ಭಾನುವಾರ, ಆಗಸ್ಟ್ 25, 2019
21 °C

ಮತ್ತಿನಲ್ಲಿ ಅಪಘಾತ: ಐಎಎಸ್‌ ಅಧಿಕಾರಿ ಸೆರೆ

Published:
Updated:
Prajavani

ತಿರುವನಂತಪುರ: ಐಎಎಸ್‌ ಅಧಿಕಾರಿ ಚಲಾಯಿಸುತ್ತಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ, ಪತ್ರಕರ್ತ ಕೆ.ಎಂ. ಬಷೀರ್‌ (35)ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇಲ್ಲಿನ ಮ್ಯೂಸಿಯಂ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ಅಪಘಾತ ನಡೆದಿದ್ದು, ಈ ಸಂಬಂಧ ಐಎಎಸ್‌ ಅಧಿಕಾರಿ ಡಾ. ಶ್ರೀರಾಮ್‌ ವೆಂಕಟರಾಮನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮ್‌ ಅವರನ್ನು ಸರ್ಕಾರ ಈಚೆಗೆ ಸರ್ವೆ ಇಲಾಖೆಯ ನಿರ್ದೇಕರನ್ನಾಗಿ ನೇಮಕ ಮಾಡಿತ್ತು. ಮಲಪ್ಪುರಂ ಜಿಲ್ಲೆಯ ನಿವಾಸಿ ಬಷೀರ್‌ ಅವರು  ’ಸಿರಾಜ್‌‘ ದಿನಪತ್ರಿಕೆಯ ಬ್ಯೂರೊ ಮುಖ್ಯಸ್ಥರಾಗಿದ್ದರು.


ಬಷೀರ್‌

ಅಪಘಾತ ನಡೆದ ಸಂದರ್ಭದಲ್ಲಿ ಜೊತೆಗಿದ್ದ ಅನಿವಾಸಿ ಭಾರತೀಯ ಉದ್ಯಮಿ ಮಹಿಳೆ ವಹಾ ಫಿರೋಜ್‌ ಕಾರು ಚಲಾಯಿಸುತ್ತಿದ್ದರು ಎಂದು ಶ್ರೀರಾಮ್‌ ತಿಳಿಸಿದ್ದರು.

ಶ್ರೀರಾಮ್‌ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸರು ವಿಚಾರಣೆ ನಡೆಸಿದಾಗ ವಹಾ ಒಪ್ಪಿಕೊಂಡಿದ್ದಾರೆ.

‘ಯಾರು ಕಾರು ಚಲಾಯಿಸಿದ್ದರು ಎಂಬುದರ ಬಗ್ಗೆ ಆರಂಭದಲ್ಲಿ ಗೊಂದಲವಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ಬಳಿಕ ಶ್ರೀರಾಮ್‌ ಅವರೇ ಕಾರು ಚಲಾಯಿಸುತ್ತಿದ್ದರು ಎಂಬುದು ದೃಢಪಟ್ಟಿದೆ‘ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.


ಐಎಎಸ್‌ ಅಧಿಕಾರಿ ಶ್ರೀರಾಂ

ಶ್ರೀರಾಮ್‌ ಅವರ ರಕ್ತದ ಮಾದರಿಯನ್ನು ತಪಾಸಣೆ ನಡೆಸಿದಾಗ ರಕ್ತದಲ್ಲಿ ಆಲ್ಕೋಹಾಲ್‌ ಅಂಶ ಇರುವುದು ದೃಢಪಟ್ಟಿದೆ ಎಂದೂ ತಿಳಿಸಿದ್ದಾರೆ.

Post Comments (+)