ಮಂಗಳವಾರ, ಫೆಬ್ರವರಿ 7, 2023
27 °C

ಸಂಬಂಧಿಕರು ಹಿಂಜರಿದಾಗ ಹಿಂದೂ ಮಹಿಳೆಯ ಚಟ್ಟಕ್ಕೆ ಹೆಗಲುಕೊಟ್ಟ ಮುಸ್ಲಿಂ ಯುವಕರು

ಪಿಟಿಐ Updated:

ಅಕ್ಷರ ಗಾತ್ರ : | |

indore

ನವದೆಹಲಿ: ಲಾಕ್‌ಡೌನ್ ಹೊತ್ತಲ್ಲಿ ಹಿಂದೂ ಮಹಿಳೆಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ಯಲು ಯಾವುದೇ ವಾಹನ ಸಿಗದೇ ಇದ್ದಾಗ ನೆರೆಹೊರೆಯ ಮುಸ್ಲಿಂ ವ್ಯಕ್ತಿಗಳು ಚಟ್ಟ ಹೊತ್ತು ಸ್ಮಶಾನಕ್ಕೆ ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಕೊರೊನಾವೈರಸ್ ಭಯದಿಂದಾಗಿ ಮಹಿಳೆಯ ಸಂಬಂಧಿಕರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿಲ್ಲ. ಈ ವೇಳೆ ಮಹಿಳೆಯ ಮಕ್ಕಳ ನೆರವಿಗೆ ಬಂದವರು ಊರಿನ ಮುಸ್ಲಿಂ ಯುವಕರು. ಈ ಯುವಕರು ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿದ್ದು, ಮಾಸ್ಕ್ ಧರಿಸಿದ ಇವರು 2.5 ಕಿಮೀ ದೂರದಲ್ಲಿರುವ  ಸ್ಮಶಾನಕ್ಕೆ ಚಟ್ಟ ಹೊತ್ತು ಸಾಗಿದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.  ಮುಸ್ಲಿಂ ಯುವಕರು ಚಟ್ಟ ಹೊತ್ತು ಸಾಗುತ್ತಿರುವ  ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ 65ರ ಹರೆಯದ ಮಹಿಳೆ ಸೋಮವಾರ ಸಾವಿಗೀಡಾಗಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಮಹಿಳೆಯ ಚಟ್ಟ ಹೊತ್ತು ಸಾಗಿದ ಮುಸ್ಲಿಂ ಯುವಕರನ್ನು ಅಭಿನಂದಿಸಿದ ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್, ಈ ಯುವಕರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದಿದ್ದಾರೆ.

ಮಹಿಳೆಯ ಇಬ್ಬರು ಗಂಡು ಮಕ್ಕಳೊಂದಿಗೆ ಚಟ್ಟಕ್ಕೆ ಹೆಗಲುಕೊಟ್ಟ ಮುಸ್ಲಿಂ ಸಮುದಾಯದವರ ಕಾರ್ಯ ಶ್ಲಾಘನೀಯ. ಅವರು ಸಮಾಜಕ್ಕೆ ಮಾದರಿ. ನಮ್ಮ ಗಂಗಾ-ಜಮುನಿ ಸಂಸ್ಕೃತಿಯನ್ನು ಇದು ಬಿಂಬಿಸುತ್ತಿದ್ದು, ಈ ರೀತಿಯ ಕಾರ್ಯಗಳು ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವವನ್ನು ಮೂಡಿಸುತ್ತವೆ ಎಂದು ಕಮಲ್‌ನಾಥ್ ಟ್ವೀಟಿಸಿದ್ದಾರೆ.

ನಮಗೆ ಆ ಮಹಿಳೆ ಬಾಲ್ಯದಿಂದಲೇ ಪರಿಚಿತರು, ಇದು ನಮ್ಮ ಕರ್ತವ್ಯ ಎಂದು ಮುಸ್ಲಿಂ ಯುವಕರು ಪ್ರತಿಕ್ರಿಯಿಸಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು