ಸೋಮವಾರ, ಏಪ್ರಿಲ್ 6, 2020
19 °C

ಲಿಂಗ ಸಮಾನತೆ:‘ಸುಪ್ರೀಂ’ಗೆ ರಾಷ್ಟ್ರಪತಿ ಕೋವಿಂದ್ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಿಂಗ ಸಮಾನತೆಯ ನ್ಯಾಯದ ಗುರಿ ತಲುಪುವಲ್ಲಿ ಭಾರತದ ನ್ಯಾಯಾಂಗವು ಶ್ಲಾಘನೀಯ ಕೆಲಸ ಮಾಡಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಸದಾ ‘ಕ್ರಿಯಾಶೀಲ ಮತ್ತು ಪ್ರಗತಿಪರ’ವಾಗಿ ಕೆಲಸ ಮಾಡಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

ಅಂತರರಾಷ್ಟ್ರೀಯ ನ್ಯಾಯಾಂಗ ಸಮಾವೇಶ 2020ರಲ್ಲಿ ಕೋವಿಂದ್‌ ಮಾತನಾಡಿದರು. ಪ್ರಗತಿಪರ ಮತ್ತು ಸಾಮಾಜಿಕ ‍ಪರಿವರ್ತನೆಯ ಕೆಲಸಕ್ಕೆ ಸುಪ್ರೀಂ ಕೋರ್ಟ್‌ ನಾಯಕತ್ವ ವಹಿಸಿದೆ ಎಂದ ಅವರು, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ, ಸುಪ್ರೀಂ ಕೋರ್ಟ್‌ ಎರಡು ದಶಕಗಳ ಹಿಂದೆ ರೂಪಿಸಿದ ವಿಶಾಖಾ ಮಾರ್ಗದರ್ಶಿ ಸೂತ್ರವನ್ನು ಉಲ್ಲೇಖಿಸಿದರು. 

‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಎರಡು ದಶಕಗಳ ಹಿಂದೆ ಮಾರ್ಗದರ್ಶಿ ಸೂತ್ರ ರೂಪಿಸಲಾಗಿದೆ. ಈಗ, ಸೇನೆ ಯಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ ಮಾನ ನೀಡುವ ತೀರ್ಪು ಪ್ರಕಟವಾಗಿದೆ. ಹೀಗೆ ಪ್ರಗತಿಪರವಾದ ಸಾಮಾಜಿಕ ಪರಿವರ್ತನೆಯ ಮುಂಚೂಣಿಯಲ್ಲಿ ಸುಪ್ರೀಂ ಕೋರ್ಟ್‌ ಇದೆ’ ಎಂದು ಹೇಳಿದರು. 

ಸುಪ್ರೀಂ ಕೋರ್ಟ್‌ನ ತೀರ್ಪು ಗಳು ಭಾರತದ 9 ಭಾಷೆಗಳಲ್ಲಿ ಲಭ್ಯ ವಾಗುವಂತೆ ಮಾಡಿದ ಕ್ರಮವನ್ನೂ ಕೋವಿಂದ್‌ ಮೆಚ್ಚಿಕೊಂಡರು. ಭಾರತದ ಭಾಷಾ ವೈವಿಧ್ಯದ ದೃಷ್ಟಿ ಯಿಂದ ಇದೊಂದು ಅಸಾಧಾರಣ ಕ್ರಮ ಎಂದೂ ಹೇಳಿದರು. 

ಪರಿಸರ ರಕ್ಷಣೆ ಮತ್ತು ಸುಸ್ಥಿರ ಅಭಿ ವೃದ್ಧಿಯ ವಿಚಾರದಲ್ಲಿ ನ್ಯಾಯಾಂಗದ ಪಾತ್ರವನ್ನು ಉಲ್ಲೇಖಿಸಿದ ಅವರು, ಇದು ವಿವಿಧ ದೇಶಗಳ ಗಮನ ಸೆಳೆದಿದೆ ಎಂದರು. ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ದಿನಗಳಲ್ಲಿ ನ್ಯಾಯಾಂಗವು ಹೊಸ ಸವಾಲುಗಳನ್ನು ಎದುರಿಸಬೇಕಿದೆ. ದತ್ತಾಂಶ ರಕ್ಷಣೆ ಮತ್ತು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಹೊಸ ಪ್ರಶ್ನೆಗಳು ಈಗ ಎದುರಾಗಿವೆ ಎಂದು ವಿವರಿಸಿದರು. 

ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಜಗತ್ತಿನ ವಿವಿಧೆಡೆಯ ಕೋರ್ಟ್‌ಗಳು ಉಲ್ಲೇಖಿಸುತ್ತಿವೆ. ಹಾಗಾಗಿ, ಸ್ವತಂತ್ರ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲಿಗೆ ಭಾರತವು ದಾರಿದೀಪವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹೇಳಿದರು. 

ಸಂಧಾನ ಮಾತುಕತೆಗಳ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಅವರು ಮಾತನಾಡಿದರು. ನ್ಯಾಯದಾನದ ಬದ್ಧತೆಯು ವಿವಿಧ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನಡುವಣ ಸಮಾನ ತಂತು ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು