ಮಂಗಳವಾರ, ಮೇ 18, 2021
23 °C
ಮಹಾಮಳೆಯಿಂದ ತತ್ತರಿಸಿರುವ ರಾಜ್ಯದ ಮುಂದಿದೆ ಭಾರಿ ಸವಾಲುಗಳು

₹2,600 ಕೋಟಿ ವಿಶೇಷ ಪ್ಯಾಕೇಜ್‌ಗೆ ಬೇಡಿಕೆ ಸಲ್ಲಿಸಲು ಕೇರಳ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ತಿರುವನಂತಪುರ: ಮಹಾಮಳೆಯಿಂದ ತತ್ತರಿಸಿರುವ ಕೇರಳ ಪುನರ್ವಸತಿ ಮತ್ತು ಪರಿಹಾರ ಕಾರ್ಯಾಚರಣೆಗೆ ₹2,600 ಕೋಟಿಯ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲು ಸಿದ್ಧವಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಣ ಮತ್ತು ವಿವಿಧ ಯೋಜನೆಗಳ ಸ್ವರೂಪದಲ್ಲಿ ವಿಶೇಷ ಪ್ಯಾಕೇಜ್‌ ಅನ್ನು ಒದಗಿಸಬೇಕು ಎಂದು ಮನವಿ ಸಲ್ಲಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯದ ಜಿಡಿಪಿಯ ಮೇಲೆ ಪಡೆಯಬಹುದಾದ ಸಾಲದ ಮಿತಿಯನ್ನು ಏರಿಕೆ ಮಾಡಿ ಎಂದೂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಕೇರಳವು ತನ್ನ ಜಿಡಿಪಿಯ ಶೇ 3ರಷ್ಟು ಮೊತ್ತವನ್ನು ಮಾತ್ರ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯಬಹುದು.

‘ಜಿಡಿಪಿ ಮೇಲಿನ ಸಾಲದ ಪ್ರಮಾಣವನ್ನು ಶೇ 4.5ಕ್ಕೆ ಏರಿಸಿ. ಇದರಿಂದ ರಾಜ್ಯವು ಹೆಚ್ಚುವರಿಯಾಗಿ ₹ 10,500 ಕೋಟಿ ಸಂಗ್ರಹಿಸಬಹುದು’ ಎಂದು ಅವರು ಕೇಳಿಕೊಂಡಿದ್ದಾರೆ.

ಕೇಂದ್ರ ಸರ್ಕಾರವು ಕೇರಳಕ್ಕೆ ಈವರೆಗೆ ಒಟ್ಟು ₹ 680 ಕೋಟಿ ತುರ್ತು ಪರಿಹಾರ ಘೋಷಿಸಿದ್ದು ಅದರಲ್ಲಿ ₹600 ಕೋಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ರಾಜ್ಯದ 14 ಜಿಲ್ಲೆಗಳಲ್ಲಿ 13 ಜಿಲ್ಲೆಗಳು ಮಳೆಗೆ ತತ್ತರಿಸಿವೆ. ಅಷ್ಟೂ ಜಿಲ್ಲೆಗಳಲ್ಲಿ ರಸ್ತೆ, ವಸತಿ, ಕುಡಿಯುವ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತಿತರ ಮೂಲಸೌಕರ್ಯ ಬಹುತೇಕ ನಾಶವಾಗಿವೆ. ಬಹುತೇಕ ಮನೆಗಳನ್ನು ಹೊಸದಾಗಿಯೇ ನಿರ್ಮಿಸಬೇಕಿದೆ. ಇದಕ್ಕಾಗಿ ಭಾರಿ ಪ್ರಮಾಣದ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಕೇಂದ್ರದ ನೆರವಿಲ್ಲದೆ ಈ ಕಾರ್ಯ ಅಸಾಧ್ಯ ಎಂದು ಪಿಣರಾಯಿ ತಿಳಿಸಿದ್ದಾರೆ.

ಟೋಲ್‌ ಇಲ್ಲ: ಕೇರಳದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ (ಶುಲ್ಕ) ಸಂಗ್ರಹವನ್ನು ಆಗಸ್ಟ್‌ 26ರವರೆಗೆ ಸ್ಥಗಿತಗೊಳಿಸಲಾಗಿದೆ.

ಮುಳುಗಡೆ ನಕ್ಷೆಯೇ ಇಲ್ಲ:ಕೇರಳದ 61 ಅಣೆಕಟ್ಟುಗಳ ಮುಳುಗಡೆ ಪ್ರದೇಶದ ನಕ್ಷೆಯನ್ನು  ಸರ್ಕಾರ ಸಿದ್ಧಪಡಿಸಿಲ್ಲ ಎಂದು 2017ರಲ್ಲೇ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತುಂಬಿ ತುಳುಕುತ್ತಿವೆ ಪರಿಹಾರ ಕೇಂದ್ರಗಳು

ಮಳೆ ನೀರಿನಿಂದ ಆವೃತ್ತವಾಗಿ ಬಹುತೇಕ ಮನೆಗಳಿಗೆ ತೀವ್ರ ಹಾನಿಯಾಗಿದೆ. ಹೀಗಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದವರು ಇನ್ನೂ ತಮ್ಮ ಮನೆಗಳಿಗೆ ಹಿಂತಿರುಗಿಲ್ಲ. ನೀರಿನಿಂದ ಶಿಥಿಲಗೊಂಡಿರುವ ಮನೆಗಳು ಕುಸಿಯುವ ಅಪಾಯವಿದೆ. ಹೀಗಾಗಿ ಹಲವರು ಪರಿಹಾರ ಕೇಂದ್ರಗಳಲ್ಲೇ ಉಳಿದಿದ್ದಾರೆ.

₹54.11 ಲಕ್ಷ – ನೆರೆಯಿಂದ ತೊಂದರೆಗೆ ಒಳಗಾದವರು

5,645 – ಪರಿಹಾರ ಕೇಂದ್ರ

₹12,47 ಲಕ್ಷ – ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದವರು

₹2.12 ಲಕ್ಷ – ಆಶ್ರಯ ಪಡೆದ ಮಹಿಳೆಯರ ಸಂಖ್ಯೆ

₹1 ಲಕ್ಷ – ಆಶ್ರಯ ಪಡೆದ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ

ಕೊಚ್ಚಿ ವಿಮಾನ ನಿಲ್ದಾಣದ ನಷ್ಟ ₹ 220 ಕೋಟಿ
ಮಳೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ (ಸಿಐಎಎಲ್) ₹ 220 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ದುರಸ್ತಿ ಕಾರ್ಯ ಆರಂಭಿಸಲಾಗಿದ್ದು, ನಿಲ್ದಾಣವು ಮುಂದಿನ ವಾರ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಮಳೆ ನೀರು ಮತ್ತು ಪೆರಿಯಾರ್ ನದಿಯ ಪ್ರವಾಹದಿಂದ ವಿಮಾನ ನಿಲ್ದಾಣವು ಜಲಾವೃತವಾಗಿತ್ತು. ರನ್‌ವೇ, ಟರ್ಮಿನಲ್‌ಗಳು, ಹ್ಯಾಂಗರ್‌ಗಳು ಎಲ್ಲವೂ ನೀರಿನಲ್ಲಿ ಮುಳುಗಿದ್ದವು. ಈ ಎಲ್ಲಕ್ಕೂ ಹಾನಿಯಾಗಿದೆ. ನಿಲ್ದಾಣದ ಸುತ್ತ ಇದ್ದ ಸುಮಾರು 2.5 ಕಿ.ಮೀ. ಉದ್ದದ ಕಾಂಪೌಂಡ್ ಉರುಳಿಹೋಗಿದೆ’ ಎಂದು ಸಿಐಎಎಲ್ ಅಧಿಕಾರಿಗಳು ಹೇಳಿದ್ದಾರೆ.

‘ಇದು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದ ವಿಶ್ವದ ಏಕೈಕ ವಿಮಾನ ನಿಲ್ದಾಣ. ನೆರೆಯಿಂದ ನಿಲ್ದಾಣದ ಸೌರವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನಿಲ್ದಾಣದ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟುಹೋಗಿವೆ. ರನ್‌ವೇ ದೀಪಗಳೂ ಹಾಳಾಗಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೆರವು, ವಿನಾಯಿತಿಗಳು...

₹ 20,000 ಕೋಟಿ ಅಂದಾಜು ನಷ್ಟ

₹ 680 ಕೋಟಿ – ಕೇಂದ್ರ ಸರ್ಕಾರ ಘೋಷಿಸಿರುವ ತುರ್ತು ಪರಿಹಾರದ ಮೊತ್ತ

₹ 700 ಕೋಟಿ ಯುಎಇ ಸರ್ಕಾರ ಘೋಷಿಸಿರುವ ನೆರವಿನ ಮೊತ್ತ

* ಕೇರಳದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ (ಶುಲ್ಕ) ಸಂಗ್ರಹವನ್ನು ಆಗಸ್ಟ್‌ 26ರವರೆಗೆ ಸ್ಥಗಿತಗೊಳಿಸಲಾಗಿದೆ

* ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಕೇರಳದ ನೆರವಿಗೆಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ₹ 2 ಕೋಟಿ ನೀಡಿದೆ

* ಮಾರುತಿ ಸುಜುಕಿ ಇಂಡಿಯಾ ಕಂಪನಿಯ ನೌಕರರು ₹ 1.5 ಕೋಟಿ ನೆರವು ನೀಡಿದ್ದಾರೆ

* ಬಜಾಜ್ ಆಟೊ ₹ 2 ಕೋಟಿ ದೇಣಿಗೆ ನೀಡಿದೆ

* ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ₹ 1 ಕೋಟಿ ದೇಣಿಗೆ ಒದಗಿಸಿದೆ

* ಟಿವಿಎಸ್ ಮೋಟರ್ ಕಂಪನಿ ₹ 1 ಕೋಟಿ ದೇಣಿಗೆ ನೀಡಿದೆ

* ಟಾಟಾ ಮೋಟರ್ಸ್, ನಿಸಾನ್ ಮತ್ತು ಬಿಎಂಡಬ್ಲ್ಯು ಕಂಪನಿಗಳು ಮಳೆಯಲ್ಲಿ ಹಾನಿಯಾಗಿರುವ ತಮ್ಮ ಗ್ರಾಹಕರ ಕಾರುಗಳ ಸರ್ವಿಸ್‌ನಲ್ಲಿ ವಿನಾಯಿತಿ ನೀಡುವುದಾಗಿ ಘೋಷಿಸಿವೆ

‘ಸುಸ್ಥಿತಿಗೆ ಬೇಕಿದೆ ಹಲವು ತಿಂಗಳು’
‘ಮೂಲಸೌಕರ್ಯಗಳನ್ನು ಮರುಕಲ್ಪಿಸುವ ಭಾರಿ ಸವಾಲು ನಮ್ಮ ಮುಂದೆ ಇದೆ. ಈ ತಿಂಗಳ ಕೊನೆಯಲ್ಲಿ ವಿಶೇಷ ಅಧಿವೇಶನ ಕರೆದು, ಈ ಸಂಬಂಧ ನಿರ್ಧಾರಕ್ಕೆ ಬರಲಾಗುವುದು’ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

‘ನೆರೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಹೀಗಾಗಿ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರವಾಹ ಇಳಿದಿರುವ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಅಗತ್ಯವಿದ್ದವರಿಗೆ ಔಷಧಗಳನ್ನು ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದ್ದಾರೆ. ‘ಕೇಂದ್ರ ಸರ್ಕಾರ ಈಗಾಗಲೇ 50 ಟನ್‌ ಔಷಧ ಒದಗಿಸಿದೆ. ಹಲವು ಖಾಸಗಿ ಕಂಪನಿಗಳೂ ಔಷಧ ಮತ್ತು ವೈದ್ಯಕೀಯ ಸೇವೆಯನ್ನು ಒದಗಿಸುತ್ತಿವೆ. ಇದರ ಹೊರತಾಗಿಯೂ ಮತ್ತಷ್ಟು ಔಷಧಗಳ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ನೀರು ಇಳಿದ ರಸ್ತೆ, ಹೊಲಗದ್ದೆ ಮತ್ತು ಮನೆಗಳಲ್ಲಿ ಭಾರಿ ಪ್ರಮಾಣದ ಕೆಸರು ಶೇಖರವಾಗಿದೆ. ಅವಶೇಷ ತೆರವು ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ. ಭೂಕುಸಿತದ ಅವಶೇಷಗಳನ್ನು ತೆರವು ಮಾಡಿ, ರಸ್ತೆಗಳನ್ನು ಮತ್ತೆ ಸುಸ್ಥಿತಿಗೆ ತರಲು ಇನ್ನೂ ಹಲವು ತಿಂಗಳು ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಇನ್ನೊಂದೆಡೆ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದಾರೆ.

ಮುಳುಗಡೆ ನಕ್ಷೆಯೇ ಇಲ್ಲ
ನವದೆಹಲಿ: ಕೇರಳದ 61 ಅಣೆಕಟ್ಟುಗಳ ಮುಳುಗಡೆ ಪ್ರದೇಶದ ನಕ್ಷೆಯನ್ನು  ಸರ್ಕಾರ ಸಿದ್ಧಪಡಿಸಿಲ್ಲ ಎಂದು 2017ರಲ್ಲೇ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಣೆಕಟ್ಟೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟರೆ ಯಾವೆಲ್ಲಾ ಪ್ರದೇಶ ಜಲಾವೃತವಾಗಬಹುದು ಎಂಬ ವಿವರಗಳನ್ನು ಮುಳುಗಡೆ ನಕ್ಷೆಗಳು ಹೊಂದಿರುತ್ತವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು