ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಬಂಧನ ವಿಸ್ತರಣೆ ಶನಿವಾರ ನಿರ್ಧಾರ: ಪ್ರಧಾನಿ ನರೇಂದ್ರ ಮೋದಿ

Last Updated 9 ಏಪ್ರಿಲ್ 2020, 2:42 IST
ಅಕ್ಷರ ಗಾತ್ರ

ನವದೆಹಲಿ: 21 ದಿನಗಳ ಲಾಕ್‌ಡೌನ್‌ ಅನ್ನು ಇದೇ 14ರ ನಂತರವೂ ಮುಂದುವರಿಸುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ದಿಗ್ಬಂಧನ ವಿಸ್ತರಿಸುವಂತೆ ವಿವಿಧ ವಲಯಗಳಿಂದ ಸಲಹೆ ಬಂದಿರುವುದಾಗಿಯೂ ಅವರು ಹೇಳಿದ್ದಾರೆ.

ರಾಜ್ಯಸಭೆ ಮತ್ತು ಲೋಕಸಭೆಯ ವಿವಿಧ ಪಕ್ಷಗಳ ಸದನ ನಾಯಕರ ಜತೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಜತೆಗೆ ಶನಿವಾರ (ಇದೇ 11) ಸಮಾಲೋಚನೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳುವುದಾಗಿ ಈ ನಾಯಕರಿಗೆ ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ 16 ಪಕ್ಷಗಳ ನಾಯಕರಲ್ಲಿ ಹೆಚ್ಚಿನವರು ಲಾಕ್‌ಡೌನ್‌ ವಿಸ್ತರಣೆಗೆ ಒಲವು ತೋರಿದ್ದಾರೆ. ಈಗಿನ ಸನ್ನಿವೇಶದಲ್ಲಿ ಜನರ ಜೀವ ಉಳಿಸುವುದಕ್ಕೆ ಆದ್ಯತೆ ಕೊಡಬೇಕು ಎಂದು ಪ್ರತಿಪಾದಿಸಿದ್ದಾರೆ.

‘ಇದೇ 14ರಂದು ಎಲ್ಲ ನಿರ್ಬಂಧಗಳನ್ನು ಒಮ್ಮೆಗೇ ತೆರವು ಮಾಡುವುದಿಲ್ಲ ಎಂಬುದನ್ನು ಪ್ರಧಾನಿ ಸ್ಪಷ್ಟ‍ಪಡಿಸಿದ್ದಾರೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಬಿಜೆಡಿ ನಾಯಕ ಪಿನಾಕಿ ಮಿಶ್ರಾ ಹೇಳಿದ್ದಾರೆ.

‘ಸಭೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಶೇ 80ರಷ್ಟು ನಾಯಕರು ದಿಗ್ಬಂಧನ ವಿಸ್ತರಣೆಯ ಪರವಾಗಿ ಮಾತನಾಡಿದ್ದಾರೆ. ಅಂತಿಮ ನಿರ್ಧಾರ ಪ್ರಧಾನಿಗೆ ಬಿಟ್ಟಿದ್ದಾರೆ’ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ತಿಳಿಸಿದ್ದಾರೆ.

ದೇಶದ ಈಗಿನ ಸ್ಥಿತಿಯು ‘ಸಾಮಾಜಿಕ ತುರ್ತುಪರಿಸ್ಥಿತಿ’ಗೆ ಸಮಾನವಾದುದಾಗಿದೆ. ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗಿದೆ. ಪ್ರತಿಯೊಬ್ಬರೂ ಅತೀವ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ಹಲವು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಮತ್ತು ಪರಿಣತರು ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸುವಂತೆ ಕೋರಿದ್ದಾರೆ

- ನರೇಂದ್ರ ಮೋದಿ, ಪ್ರಧಾನಿ

ಏ.14ರ ಬಳಿಕ ಮದ್ಯ ಮಾರಾಟ?

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 14ರ ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಉದ್ದೇಶ ಇದೆ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಎಲ್ಲಾ ರೀತಿಯ ಕಂದಾಯ ವಸೂಲಿ ನಿಂತುಹೋಗಿದೆ. ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮದ್ಯಮಾರಾಟಕ್ಕೆ ಅನುಮತಿ ನೀಡಲು ಚಿಂತನೆ ನಡೆಸಲಾಗುತ್ತಿದೆ. ಮದ್ಯಸೇವನೆ ಅಭ್ಯಾಸ ಮಾಡಿಕೊಂಡಿರುವವರನ್ನು ನಿಯಂತ್ರಿಸುವುದು ಸಹ ಕಷ್ಟ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT