಾರತದ ಈ ಭೂಶಿರದಲ್ಲಿ ಹರಿದಿರುವ ರಕ್ತದೋಕುಳಿ ಇದಕ್ಕೆ ಮತ್ತೊಂದು ಅರ್ಥದಲ್ಲೂ ‘ಕೆಂಪು ಕಣಿವೆ’ ಎಂಬ ಠಸ್ಸೆಯನ್ನೇ ಒತ್ತಿದೆ.

ಕಾಶ್ಮೀರ ಚರಿತ್ರೆಯ ರಕ್ತಸಿಕ್ತ ಅಧ್ಯಾಯಗಳ ಬಗೆಗೆ ತಿಳಿದಿರುವ ಯಾರೂ ಈ ನೆಲವನ್ನು ಈಗ ‘ಭೂಲೋಕದ ಸ್ವರ್ಗ’ ಎಂದು ಕರೆಯ ಲಾರರು. ‘ಸ್ವರ್ಗ’ವಾಗುವ ಮಾತುಗಳನ್ನೆಲ್ಲ ಬದಿಗಿರಿಸಿ, ಶಾಶ್ವತ ಸ್ಮಶಾನವಾಗಿ ಮಾರ್ಪಡದಿದ್ದರೆ ಅಷ್ಟೇ ಸಾಕು ಎಂದು ಏದುಸಿರು ಬಿಡುತ್ತಿದೆ ಈ ನಾಡು. ಸ್ವಾತಂತ್ರ್ಯ ಸಿಕ್ಕ ಲಾಗಾಯ್ತಿನಿಂದಲೂ ಜೀವಂತ ಜ್ವಾಲಾಮುಖಿಯಾಗಿ ಉಳಿದಿರುವ ಈ ಕಣಿವೆಯಲ್ಲಿ ಆಗಾಗ ನಡೆಯುವ ಸಂಘರ್ಷದಿಂದ ‘ಶಿಲಾಪಾಕ’ ಚಿಮ್ಮುತ್ತಲೇ ಇದೆ. ಅದರ ಅಡಿಯಲ್ಲಿ ಲೆಕ್ಕಕ್ಕೇ ಸಿಗದಷ್ಟು ಹೆಣಗಳೂ ಸಮಾಧಿಯಾಗುತ್ತಲೇ ಇವೆ.

ಹೆಚ್ಚು–ಕಡಿಮೆ ಒಂದು ದಶಕದ ವರೆಗೆ ತನ್ನಲ್ಲಿನ ಹಿಮಚ್ಛಾದಿತ ಪರ್ವತಗಳಂತೆಯೇ ತಣ್ಣಗಿದ್ದ ಈ ಕಣಿವೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಂಡಾಯ ಮತ್ತೆ ಭುಗಿಲೆದ್ದಿದ್ದು, ಸ್ಥಳೀಯ ಹುಡುಗರು ಉಗ್ರರ ಸಂಘಟನೆಗಳ ತೆಕ್ಕೆಗೆ ಜಾರುತ್ತಿದ್ದಾರೆ. ತಮ್ಮ ಬತ್ತಳಿಕೆಯಲ್ಲಿ ಹೊಸ ‘ಅಸ್ತ್ರ’ಗಳನ್ನು ತುಂಬಿಕೊಂಡ ಉಮೇದಿನಿಂದ ಉಗ್ರರು ಸಹ ಸೈನಿಕರ ಮೇಲೆ ಮುಗಿಬೀಳುತ್ತಿದ್ದಾರೆ.

ಪುಲ್ವಾಮಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ವಾರ ‘ಫಿದಾಯಿನ್‌ ಬಾಂಬರ್’ (ಆತ್ಮಹತ್ಯಾ ದಾಳಿಗೆ ಸಿದ್ಧನಾದ ಉಗ್ರ) ವಾಹನದಲ್ಲಿ ಸ್ಫೋಟಕ ತುಂಬಿಕೊಂಡು ಪ್ಯಾರಾಮಿಲಿಟರಿ ಪಡೆಯ ಬಸ್‌ನತ್ತ ನುಗ್ಗಿಸಿದಾಗ, ದೇಶ ಕಳೆದುಕೊಂಡಿದ್ದು 49 ನತದೃಷ್ಟ ಯೋಧರ ಪಡೆಯನ್ನು. ಶಾಂತಿಕಾಲದಲ್ಲಿ ಭಾರತೀಯ ಸೇನೆ ಅನುಭವಿಸಿದ ಬಹುದೊಡ್ಡ ನಷ್ಟ ಇದು.

ಸೈನಿಕರ ಈ ಮಾರಣಹೋಮ ಹಲವು ಪ್ರಶ್ನೆಗಳನ್ನು ಎತ್ತಿದೆ. ಜಮ್ಮು ಮತ್ತು ಕಾಶ್ಮೀರದ ನೆಲದಲ್ಲಿ ಅನೇಕ ಬದಲಾವಣೆಗಳಿಗೂ ಕಾರಣವಾಗಿದೆ. ಸೈನಿಕರ ಮೇಲೆ ಆತ್ಮಹತ್ಯಾ ದಾಳಿಯ ವಿರುದ್ಧ ಸಹಜವಾಗಿಯೇ ದುಃಖ ಮತ್ತು ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

ಪುಲ್ವಾಮಾದಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಅವಲೋಕಿಸಿದರೆ ಪಾಕಿಸ್ತಾನ ಮೂಲದ ‘ಜೈಷ್‌–ಎ ಮೊಹಮ್ಮದ್‌’ ಸಂಘಟನೆ ಕಾಶ್ಮೀರದಲ್ಲಿ ಹೇಗೆ ಮರು ಸಂಘಟಿತವಾಗುತ್ತಿದೆ ಎನ್ನುವುದರ ಸುಳಿವು ಸಿಗುತ್ತವೆ. ಈ ಉಗ್ರರ ಪಡೆಯೂ ಥೇಟ್‌ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಹಾಗೂ ತಾಲಿಬಾನ್‌ ಶೈಲಿಯಲ್ಲಿ ದಾಳಿ ನಡೆಸಲು ಆರಂಭಿಸಿರುವುದು ಹೊಸ ತಲೆನೋವಾಗಿದೆ. ಇರಾಕ್‌ ಮತ್ತು ಸಿರಿಯಾದಲ್ಲಿ ಭದ್ರತಾ ಪಡೆಗಳತ್ತ ಕಾರು ಮತ್ತು ಟ್ರಕ್‌ಗಳಲ್ಲಿ ಐಎಸ್ ಉಗ್ರರು ಇದೇ ರೀತಿ ಸ್ಫೋಟಕಗಳನ್ನು ತುಂಬಿಸಿಕೊಂಡು ನುಗ್ಗಿಸುತ್ತಿದ್ದರು.

ಇಪ್ಪತ್ತೊಂದರ ಹರೆಯದ ಆದಿಲ್‌ ದರ್‌ ಈ ಪೈಶಾಚಿಕ ಕೃತ್ಯದಲ್ಲಿ ‘ಫಿದಾಯಿನ್‌’ ಆಗಿ ಸ್ಫೋಟಗೊಂಡು, ಛಿದ್ರ, ಛಿದ್ರ ಆಗಿರುವ ಉಗ್ರ. ಮುಂಚೆಯೇ ಚಿತ್ರೀಕರಿಸಲಾದ ಆತನ ವಿಡಿಯೊ ಸಂದೇಶವನ್ನು ದಾಳಿಯ ಬಳಿಕ ಜೈಷ್‌ ಸಂಘಟನೆ ಬಿಡುಗಡೆ ಮಾಡಿದೆ. ದಾಳಿ ನಡೆಸಿದ ಮೇಲೆ ಹೀಗೆ ವಿಡಿಯೊ ಸಂದೇಶ ಬಿಡುಗಡೆ ಮಾಡುವುದು ಪಕ್ಕಾ ಐಎಸ್‌ ಶೈಲಿ. ಆದಿಲ್‌, ತಾನು ನೀಡಿರುವ ಭಯಾನಕ ಸಂದೇಶದಲ್ಲಿ ಜನ್ನತ್‌ಗೆ (ಸ್ವರ್ಗ) ಹೊರಟಿರುವ ಕುರಿತು ಹೇಳಿಕೊಂಡಿದ್ದಾನೆ. ಭಾರತೀಯ ‘ನಾಸ್ತಿಕ’ರ ಬಗ್ಗೆ ತನ್ನ ಅಭಿಪ್ರಾಯವನ್ನೂ ಆತ ಕಾರಿಕೊಂಡಿದ್ದಾನೆ.

ಸೇನಾ ಅಧಿಕಾರಿಗಳ ಪ್ರಕಾರ, ಜೈಷ್‌ ಸಂಘಟನೆಯ ರಣತಂತ್ರದಲ್ಲಿ ಇಂತಹ ಕ್ಷಿಪ್ರ ಬದಲಾವಣೆಗೆ ಪಾಕಿಸ್ತಾನದ ಐಎಸ್‌ಐ ಕಾರಣ. ದಕ್ಷಿಣ ಕಾಶ್ಮೀರವೊಂದರಲ್ಲೇ ಜೈಷ್‌ ಸಂಘಟನೆಯ 40 ಜಿಹಾದಿ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಂದಾಜಿಸಲಾಗಿದೆ. ಹೊಸ ಮಾದರಿಯ ದಾಳಿಗಳನ್ನು ನಿಯೋಜಿಸುವಲ್ಲಿ ಐಎಸ್‌ಐ ಹವಣಿ ಸುತ್ತಿದೆ ಎನ್ನುವುದು ಭಾರತೀಯ ಸೇನೆಗೆ ಸಿಕ್ಕಿರುವ ಮಾಹಿತಿ.

ಒಂದೊಮ್ಮೆ ‘ಕಾಶ್ಮೀರ ದಂಗೆ’ ಉತ್ತುಂಗದ ಸ್ಥಿತಿ ತಲುಪಿದ್ದಾಗಲೇ ಇಲ್ಲಿನ ಮುಸ್ಲಿಮರು ಯಾರೂ ಆತ್ಮಹತ್ಯಾ ದಾಳಿಯಂತಹ ಕುಕೃತ್ಯಗಳಿಗೆ ಮುಂದಾಗಿರಲಿಲ್ಲ. ಅಫ್ಗಾನಿಸ್ತಾನ, ಇರಾಕ್‌ ಹಾಗೂ ಸಿರಿಯಾದ ಜನರಿಗಿಂತ ಈ ಕಣಿವೆಯ ಮುಸ್ಲಿಮರ ಧಾರ್ಮಿಕ ದೃಷ್ಟಿಕೋನ ಸಂಪೂರ್ಣ ಭಿನ್ನವಾಗಿದೆ.

ಆದಿಲ್‌ನಂತಹ ಕಾಶ್ಮೀರದ ಸಾವಿರಾರು ಯುವಕರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಅವರ ಕೋಪವನ್ನು ತಣಿಸುವುದು ಹಾಗೂ ಅವರಲ್ಲಿ ಮನೆಮಾಡಿರುವ ಪರಕೀಯ ಮನೋಭಾವವನ್ನು ಹೋಗಲಾಡಿಸುವುದು ಸವಾಲಿನ ಕೆಲಸವಾಗಿದೆ.

ಹೌದು, ಇಲ್ಲಿನ ಯುವಕರು ಈಗ ಯಾರೊಬ್ಬರನ್ನೂ ನಂಬುತ್ತಿಲ್ಲ. ಅವರಿಗೆ ಪಾಕಿಸ್ತಾನದ ಮೇಲಾಗಲಿ, ಭಾರತದ ಮೇಲಾಗಲಿ ಇಲ್ಲವೆ ರಾಜಕೀಯ ಪಕ್ಷಗಳ ಮೇಲಾಗಲಿ ವಿಶ್ವಾಸ ಉಳಿದಿಲ್ಲ. ಘಾಸಿಗೊಂಡಿರುವ, ಒತ್ತಡದಲ್ಲಿರುವ, ರೋಸಿ ಹೋಗಿರುವ ಈ ಮನಗಳಿಗೆ ‘ಉಪದೇಶ’ ಧಾರಾಳವಾಗಿ ಸಿಗುತ್ತಿದೆ. ಅಂತಹ ‘ಉಪದೇಶ’ಗಳಿಗೆ ಮಾರು ಹೋಗುತ್ತಿದ್ದಾರೆ. ಹೆಚ್ಚುತ್ತಿರುವ ಮೂಲಭೂತವಾದ ಉದ್ದೇಶವಾದರೂ ಅದೇ. ಸಾಧ್ಯವಾದಷ್ಟು ಯುವಕರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಬೇಕು ಎನ್ನುವುದು.

ಇನ್ನು ನವದೆಹಲಿಯದು ಕಣ್ಣಿಗೆ ಕಣ್ಣು ಎನ್ನುವಂತಹ ನೀತಿ. ಇದುವರೆಗೆ ನಡೆದ ‘ಆಪರೇಷನ್‌ ಆಲ್‌ಔಟ್‌’ನಿಂದ ಪ್ರಕ್ಷುಬ್ಧ ಸ್ಥಿತಿಯನ್ನೇನೂ ತಿಳಿಗೊಳಿಸಲು ಸಾಧ್ಯವಾಗಿಲ್ಲ. ಒಂದು ಕಡೆ ಕಾಶ್ಮೀರ ದಂಗೆ ಅಡ್ಡಾದಿಡ್ಡಿ ಹಾದಿಯನ್ನು ಹಿಡಿದರೆ, ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಮೇಲಿಂದ ಮೇಲೆ ಕದನವಿರಾಮ ಉಲ್ಲಂಘಿಸಿ ಗುಂಡಿನ ಮಳೆಯನ್ನು ಸುರಿಸುತ್ತಲೇ ಇದೆ. ಎರಡೂ ರೀತಿಯ ಈ ಸಂಘರ್ಷಗಳಲ್ಲಿ ಕಾಶ್ಮೀರ ಉರಿಯುವ ಒಲೆಯ ಮೇಲಿಟ್ಟ ಬೋಗುಣಿಯಂತಾಗಿದೆ.

ಕಣಿವೆಯಲ್ಲಿಯ ಈ ಬೆಳವಣಿಗೆಗಳಿಂದ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಹಾಗೂ ಬೌದ್ಧಿಕವಾದ ಅರಾಜಕತೆ ಸೃಷ್ಟಿಯಾಗಿದ್ದು, ಅದರ ಫಲವನ್ನು ಕಾಶ್ಮೀರಿ ಯುವಕರು ಉಣ್ಣಬೇಕಿದೆ.

ಕಾಶ್ಮೀರಕ್ಕೆ ಶಾಶ್ವತ ಸ್ಮಶಾನ ಭೂಮಿಯಾಗಿ ಪರಿವರ್ತನೆಯಾಗಲು ಇಷ್ಟವಿಲ್ಲ. ಹಾಗೆಯೇ ಸರ್ವಾಧಿಕಾರಿ ಮನೋಭಾವ ಇಲ್ಲವೆ ಚುನಾವಣಾ ರಾಜಕೀಯದ ವಿರುದ್ಧ ಅದರ ಒಡಲಾಳದಲ್ಲಿ ಆಕ್ರೋಶ ಕೂಡ ಮಡುಗಟ್ಟಿದೆ. ಅದಕ್ಕೆ ಈಗ ತುರ್ತಾಗಿ ಬೇಕಿರುವುದು ತನ್ನ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸುವಂತಹ, ಅವುಗಳಿಗೆ ಪರಿಹಾರ ರೂಪಿಸುವಂತಹ, ಸಹಜನ್ಯಾಯ ಒದಗಿಸುವಂತಹ ನವಿರಾದ ನೇವರಿಕೆ. ಅದಕ್ಕಾಗಿ ಹಾತೊರೆಯುತ್ತಿದೆ. ಪ್ರಕ್ಷುಬ್ಧ ಕಾಶ್ಮೀರ ಮತ್ತೆ ಪ್ರೇಮ ಕಾಶ್ಮೀರವಾಗಿ ಅರಳಬೇಕಿದೆ. ರಕ್ತದೋಕುಳಿ ಬದಲು ಟುಲಿಪ್‌ನ ಸುಂದರ ಪುಷ್ಪಗಳಿಗಾಗಿಯೇ ಅದು ಕೆಂಪು ಕಣಿವೆ ಎಂದು ಕರೆಸಿಕೊಳ್ಳಬೇಕಿದೆ.

(ಅನುವಾದ–ಪ್ರವೀಣ ಕುಲಕರ್ಣಿ)

ಇವನ್ನೂ ಓದಿ

ಪುಲ್ವಾಮದಲ್ಲಿ ಉಗ್ರರ ದಾಳಿಗೆ 40 ಯೋಧರು ಹುತಾತ್ಮ (https://www.prajavani.net/stories/national/jammuandkashmir-pulwama-ied-614693.html )

ಪುಲ್ವಾಮ ದಾಳಿ: ಗುಪ್ತಚರ ವೈಫಲ್ಯದ ವಿವರಗಳು (https://www.prajavani.net/stories/national/pulwama-attack-details-614935.html)

‘ಉಗ್ರರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ವಿಫಲವಾದದ್ದೇ ದಾಳಿಗೆ ಕಾರಣ’ (https://www.prajavani.net/stories/national/security-agencies-fail-counter-614815.html)

ಉಗ್ರರ ದಾಳಿಗೆ ಪ್ರಧಾನಿ, ಸಚಿವರಿಂದ ಆಕ್ರೋಶ: ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ (https://www.prajavani.net/stories/national/terrorist-attack-614814.html)

ಘೋರ ದಾಳಿಗೆ ಪ್ರತೀಕಾರ ನೀಡುತ್ತೇವೆ: ಸಿಆರ್‌ಪಿಎಫ್‌ ತೀಕ್ಷ್ಣ ಪ್ರತಿಕ್ರಿಯೆ (https://www.prajavani.net/stories/national/pulwama-attack-heinous-attack-614896.html)

ಯೋಧರ ಹತ್ಯೆ: ಸೇಡಿಗಾಗಿ ತಹತಹ ( https://www.prajavani.net/stories/national/destroy-terror-bases-pakistan-614978.html )

ದಾಳಿ ನಡೆಸಿದ ಉಗ್ರ ಸಂಘಟನೆ ಮುಖ್ಯಸ್ಥ ಅಜರ್‌ಗೆ ಪಾಕ್‌ನಲ್ಲಿ ಪೂರ್ಣ ಸ್ವಾತಂತ್ರ್ಯ (https://www.prajavani.net/stories/national/india-says-pakistan-gave-full-614874.html)

‘ಪಾಕಿಸ್ತಾನ ನಾಶವಾಗದ ಹೊರತು, ವಿಶ್ವ ಶಾಂತಿ–ಪ್ರಾದೇಶಿಕ ಭದ್ರತೆ ಅಸಾಧ್ಯ’ (https://www.prajavani.net/stories/international/unless-pakistan-wiped-out-614875.html )

ಕನಸುಗಾರ ಯೋಧನ ಕಳೆದುಕೊಂಡ ಕೆ.ಎಂ.ದೊಡ್ಡಿ, ಗುಡಿಗೆರೆ ಗ್ರಾಮದಲ್ಲಿ ನೀರವ ಮೌನ (https://www.prajavani.net/stories/stateregional/pulwana-attack-crpf-jawans-rip-614946.html)

ಗುಡಿಗೆರೆ ಗ್ರಾಮದಲ್ಲಿ ಶೋಕಸಾಗರ: ಆಕ್ರಂದನ, ಗುರು ಪತ್ನಿ ರೋದನಕ್ಕೆ ಕಣ್ಣೀರಾದ ಜನ (https://www.prajavani.net/stories/stateregional/pulwana-attack-614941.html)

ಪುಲ್ವಾಮ ಸ್ಫೋಟದ ಹಿಂದೆಯೇ ಸುಳ್ಳು ಸುದ್ದಿಗಳ ಸ್ಫೋಟ! (https://www.prajavani.net/stories/national/false-news-around-palawan-614964.html)

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಐಇಡಿ ಸ್ಫೋಟ; ಸೇನಾಧಿಕಾರಿ ಹುತಾತ್ಮ (https://www.prajavani.net/stories/national/ied-blast-army-officer-killed-615103.html)

ಪಾಕ್‍ನಿಂದ ಆಮದು ಆಗುವ ಎಲ್ಲ ವಸ್ತುಗಳ ಆಮದು ಸುಂಕ ಶೇ.200 ಏರಿಸಿದ ಭಾರತ (https://www.prajavani.net/stories/national/india-raises-customs-duty-all-615186.html)

ಸೈಕಲ್‌ ಏರಿ ಹೋದ ಮಗ ಮರಳಿ ಬರಲಿಲ್ಲ! (https://www.prajavani.net/stories/national/adil-ahmad-man-behind-pulwama-615274.html)

ನಾಡಬಾಂಬ್‌ ಮೊರೆಹೋದ ಉಗ್ರರು; ಸಮರವಾದರೆ ಪರಿಣಾಮ ಘನಘೋರ (https://www.prajavani.net/stories/national/india-pakistan-war-615447.html)

ಫುಲ್ವಾಮಾದಲ್ಲಿ ಉಗ್ರರು; ಗುಂಡಿನ ಚಕಮಕಿಯಲ್ಲಿ ಸೇನೆಯ ಮೇಜರ್‌, 3 ಯೋಧರು ಹುತಾತ್ಮ (https://www.prajavani.net/stories/national/encounter-pulwama-days-after-615477.html)

ಪುಲ್ವಾಮಾ ದಾಳಿ: ಭದ್ರತಾ ಪಡೆಗಳಿಂದ ಶಂಕಿತ ಸಂಚುಕೋರ ಘಾಜಿ ರಶೀದ್ ಹತ್ಯೆ (https://www.prajavani.net/stories/national/pulwama-attack-mastermind-615612.html)

ಯುದ್ಧ ಆರಂಭಿಸುವುದು ಸುಲಭ, ಮುಗಿಸುವುದು ಕಷ್ಟ: ಇಮ್ರಾನ್‌ (https://www.prajavani.net/stories/national/pm-imran-615885.html)

ಪುಲ್ವಾಮಾ ದಾಳಿ: ಎನ್‌ಐಎಗೆ ತನಿಖೆ ಹೊಣೆ, ಹೊಸ ತಂಡ ರಚನೆ (https://www.prajavani.net/stories/national/nia-takes-over-pulwama-attack-616034.html)

ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಸಿಗುವವರೆಗೂ ಮೋದಿ ಆಹಾರ, ನೀರು ಸೇವಿಸಿರಲಿಲ್ಲ' (https://www.prajavani.net/stories/national/narendra-modi-did-not-eat-616393.html)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT