ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಆರ್‌ ಪರಿಷ್ಕರಿಸಲು ಸಹಕಾರವಿಲ್ಲ: ಕೇರಳ ಸರ್ಕಾರ

Last Updated 20 ಜನವರಿ 2020, 20:51 IST
ಅಕ್ಷರ ಗಾತ್ರ

ತಿರುವನಂತಪುರ: ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆ ಪ್ರಕ್ರಿಯೆಗೆ ಯಾವುದೇ ಸಹಕಾರ ನೀಡದಿರಲು ಕೇರಳ ಸರ್ಕಾರ ನಿರ್ಧರಿಸಿದೆ.

ಸೋಮವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಎನ್‌ಪಿಆರ್‌ ಪ್ರಕ್ರಿಯೆಯ ಬಗ್ಗೆ ನಾಗರಿಕರಲ್ಲಿ ಆತಂಕವಿದೆ. ಈ ಆತಂಕವನ್ನು ದೂರಮಾಡುವ ‘ಸಾಂವಿಧಾನಿಕ ಜವಾಬ್ದಾರಿ’ ಸರ್ಕಾರದ ಮೇಲಿದೆ. ಹೀಗಾಗಿ ಪರಿಷ್ಕರಣೆ ಪ್ರಕ್ರಿಯೆಗೆ ಸಹಕಾರ ನೀಡಲು ಸಾಧ್ಯವಿಲ್ಲ. ಆದರೆ ಜನಗಣತಿ ಪ್ರಕ್ರಿಯೆಗೆ ಸಹಕಾರ ನೀಡಲಾಗುವುದು’ ಎಂದು ಜನಗಣತಿ ಆಯುಕ್ತರಿಗೆಮಾಹಿತಿ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

‘ಇದರ ಅನುಷ್ಠಾನ ಜನರಲ್ಲಿ ಅಸುರಕ್ಷತೆಯ ಭಾವನೆ ತರಬಹುದು’ ಎಂದು ಸರ್ಕಾರ ತಿಳಿಸಿದೆ.

‘ಸ್ಪಷ್ಟನೆ ತೃಪ್ತಿ ನೀಡಲಾರದು’
ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಕೇರಳ ಸರ್ಕಾರ ದೂರು ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಸರ್ಕಾರದಿಂದ ವರದಿ ಕೇಳಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲುಕೇರಳದ ಮುಖ್ಯ ಕಾರ್ಯದರ್ಶಿ(ಸಿ.ಎಸ್‌) ಟಾಮ್‌ ಜೋಸ್‌ ಸೋಮವಾರ ಖಾನ್‌ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡಿದರು. ‘ಸಿ.ಎಸ್‌ ನೀಡಿದಸ್ಪಷ್ಟನೆಗಳು ನನಗೆ ತೃಪ್ತಿ ನೀಡಿಲ್ಲ’ ಎಂದು ಖಾನ್‌ ಪ್ರತಿಕ್ರಿಯೆ ನೀಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನಾ ರ್‍ಯಾಲಿ
ಸಿಎಎ ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಸೋಮವಾರ ಮಂಡಿ ಹೌಸ್‌ನಿಂದ ಜಂತರ್‌ ಮಂತರ್‌ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ನೂತನ ಪೌರತ್ವ ಕಾಯ್ದೆಯಿಂದ ಸ್ವಾತಂತ್ರ್ಯ ಬೇಕು ಎಂಬ ಘೋಷಣೆಯನ್ನು ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕೂಗಿದರು.

ವಕೀಲರಿಂದಲೂ ವಿರೋಧ: ಬಾಂಬೆ ಹೈಕೋರ್ಟ್‌ ಮುಂಭಾಗದಲ್ಲಿ ಸೋಮವಾರ 50ಕ್ಕೂ ಅಧಿಕ ವಕೀಲರು ಸಂವಿಧಾನದ ಪೀಠಿಕೆಯನ್ನು ಓದಿ ಸಿಎಎಗೆ ವಿರೋಧ ವ್ಯಕ್ತಪಡಿಸಿದರು. ಸಿಎಎ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಜಾತಿ ಸಮೀಕ್ಷೆ ನಡೆಸಿ: ಅಖಿಲೇಶ್‌ ಯಾದವ್‌
ಲಖನೌ (ಪಿಟಿಐ):
‘ಎನ್‌ಪಿಆರ್‌ ಹಾಗೂ ಎನ್‌ಆರ್‌ಸಿ ಬಡವರ ವಿರೋಧಿ. ಇದರ ಬದಲಾಗಿ ಜಾತಿ ಸಮೀಕ್ಷೆ ನಡೆಸಿ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಆಗ್ರಹಿಸಿದ್ದಾರೆ.

ಪಕ್ಷಕ್ಕೆ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿಈ ಹಿಂದೆ ನಡೆದ ಜನಗಣತಿಯನ್ನು ಉಲ್ಲೇಖಿಸಿ ಮಾತನಾಡಿದ ಯಾದವ್‌, ‘ನಾವೆಲ್ಲರೂ ಜಾತಿ ಗಣತಿ ಆಗಬೇಕು ಎಂದು ಆಗ್ರಹಿಸಿದ್ದೆವು. ಆದರೆ ಕಾಂಗ್ರೆಸ್‌ ಇದನ್ನು ಆಗಲು ಬಿಡಲಿಲ್ಲ. ಜಾತಿ ಸಮೀಕ್ಷೆ ಆದರೆ ಹಿಂದೂ–ಮುಸ್ಲಿಂ ಘರ್ಷಣೆ ನಿಲ್ಲಲಿದೆ’ ಎಂದರು. ಈ ಹೇಳಿಕೆಗೆ ಹೆಚ್ಚಿನ ವಿವರಣೆಯನ್ನು ಅವರು ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT