ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಹಣಕಾಸು ನೆರವು ಸ್ವಂತಕ್ಕೆ ಬಳಕೆ

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಎನ್‌ಐಎ ಆರೋಪ
Last Updated 16 ಜೂನ್ 2019, 20:39 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರು ವಿದೇಶದಿಂದ ಪಡೆಯುವ ಹಣಕಾಸು ನೆರವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಿಸಿದೆ.

ವಿದೇಶಗಳಿಂದ ಉಗ್ರರಿಗೆ ಹಣಕಾಸು ನೆರವು ಕುರಿತು ತನಿಖೆ ನಡೆಸಿದ ಎನ್‌ಐಎ, ಪ್ರತ್ಯೇಕತಾವಾದಿಗಳು ಈ ಹಣವನ್ನು ತಮಗೆ ಆಸ್ತಿ ಖರೀದಿಸಲು ಮತ್ತು ವಿದೇಶಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

ಹುರಿಯತ್‌ ಕಾನ್ಫರೆನ್ಸ್‌ ಮತ್ತು ಇತರ ಸಂಘಟನೆಗಳ ಹಲವಾರು ಪ್ರಮುಖ ನಾಯಕರನ್ನು ತನಿಖಾ ಸಂಸ್ಥೆ ವಿಚಾರಣೆಗೊಳಪಡಿಸಿದೆ. ಕಾಶ್ಮೀರ ಕಣಿವೆಯ ಜನರಲ್ಲಿ ಪ್ರತ್ಯೇಕತೆಯ ಭಾವನೆ ಹೆಚ್ಚಿಸಲುಪಾಕಿಸ್ತಾನದಿಂದ ಹಣಕಾಸು ನೆರವು ಪಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎನ್‌ಐಎ ಹೇಳಿದೆ.

ಪ್ರಚೋದನಾತ್ಮಕ ಹೇಳಿಕೆ ನೀಡುವ ದುಕ್ತರನ್‌–ಎ–ಮಿಲ್ಲತ್‌ ನಾಯಕಿ ಆಸಿಯಾ ಅಂದ್ರಾಬಿ ಅವರು ತಾವು ಪಡೆದ ಹಣಕಾಸು ನೆರವನ್ನು ಮಲೇಷ್ಯಾದಲ್ಲಿರುವ ತಮ್ಮ ಪುತ್ರನ ಶೈಕ್ಷಣಿಕ ವೆಚ್ಚಕ್ಕಾಗಿ ಬಳಸಿಕೊಂಡಿದ್ದಾರೆ. ಇವರಿಗೆ ಹಣಕಾಸಿನ ನೆರವು ನೀಡಿರುವ ಜಹೂರ್‌ ವಟಾಲಿಯನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಆಸಿಯಾ ಪುತ್ರ ಮೊಹಮ್ಮದ್‌ ಬಿನ್‌ ಖಾಸಿಂ ಅವರ ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಪಡೆಯಲು ಎನ್‌ಐಎ ಸಂಬಂಧಪಟ್ಟ ಅಧಿಕಾರಿಗಳನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಪ್ರತ್ಯೇಕತಾವಾದಿ ನಾಯಕ ಶಬ್ಬೀರ್‌ ಶಾ ಸಹ ವಿದೇಶಗಳಿಂದ ಪಡೆದ ಹಣಕಾಸು ನೆರವನ್ನು ತಮ್ಮ ಹೊಟೇಲ್‌ ಉದ್ಯಮಕ್ಕೆ ಬಳಸಿಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಹೋರಾಟಕ್ಕೆ ಮತ್ತು ಭಯೋತ್ಪಾದನಾ ಚಟುವಟಿಕೆಗೆ ವಿದೇಶಗಳಿಂದ ಹಣಕಾಸು ನೆರವು ಪಡೆದ ಆರೋಪದ ಮೇಲೆ ಜಮಾತ್‌ ಉದ್‌ ದವಾ, ದುಕ್ತರನ್‌–ಎ–ಮಿಲ್ಲತ್‌, ಲಷ್ಕರ್‌–ಎ–ತಯಬಾ, ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರು ಮತ್ತು ಇತರೆ ಪ್ರತ್ಯೇಕತಾವಾದಿಗಳ ವಿರುದ್ಧ 2017ರ ಮೇ ತಿಂಗಳಿನಲ್ಲಿ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿದೆ. ಜಮಾತ್‌–ಉದ್‌–ದವಾ ನಾಯಕ ಹಫೀಜ್‌ ಮೊಹಮ್ಮದ್‌ ಸಯೀದ್‌, ಹಿಜ್ಬುಲ್‌ ಮುಜಾಹಿದ್ದೀನ್‌ನ ಸಯ್ಯದ್‌ ಸಲಾಹುದ್ದೀನ್‌, 7 ಮಂದಿ ಪ್ರತ್ಯೇಕತಾವಾದಿ ನಾಯಕರು, ಇಬ್ಬರು ಹವಾಲಾ ಎಜೆಂಟರು ಮತ್ತು ಕಲ್ಲು ತೂರಾಟ ನಡೆಸಿದವರು ಸೇರಿ 13 ಮಂದಿ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ.

ಹವಾಲಾ ಹಣ ಹಂಚಿಕೆ: ಪ್ರತ್ಯೇಕತಾವಾದಿಗಳ ನಡುವೆ ಒಡಕು
ಶ್ರೀನಗರ: ಹವಾಲಾ ಮಾರ್ಗದ ಮೂಲಕ ಹಣ ಸಂಗ್ರಹ ಹಾಗೂ ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಜಮ್ಮು–ಕಾಶ್ಮೀರ ಪ್ರತ್ಯೇಕತಾವಾದಿಗಳ ನಡುವೆ ಒಡಕು ಉಂಟಾಗಿತ್ತು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ವಿಚಾರಣೆ ವೇಳೆ ಬಹಿರಂಗಗೊಂಡಿದೆ.

2010ರಲ್ಲಿ ಕಣಿವೆ ರಾಜ್ಯದಲ್ಲಿ ನಡೆದ ಗಲಭೆಯ ಮುಖ್ಯ ಆರೋಪಿ, ಮುಸ್ಲಿಂ ಲೀಗ್‌ನ ಮುಖ್ಯಸ್ಥ ಮಸರತ್‌ ಆಲಂ ಭಟ್‌, ವಿಚಾರಣೆ ವೇಳೆ ಈ ವಿಷಯ ಬಹಿರಂಗಪಡಿಸಿದ್ದಾನೆ ಎಂದು ಎನ್‌ಐಎ ಭಾನುವಾರ ಹೇಳಿದೆ.

ಹವಾಲಾ ಮೂಲಕ ಪಾಕಿಸ್ತಾನದಿಂದ ಬರುತ್ತಿದ್ದ ಹಣ ಪ್ರತ್ಯೇಕತಾವಾದಿಗಳಿಗಲ್ಲದೇ, ಸೈಯದ್‌ ಅಲಿ ಗಿಲಾನಿ ಸೇರಿದಂತೆ ಹುರಿಯತ್‌ನ ಇತರ ನಾಯಕರಿಗೆ ವರ್ಗಾವಣೆಯಾಗುತ್ತಿತ್ತು ಎಂದು ಮಸರತ್‌ ಹೇಳಿದ್ದಾಗಿ ಎನ್‌ಐಎ ವಕ್ತಾರರೊಬ್ಬರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್‌ ಮಲಿಕ್‌, ದುಖ್‌ತ್ರನ್‌–ಎ–ಮಿಲಿಯತ್‌ ಮುಖ್ಯಸ್ಥೆ ಆಸಿಯಾ ಅಂದ್ರಾಬಿ, ಶಬ್ಬೀರ್‌ ಶಾ ಹಾಗೂ ಮಸರತ್‌ ಅವರನ್ನು ಎನ್‌ಐಎ ಬಂಧಿಸಿದೆ.

‘ಯಾಸಿನ್‌ ಮಲಿಕ್‌, ಗಿಲಾನಿ, ಮಿರ್ವೇಜ್‌ ಉಮರ್‌ ಫಾರೂಕ್‌ ಅವರನ್ನು ಒಳಗೊಂಡ ಜಂಟಿ ಪ್ರತಿರೋಧ ನಾಯಕತ್ವ (ಜೆಆರ್‌ಎಲ್‌) ಸಂಘಟನೆಗಾಗಿ ವರ್ತಕರಿಂದ ಹಾಗೂ ಇತರ ಮೂಲಗಳಿಂದ ಹಣ ಸಂಗ್ರಹಿಸಲಾಗಿತ್ತು. ಜನಜೀವನವನ್ನು ಅಸ್ತವ್ಯಸ್ತಗೊಳಿಸಲು, ಹಿಂಸಾರೂಪದ ಪ್ರತಿಭಟನೆ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದ ಗೆಡಿಸುವ ಸಲುವಾಗಿ 2016ರಲ್ಲಿ ಕಣಿವೆ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಈ ಹಣ ಸಂಗ್ರಹಿಸಲಾಗಿತ್ತು ಎಂದು ಮಲಿಕ್‌ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾನೆ’ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT