ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ: ರಾಜ್ಯಪಾಲರ ವಿರುದ್ಧವೇ ನಿರ್ಣಯ ಮಂಡಿಸಲು ಮುಂದಾದ ಕೇರಳ ಕಾಂಗ್ರೆಸ್

ಕಾಂಗ್ರೆಸ್ ನಿರ್ಧಾರ ಸ್ವಾಗತಿಸುತ್ತೇನೆಂದ ಆರಿಫ್‌ ಮೊಹಮ್ಮದ್‌ ಖಾನ್‌
Last Updated 25 ಜನವರಿ 2020, 13:08 IST
ಅಕ್ಷರ ಗಾತ್ರ

ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಕೇರಳ ಕಾಂಗ್ರೆಸ್ ಹಾಗೂ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ನಡುವೆ ಜಟಾಪಟಿ ಪ್ರಾರಂಭವಾಗಿದೆ.

‘ಕೇರಳ ವಿಧಾನಸಭೆಯು ಸಿಎಎ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿರುವ ರಾಜ್ಯಪಾಲರ ವಿರುದ್ಧ ನಿಲುವಳಿ ಮಂಡಿಸಲು ಅನುಮತಿ ಕೋರಿ ಸಭಾಧ್ಯಕ್ಷರಿಗೆ ನೋಟಿಸ್ ನೀಡಿರುವುದಾಗಿ’ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ನ ರಮೇಶ್‌ ಚೆನ್ನಿತ್ತಲ ಶನಿವಾರ ತಿಳಿಸಿದರು.

‘ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ಉಲ್ಲಂಘಿಸಿರುವ ರಾಜ್ಯಪಾಲರು, ಶಾಸನ ಸಭೆಯ ನಿರ್ಣಯವನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಹೀಗಾಗಿ ಅವರನ್ನು ವಾಪಸ್‌ ಕಳುಹಿಸಬೇಕು’ ಎಂದು ರಮೇಶ್‌ ಹೇಳಿದರು.

‘ಬಿಜೆಪಿ ಶಾಸಕರೂ ನಿರ್ಣಯದ ವಿರುದ್ಧವಾಗಿ ಮತ ಹಾಕಿಲ್ಲ. ಆದರೆ, ರಾಜ್ಯಪಾಲರು ಈ ನಿರ್ಣಯವು ಅಸಂವಿಧಾನಿಕ ಎಂದು ಬಹಿರಂಗವಾದ ಹೇಳಿಕೆ ನೀಡುತ್ತಿದ್ದಾರೆ’ ಎಂದು ಅವರು ಹೇಳಿದರು.

ನಿರ್ಣಯಕ್ಕೆ ಸ್ವಾಗತ: ಕಾಂಗ್ರೆಸ್‌ ನಿರ್ಧಾರವನ್ನು ಸ್ವಾಗತಿಸಿರುವ ರಾಜ್ಯಪಾಲರು, ‘ನಾನು ಸಂವಿಧಾನದ ನಿಯಮದಂತೆ ನಡೆಯುತ್ತಿದ್ದೇನೆ’ ಎಂದಿದ್ದಾರೆ.

‘ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಮುಕ್ತವಾಗಿದ್ದಾರೆ. ನಾನು ಸಾಂವಿಧಾನಿಕವಾಗಿ ರಾಜ್ಯದ ಮುಖ್ಯಸ್ಥ. ಸರ್ಕಾರಕ್ಕೆ ಸಲಹೆ ನೀಡುವುದು, ಎಚ್ಚರಿಸುವುದು, ಪ್ರೋತ್ಸಾಹಿಸುವುದು ನನ್ನ ಕರ್ತವ್ಯ. ನನಗೆ ಮಾಹಿತಿ ನೀಡದೇ ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವು ದೂರು ದಾಖಲಿಸಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT