ಗುರುವಾರ , ಫೆಬ್ರವರಿ 27, 2020
19 °C
ಕೇರಳ ಸರ್ಕಾರ ನೀತಿಗಳ ಭಾಷಣದಲ್ಲಿ ಪ್ರಸ್ತಾಪ: ಮುಖ್ಯಮಂತ್ರಿ ಕೋರಿಕೆಗೆ ಮನ್ನಣೆ

ಸಿಎಎ ವಿರೋಧಿ ಹೇಳಿಕೆ ಓದಿದ ರಾಜ್ಯಪಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ಬುಧವಾರ ರಾಜ್ಯ ಸರ್ಕಾರದ ನೀತಿಗಳನ್ನು ಒಳಗೊಂಡ ಭಾಷಣ ಮಂಡಿಸಿದ ರಾಜ್ಯಪಾಲ ಅರೀಫ್‌ ಮೊಹಮ್ಮದ್‌ ಖಾನ್‌, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಸದನವು ಸರ್ವಾನುಮತದಿಂದ ಕೈಗೊಂಡಿದ್ದ ನಿರ್ಣಯವನ್ನು ಓದಿದರು.

ಸಿಎಎ ಕುರಿತು ಸದನ ಕೈಗೊಂಡಿದ್ದ ನಿರ್ಣಯ ಮತ್ತು ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯಪಾಲರು, ಈ ವಿಷಯವನ್ನು ಒಳಗೊಂಡಿದ್ದ 18ನೇ ಪ್ಯಾರಾ ಓದುವುದಿಲ್ಲ ಎಂದು ಈ ಮೊದಲು ಹೇಳಿದ್ದರು. ಈ ಮೂಲಕ ರಾಜ್ಯ ಸರ್ಕಾರದ ಜತೆ ಸಂಘರ್ಷಕ್ಕಿಳಿದಿದ್ದರು.

‘ಜಾತ್ಯತೀತತೆ ಸಂವಿಧಾನದ ಮೂಲ ಆಶಯವಾಗಿರುವುದರಿಂದ ನಮ್ಮ ಪೌರತ್ವಕ್ಕೆ ಯಾವುದೇ ಧರ್ಮದ ಆಧಾರ ಇಲ್ಲ’ ಎಂದು ರಾಜ್ಯಪಾಲ ಅರೀಫ್‌ ಅವರು ಸಿಎಎ ಕುರಿತು ರಾಜ್ಯ ಸರ್ಕಾರದ ನಿಲುವನ್ನು ಸದನದಲ್ಲಿ ಓದಿದರು.

‘ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಬಲಿಷ್ಠವಾದ ರಾಜ್ಯಗಳು ಮತ್ತು ಬಲಿಷ್ಠವಾದ ಕೇಂದ್ರವು ಒಕ್ಕೂಟ ವ್ಯವಸ್ಥೆಯ ಆಧಾರದ ಸ್ಥಂಭಗಳಾಗಿವೆ. ರಾಜ್ಯಗಳು ವ್ಯಕ್ತಪಡಿಸುವ ನಿಜವಾದ ಅನುಮಾನಗಳನ್ನು ಕೇಂದ್ರ ಸರ್ಕಾರವು, ಸಕಾರಾತ್ಮಕವಾಗಿ ಮತ್ತು ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಪರಿಗಣಿಸಬೇಕು. ಮುಖ್ಯವಾಗಿ ಸಾಂವಿಧಾನಿಕ ಮೌಲ್ಯಗಳು ಒಳಗೊಂಡಾಗ ಮತ್ತು ಅಪಾರ ಸಂಖ್ಯೆಯ ನಾಗರಿಕರು ಆತಂಕ ಮತ್ತು ಅನುಮಾನಗಳನ್ನು ವ್ಯಕ್ತಪಡಿಸಿದಾಗ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಸರ್ಕಾರದ ನೀತಿಗಳನ್ನು ಒಳಗೊಂಡಿರುವ ಭಾಷಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುರಿಂದ ಯಾವುದೇ ವಿಷಯವನ್ನು ತೆಗೆಯಬಾರದು ಮತ್ತು ಸೇರಿಸಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯಪಾಲರಿಗೆ ಬುಧವಾರ ಬೆಳಿಗ್ಗೆ ಪತ್ರ ಬರೆದಿದ್ದರು. ಹೀಗಾಗಿ, ರಾಜ್ಯಪಾಲರು ಸಿಎಎ ಕುರಿತು ಸರ್ಕಾರದ ನಿರ್ಣಯ ಓದಲು ನಿರ್ಧರಿಸಿದರು ಎಂದು ಹೇಳಲಾಗಿದೆ.

***

ಸಿಎಎ ಕುರಿತು ಸದನ ಕೈಗೊಂಡ ನಿರ್ಣಯದ ಬಗ್ಗೆ ಆಕ್ಷೇಪವಿದೆ. ಆದರೂ, ಮುಖ್ಯಮಂತ್ರಿ ಅವರನ್ನು ಗೌರವಿಸಲು ಸಿಎಎ ಕುರಿತು ಸರ್ಕಾರದ ನಿಲುವು ಓದುತ್ತೇನೆ

– ಅರೀಫ್‌ ಮೊಹಮ್ಮದ್‌ ಖಾನ್‌, ರಾಜ್ಯಪಾಲ, ಕೇರಳ

***

ಯುಡಿಎಫ್‌ ಸದಸ್ಯರ ಪ್ರತಿಭಟನೆ, ಬಹಿಷ್ಕಾರ 

ರಾಜ್ಯಪಾಲರು ಸದನವನ್ನು ಪ್ರವೇಶಿಸುವಾಗ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸದಸ್ಯರು, ‘ಸಿಎಎ ರದ್ದುಪಡಿಸಿ, ರಾಜ್ಯಪಾಲರೇ ವಾಪಸ್‌ ಹೋಗಿ, ರಾಜ್ಯಪಾಲರನ್ನು ವಾಪಸ್‌ ಕರೆಸಿಕೊಳ್ಳಿ’ ಎನ್ನುವ ಫಲಕಗಳನ್ನು ಸದನಲ್ಲಿ ಪ್ರದರ್ಶಿಸಿ ಅಡ್ಡಿಪಡಿಸಲು ಯತ್ನಿಸಿದರು. ಸ್ಪೀಕರ್‌ ಅವರ ಮನವೊಲಿಕೆ ಯತ್ನವೂ ವಿಫಲವಾಯಿತು. ಬಳಿಕ, ಮಾರ್ಷಲ್‌ಗಳು ರಾಜ್ಯಪಾಲರನ್ನು ಸುರಕ್ಷಿತವಾಗಿ ವೇದಿಕೆಗೆ ಕರೆ ತಂದರು.

ರಾಜ್ಯಪಾಲರು ಭಾಷಣ ಓದಲು ಆರಂಭಿಸಿದಾಗ ಘೋಷಣೆಗಳನ್ನು ಹಾಕುತ್ತಾ ಸದನದಿಂದ ಹೊರಗೆ ಬಂದ ವಿರೋಧ ಪಕ್ಷದ ಸದಸ್ಯರು ವಿಧಾನಸಭೆ ಗೇಟಿನ ಮುಂದೆ ಧರಣಿ ನಡೆಸಿದರು.

 ಸದನದಿಂದ ಹೊರ ಹೋಗುವಾಗ ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ‘ಇದಕ್ಕಿಂತಲೂ ಕೆಟ್ಟ ಪ್ರತಿಭಟನೆ ನೋಡಿದ್ದೇನೆ’ ಎಂದು ಹೇಳಿದರು.

‘ಕೇರಳ ಜನತೆಯನ್ನು ಅವಮಾನಿಸಿರುವ ರಾಜ್ಯಪಾಲರ ಬಗ್ಗೆ ಮುಖ್ಯಮಂತ್ರಿ ಮೌನವಹಿಸಿದ್ದಾರೆ. ಭಾಷಣವನ್ನು ಪೂರ್ಣ ಓದುವಂತೆ ರಾಜ್ಯಪಾಲರನ್ನು ಮುಖ್ಯಮಂತ್ರಿ ಅವರು ಭಿಕ್ಷೆ ಬೇಡಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತಾಲ್ ಪ್ರತಿಕ್ರಿಯಿಸಿದರು.

‌ಪ್ರತಿಭಟನೆ: ಇಬ್ಬರ ಸಾವು

ಬಹರಾಂಪುರ(ಪಿಟಿಐ): ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಜಲಂಗಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖಂಡರು ಮತ್ತು ನಾಗರಿಕ ಮಂಚ್‌ ಸಂಘಟನೆಯ ಸದಸ್ಯರ ನಡುವೆ ವಾಗ್ವಾದ ನಡೆದು, ಬಳಿಕ ಘರ್ಷಣೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂ ಗುಂಪುಗಳು ಪರಸ್ಪರ ಬಾಂಬ್‌ಗಳನ್ನು ಎಸೆದಿವೆ. ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ ಎಂದಿದ್ದಾರೆ.

‘ಹಿಂಸಾಚಾರದಲ್ಲಿ ಪಕ್ಷದ ಪಾತ್ರವಿಲ್ಲ. ಕಾಂಗ್ರೆಸ್‌ ಮತ್ತು ಸಿಪಿಎಂ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ’ ಎಂದು ಟಿಎಂಸಿ ಸಂಸದ ಅಬು ತಾಹೆರ್‌ ತಿಳಿಸಿದ್ದಾರೆ.

‘ಈ ಕುರಿತು ನ್ಯಾಯಾಂಗ ತನಿಖೆ ನಡೆಯಲಿ. ಇದರಲ್ಲಿ ಪಕ್ಷ ಶಾಮೀಲಾಗಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಮನೋಜ್‌ ಚಕ್ರವರ್ತಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು