ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಪ್ರಚೋದಕ ಟ್ವೀಟ್‌ ಆರೋಪ: ಶೋಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ ಪ್ರಕರಣ 

Last Updated 24 ಜನವರಿ 2020, 12:25 IST
ಅಕ್ಷರ ಗಾತ್ರ

ಬೆಂಗಳೂರು: ‘ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ ಕಾರಣಕ್ಕೆ ಕೇರಳದ ಮಲಪ್ಪುರಂನಲ್ಲಿ ಹಿಂದೂ ಕುಟುಂಬಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ,’ ಎಂದು ಆರೋಪಿಸಿ ಟ್ವೀಟ್‌ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಕೋಮು ಭಾವನೆ ಪ್ರಚೋದಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರ ಟ್ವೀಟ್‌ ಕುರಿತು ಮಲಪ್ಪುರಂನಿವಾಸಿ, ಸುಪ್ರೀಂ ಕೋರ್ಟ್‌ನ ವಕೀಲ ಸುಭಾಷ್‌ ಚಂದ್ರನ್‌ ಕೆ.ಆರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ?

ಬುಧವಾರ ಟ್ವೀಟ್‌ ಮಾಡಿದ್ದ ಶೋಭಾ ಕರಂದ್ಲಾಜೆ ಅವರು ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ‘ಕೇರಳ ಸರ್ಕಾರ ಮತ್ತೊಂದು ಕಾಶ್ಮೀರವಾಗುವುದರತ್ತ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಿದೆ. ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂ ಪಂಚಾಯಿತಿಯ ಹಿಂದೂ ಕುಟುಂಬಗಳು ಸಿಎಎ ಬೆಂಬಲಿಸಿದವು ಎಂಬ ಕಾರಣಕ್ಕೆ ಅವರಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ದೇವರ ಸ್ವಂತ ನಾಡಿನ ಶಾಂತಿಧೂತರ ಈ ಅಸಹಿಷ್ಣುತೆಯನ್ನು ಮಾಧ್ಯಮಗಳು ಪ್ರಸಾರ ಮಾಡಬಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದರು.
ಇದೇ ಟ್ವೀಟ್‌ಗೆ ಸಂಬಂಧಿಸಿದಂತೆ ಕೇರಳದಲ್ಲಿ ಪ್ರಕರಣ ದಾಖಲಾಗಿದೆ.

ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಇತ್ತ ಕೇರಳದ ವಿರುದ್ಧ ಶುಕ್ರವಾರ ಮತ್ತೆರಡು ಟ್ವೀಟ್‌ ಮಾಡಿರುವ ಶೋಭಾ ಕರಂದ್ಲಾಜೆ, ‘ಚೆರುಕುನ್ನು ಗ್ರಾಮದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳದ ಕೇರಳ ಸರ್ಕಾರ, ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ. ಪೂರ್ವಾಗ್ರಹ ಪೀಡಿತವಾದ ಎಡ ಸರ್ಕಾರದ ಒತ್ತಡ ತಂತ್ರದ ವಿರುದ್ಧ ಒಂದಾಗಲು ಇದು ಸಕಾಲ,’ ಎಂದು ಅವರು ಬರೆದುಕೊಂಡಿದ್ದಾರೆ.

‘ಲೋಕಸಭೆಯ ಎರಡೂ ಸದನಗಳಲ್ಲಿ ಸಿಎಎ ಅಂಗೀಕಾರವಾಗಿದೆ. ಸಿಎಎಯನ್ನು ಬೆಂಬಲಿಸುತ್ತಿರುವವರಿಗೆ ವ್ಯವಹಾರ, ಕೆಲಸ, ಮೂಲಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ. ಕೇರಳದಲ್ಲಿರುವ ಎಡ ಸರ್ಕಾರ ಇದೆಲ್ಲದರ ಬಗ್ಗೆ ಜಾಣ ಕುರುಡಾಗಿದೆ. ಆದರೆ, ಇದರ ವಿರುದ್ಧ ಮಾತನಾಡಿದ ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅವರು ಆಕ್ರೋಶ ಗೊಂಡಿದ್ದಾರೆ.

ಇನ್ನು ಚೆರುಕುನ್ನು ಗ್ರಾಮದ ಸಮಸ್ಯೆ ಕುರಿತು ಮಾತನಾಡಿರುವ ಅಲ್ಲಿನ ಪೊಲೀಸರು, ‘ಗ್ರಾಮದಲ್ಲಿ ಒಂದು ವರ್ಷದಿಂದಲೂ ನೀರಿನ ಸಮಸ್ಯೆ ಇದೆ. ವ್ಯಕ್ತಿಯೊಬ್ಬ ತನ್ನ ಬೋರ್‌ವೆಲ್‌ನಿಂದ ಸ್ಥಳೀಯರಿಗೆ ನೀರು ಪೂರೈಸುತ್ತಿದ್ದ. ಆದರೆ, ಪಂಪ್‌ಸೆಟ್‌ಗೆ ವಿದ್ಯುತ್‌ ಅನ್ನು ಕೃಷಿ ಕಾರಣಕ್ಕೆ ನೀಡಲಾಗಿತ್ತು. ಈ ಕುರಿತು ವಿದ್ಯುತ್‌ ಮಂಡಳಿ ಆತನಿಗೆ ನೋಟಿಸ್‌ ನೀಡಿದೆ. ಕೃಷಿಯೇತರ ಕಾರಣಕ್ಕೆ ಪಂಪ್‌ ಸೆಟ್‌ ಬಳಸದಂತೆ ಆತನಿಗೆ ವಿದ್ಯುತ್‌ ತಾಕೀತು ಮಾಡಿದೆ. ಹೀಗಾಗಿ ಆತ ನೀರು ಪೂರೈಕೆ ನಿಲ್ಲಿಸಿದ್ದಾನೆ,’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT